ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ನಟ ವಿನೋದ್ ರಾಜ್ ಆರ್ಥಿಕ ಸಹಾಯ
ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿಗೆ ಅವರು ತೆರಳಿ ನಟ ದರ್ಶನ್ ಜೊತೆ ಮಾತುಕತೆ ನಡೆಸಿ ಬಂದಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು.
ಈ ಹಿಂದೆ ಪತ್ರಕರ್ತ ರವಿ ಬೆಳೆಗೆರೆ ಪುತ್ರಿ ಭಾವನಾ ಬೆಳಗೆರೆ ರೇಣುಕಾಸ್ವಾಮಿ ಮನೆಗೆ ತೆರಳಿ ಸಾಂತ್ವನ ಹೇಳಿದ್ದರು. ಬಳಿಕ ನಟ ಧ್ರುವ ಸರ್ಜಾ ಅಭಿಮಾನಿಗಳು ಹೋಗಿ ಕುಟುಂಬಕ್ಕೆ ನೆರವು ನೀಡಿದ್ದರು. ನಟ ಧ್ರುವ ಕೂಡ ಫೋನ್ ಮಾಡಿ ರೇಣುಕಾಸ್ವಾಮಿ ಕುಟುಂಬಸ್ಥರ ಜೊತೆ ಮಾತನಾಡಿ ಧೈರ್ಯ ತುಂಬಿದ್ದರು. ಇದೀಗ ರೇಣುಕಾಸ್ವಾಮಿ ಮನೆಗೆ ವಿನೋದ್ ರಾಜ್ ಭೇಟಿ ನೀಡಿ ಸಾಂತ್ವನ ಹೇಳಿ 1 ಲಕ್ಷ ರೂ. ಧನಸಹಾಯ ಮಾಡಿದ್ದಾರೆ.

ವಿನೋದ್ ರಾಜ್ -ದರ್ಶನ್ ಭೇಟಿ ಬೆನ್ನಲ್ಲೇ ಮೊದಲು ರೇಣುಕಾಸ್ವಾಮಿ ಮನೆಗೆ ಹೋಗಿ ಸಾಂತ್ವನ ಹೇಳಿ ಎಂದು ನೆಟ್ಟಿಗರು ಆಗ್ರಹಿಸಿದ್ದರು. ಇನ್ನು ಸುದ್ದಿಗಾರರೊಂದಿಗೆ ವಿನೋದ್ ರಾಜ್ ಮಾತನಾಡಿದ್ದಾರೆ. "ಮೃತ ರೇಣುಕಾಸ್ವಾಮಿ ತಮ್ಮ ಮನೆಗೆ ಆಧಾರವಾಗಿದ್ದರು. ಆದರೆ ಇಂದು ಅವರೇ ಕುಟುಂಬದಲ್ಲಿ ಇಲ್ಲ" ಎಂದಿದ್ದಾರೆ.
"ವಯಸ್ಸಾದ ಅಜ್ಜಿ ಇದಾರೆ. ಈಗ ಅವರನ್ನು ನೋಡಿಕೊಳ್ಳೋರು ಯಾರೂ ಇಲ್ಲ, ಜೀವನ ಇಡೀ ಸಂಪಾದನೆ ಹೆಸರು ಮಾಡೋದು ಅಲ್ಲ, ಜೀವನವಿಡೀ ನಾವು ಒಳ್ಳೆಯದನ್ನೇ ಮಾಡಬೇಕು. ತಂದೆ ತಾಯಿಯ ರೂಪದಲ್ಲಿ ದೇವರು ಮನುಷ್ಯ ಜೀವಿಯನ್ನು ಸೃಷ್ಟಿ ಮಾಡುತ್ತಾರೆ. ಕಲಾವಿದರಾದ ನಾವು ಸರಿಯಾಗಿ ನಡೆದುಕೊಳ್ಳಬೇಕು. ನಾವು ತಪ್ಪು ಮಾಡಿದ್ರೂ ಅದು ಸರಿ ನಾ ಅನ್ನೋ ಭಾವನೆ ಜನರಿಗೆ ಬರುತ್ತೆ" ಎಂದು ವಿನೋದ್ ರಾಜ್ ಹೇಳಿದ್ದಾರೆ.
ಇದೇ ವೇಳೆ ದರ್ಶನ್ ಭೇಟಿ ಬಗ್ಗೆಯೂ ವಿನೋದ್ ರಾಜ್ ಪ್ರತಿಕ್ರಿಯಿಸಿದ್ದಾರೆ. "ಜೈಲಲ್ಲಿ ನನ್ನ ಜೊತೆ 5 ಜನ ದರ್ಶನ್‌ರನ್ನು ಭೇಟಿ ಮಾಡಿದ್ರು, ಈ ವೇಳೆ ನಮ್ಮನ್ನು ನೋಡಿ ದರ್ಶನ್ ಭಾವುಕರಾಗಿದ್ದರು. ದರ್ಶನ್ ಭೇಟಿಗೂ ಮುನ್ನ ಇಲ್ಲಿಗೆ ಬರಬೇಕು ಅಂತಿದ್ದೆ. ಆದ್ರೆ ನನಗೆ 7ನೇ ತಾರೀಕು ಮೇಜರ್ ಸರ್ಜರಿ ಆಯ್ತು. ಸುಧಾರಿಸಿಕೊಂಡ ಬಳಿಕ ಅಲ್ಲಿಗೆ ಹೋಗಿದ್ದೆ" ಎಂದು ತಿಳಿಸಿದ್ದಾರೆ.

ರೇಣುಕಾಸ್ವಾಮಿ ತಂದೆ ವಿನೋದ್ ರಾಜ್ ಭೇಟಿ ವೇಳೆ ಭಾವುಕರಾಗಿದ್ದಾರೆ. ಅವನು ನರಳಿದ್ದ ರೀತಿ ಕೇಳಿದ್ರೆ ನಮ್ಮ ಕರುಳು ಕಿತ್ತು ಬರುತ್ತಿದೆ. ನಾವು ಬಹಳ ನೊಂದಿದ್ದೇವೆ
ನನ್ನ ಮನೆತನ ನಾಶವಾಗಿದೆ. ಸರ್ಕಾರಕ್ಕೆ ವಿನಂತಿ ಮಾಡುತ್ತೇವೆ ಸೊಸೆಗೆ ಸರ್ಕಾರಿ ಕೆಲಸ ಕೊಡಿ, ನನ್ನ ಮಗನಿಗೆ ನ್ಯಾಯಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು" ಎಂದು ಆಗ್ರಹಿಸಿದ್ದಾರೆ.
ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.


Click it and Unblock the Notifications











