ಮಹಾರಾಷ್ಟ್ರದಲ್ಲಿ 24 ಕೋಟಿ ರೂ. ಮೌಲ್ಯದ ಜಮೀನು ಖರೀದಿಸಿದ ಯಶ್- ರಾಧಿಕಾ ದಂಪತಿ
ನಟ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ರೀತಿಯ ಬಹುಕೋಟಿ ವೆಚ್ಚದ ಸಿನಿಮಾಗಳನ್ನು ನಿರ್ಮಿಸಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾಗಳನ್ನು ತೆರೆಗ ತರುವ ಪ್ರಯತ್ನ ನಡೀತಿದೆ. 'ಕೆಜಿಎಫ್' ಸಿನಿಮಾ ಹಿಟ್ ಆಗುತ್ತಿದ್ದಂತೆ ಯಶ್ ನಸೀಬು ಬದಲಾಗಿಬಿಡ್ತು. ಕೋಟಿ ಕೋಟಿ ಆದಾಯ ಬರಲು ಆರಂಭವಾಯಿತು. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ಈಗಾಗಲೇ ಸಾಕಷ್ಟು ಕಡೆ ಆಸ್ತಿ ಮಾಡಿದ್ದಾರೆ ಯಶ್. ಇದೀಗ ಕರ್ನಾಟಕ ಬಿಟ್ಟು ಹೊರ ರಾಜ್ಯದಲ್ಲಿ ಭಾರೀ ಮೌಲ್ಯದ ಪ್ರಾಪರ್ಟಿ ಖರೀದಿಸಿರುವುದಾಗಿ ವರದಿಯಾಗಿದೆ. ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 24 ಕೋಟಿ ರೂ. ಕೊಟ್ಟು ಬೀಚ್ ಪಕ್ಕದ ಜಮೀನು ಸ್ವಂತ ಮಾಡಿಕೊಂಡಿದ್ದಾರೆ. ಮುಂಬೈ ಸಮೀಪದ ರಾಯಗಢದ ಅಲಿಬಾಗ್ ತಾಲ್ಲೂಕಿನ ಕಾಮತ್ ಗ್ರಾಮದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಕೃಷಿಭೂಮಿ ಮೇಲೆ ಹೂಡಿಕೆ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಯಶ್ ಆಗಾಗ್ಗೆ ಮುಂಬೈಗೆ ಭೇಟಿ ನೀಡುತ್ತಿದ್ದಾರೆ. ಭಾರತದ ವಾಣಿಜ್ಯ ನಗರಿ ಅವರ ಎರಡನೇ ಮನೆಯಂತಾಗಿಬಿಟ್ಟಿದೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳ ಬಹುತೇಕ ಚಿತ್ರೀಕರಣ ಕೂಡ ಅಲ್ಲೇ ನಡೀತು. ಹಾಗಾಗಿ ಹೆಚ್ಚಿನ ಸಮಯವನ್ನು ಅಲ್ಲಿ ವ್ಯಯಿಸಿದ್ದರು. ಅಲಿಬಾಗ್ ಸುತ್ತಾಮುತ್ತಾ ಕೆಲ ತಾರೆಯರು, ಉದ್ಯಮಿಗಳು ಪ್ರಾಪರ್ಟಿ ಖರೀದಿದ್ದಾರೆ. ಅವರ ಸಾಲಿಗೆ ಇದೀಗ ಯಶ್ ಸೇರಿಕೊಳ್ಳುತ್ತಿದ್ದಾರೆ.
