ಡಾ.ವಿಷ್ಣುವರ್ಧನ್ 14ನೇ ಪುಣ್ಯತಿಥಿ: ವಿಷ್ಣುವರ್ಧನ್ ಪುಣ್ಯಭೂಮಿಯಲ್ಲಿ ಅಭಿಮಾನಿಗಳಿಂದ ರಕ್ತದಾನ, ಅನ್ನದಾನ
ಕನ್ನಡ ಸಿನಿಮಾರಂಗದ ಮೇರುನಟ, ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ 14 ವರ್ಷಗಳು ಕಳೆದಿವೆ. ಡಾ. ವಿಷ್ಣುವರ್ಧನ್ ಅವರ 14 ನೇ ವರ್ಷದ ಪುಣ್ಯಸ್ಮರಣೆ ಬೆಂಗಳೂರು, ಮೈಸೂರಿನಲ್ಲಿ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ವಿಷ್ಣು ಹೆಸರಿನಲ್ಲಿ ಅನ್ನದಾನ, ರಕ್ತದಾನ ಶಿಬಿರಗಳನ್ನು ಮಾಡುತ್ತಿದ್ದಾರೆ.
2009ರ ಡಿಸೆಂಬರ್ 30ರಂದು ಕರುನಾಡಿಗೆ ಬರಸಿಡಿಲು ಬಡಿಯುವ ಸುದ್ದಿಕೊಟ್ಟು ಅವರು ನಮ್ಮನ್ನು ಅಗಲಿದ್ದರು. ಕೋಟ್ಯಂತರ ಅಭಿಮಾನಿಗಳು ಪ್ರೀತಿಯಿಂದ ಸಾಹಸ ಸಿಂಹ ಎಂಬ ಬಿರುದು ನೀಡಿದ್ದ ನಟ ಡಾ. ವಿಷ್ಣುವರ್ಧನ್ ಅವರು ಕನ್ನಡ ಕಲಾಭಿಮಾನಿಗಳನ್ನ ಬಿಟ್ಟು ಹೋಗಿದ್ದರು. ಅವರ ನೆನಪಿನಲ್ಲಿ ವಿಷ್ಣು ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳಿಂದ ಪೂಜೆ
ಇನ್ನು, ವಿಷ್ಣುವರ್ಧನ್ ಪುಣ್ಯಭೂಮಿಗಾಗಿ ಅವರ ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಇನ್ನೂ ಅದು ಸಾಧ್ಯವಾಗಿಲ್ಲ. ಅದರ ಬೆನ್ನಲ್ಲೇ ವಿಷ್ಣು ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ದಾದನ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿದ್ದಾರೆ. ಪುಣ್ಯತಿಥಿ ಅಂಗವಾಗಿ ಹಲವು ಕಡೆಗಳಲ್ಲಿ ರಕ್ತದಾನ, ನೇತ್ರದಾನ, ಅನ್ನದಾನ ಮುಂತಾದ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಅವರಿಗೆ ಪುಣ್ಯಭೂಮಿ ದೊರಕದ ನೋವಿನ ನಡುವೆಯೂ ಅವರ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿನ ಸಮಾದಿ ಬಳಿ ಅನ್ನದಾನ, ರಕ್ತದಾನ ನಡೆಸುತ್ತಿದ್ದಾರೆ. ಇಲ್ಲಿಯೇ ದೀಪೋತ್ಸವದಂತಹ ಕಾರ್ಯಗಳು ನಡೆಯಲಿವೆ. ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ ಇತ್ಯಾದಿ ಬಿರುದುಗಳನ್ನು ಒಡೆದಿರುವ ವಿಷ್ಣು ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ದಾದ ಎಂದು ಕರೆಯುತ್ತಾರೆ.
ವಿಷ್ಣುವರ್ಧನ್ ಸಮಾಧಿ ಬಳಿ ಪೊಲೀಸ್ ಬಿಗಿ ಬಂದೋಬಸ್ತ್
ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಅವರಿಗೆ ಪುಣ್ಯಭೂಮಿ ನೀಡಬೇಕು ಎಂದು ಅಭಿಮಾನಿಗಳು ಹೋರಾಟ ಮಾಡ್ತುತ್ತಿದ್ದಾರೆ. ಹೀಗಾಗಿ, ಈ ವಿಶೇಷ ದಿನದಂದು ವಿಷ್ಣುವರ್ಧನ್ ಸಮಾಧಿ ಬಳಿ ಯಾವುದೇ ಸಮಸ್ಯೆ ಆಗಬಾರದು ಎಂದು ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಡಾಕ್ಟರ್ ವಿಷ್ಣುವರ್ಧನ್ ಅವರು ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕೂಟ ನಟಿಸಿದ್ದಾರೆ. ವಿಷ್ಣು ದಾದನ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದ ಸೆಪ್ಟೆಂಬರ್ 18 ಮತ್ತು ಅವರ ಪುಣ್ಯಸ್ಮರಣೆ ಡಿಸೆಂಬರ್ 30 ಮರೆಯಲಾಗದ ದಿನ.


Click it and Unblock the Notifications