'ಗಜಕೇಸರಿ' ಸಿನಿಮಾ ಬಿಡುಗಡೆಗೂ ಮುನ್ನ ಬೆಂಗಳೂರಿನ ನೈಸ್ ರೋಡ್ ಸಮೀಪ ಯಶ್ ಒಂದು ಮನೆ ಖರೀದಿಸಿದ್ದರು. ಬಳಿಕ ಏರ್‌ಪೋರ್ಟ್ ರೋಡ್‌ನಲ್ಲಿ ಪ್ರೆಸ್ಟೀಜ್ ಗಾಲ್ಫ್‌ಶೈರ್ ಡ್ಯೂಪ್ಲೆಕ್ಸ್ ಫ್ಲಾಟ್ ಸ್ವಂತ ಮಾಡಿಕೊಂಡಿದ್ದರು. ಪತ್ನಿ ಮಕ್ಕಳ ಸಮೇತ ಅಲ್ಲೇ ನೆಲೆಸಿದ್ದಾರೆ. ಇನ್ನು ಹಾಸನದಲ್ಲಿ 80 ಎಕರೆ ತೋಟ ಮಾಡಿದ್ದಾರೆ. ಹಾಸನದ ವಿದ್ಯಾನಗರದಲ್ಲಿ 68 X 70 ವಿಸ್ತೀರ್ಣದ ಮನೆಯನ್ನು ತಾಯಿ ಹೆಸರಿಗೆ ಮಾಡಿದ್ದಾರೆ. ಇದೀಗ ಅಲಿಬಾಗ್‌ನಲ್ಲಿ ಜಮೀನು ಖರೀದಿಸಿದ್ದಾರೆ.
ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ ಯಶ್ ಹಾಗೂ ರಾಧಿಕಾ ದಂಪತಿ ಅಲಿಬಾಗ್ ಬೀಚ್ ಎದುರು 5,289 ಚದರ ಮೀಟರ್ ಜಾಗ ಕೊಂಡುಕೊಂಡಿದ್ದಾರೆ. ಮೇ 18ರಂದು ಆಸ್ತಿ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಇನ್ನು ಜಮೀನದಲ್ಲಿ ಒಂದು ಮನೆ ಕೂಡ ಇದೆ. ರಿಯಲ್ ಎಸ್ಟೇಟ್ ಹೂಡಿಕೆಗೆ ಅದು ಸೂಕ್ತವಾದ ಜಾಗ ಎನಿಸಿಕೊಂಡಿದೆ. ಅದೇ ಕಾರಣಕ್ಕೆ ಹಲವರು ಅಲ್ಲಿ ಆಸ್ತಿ ಖರೀದಿಸುತ್ತಿದ್ದಾರೆ. ಇನ್ನು 24 ಕೋಟಿ ರೂ. ಮೌಲ್ಯದ ಆಸ್ತಿ ವಹಿವಾಟಿಗಾಗಿ ಯಶ್ 1.44 ಕೋಟಿ ರೂ. ಸ್ಟಾಂಪ್ ಡ್ಯೂಟಿ, 60,000 ರೂ. ನೋಂದಣಿ ಶುಲ್ಕ ಹಾಗೂ 5,200 ರೂ. ದಾಖಲೆ ನಿರ್ವಹಣಾ ಶುಲ್ಕ ಪಾವತಿಸಿರುವುದಾಗಿ ವರದಿಯಾಗಿದೆ.
ಬಸ್ ಡ್ರೈವರ್ ಮಗನಾದ ಯಶ್ ಚಿತ್ರರಂಗಕ್ಕೆ ಬಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈಗ ನೂರಾರು ಕೋಟಿ ಆಸ್ತಿ ಗಳಿಸಿದ್ದಾರೆ. ಕೋಟಿ ಕೋಟಿ ಸುರಿದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. 'ಕೆಜಿಎಫ್' ಸಕ್ಸಸ್ ಬೆನ್ನಲ್ಲೇ ಚಾಪ್ಟರ್- 2 ಸಿನಿಮಾ ನಿರ್ಮಾಣದಲ್ಲಿ ಪಾಲುದಾರರಾಗಿದ್ದರು. ಇದೀಗ ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ.
'ಕೆಜಿಎಫ್'-2 ಸಿನಿಮಾ ಬಂದು ಹೋಗಿ 4 ವರ್ಷ ಕಳೆದರೂ ಯಶ್ ನಟನೆಯ ಯಾವುದೇ ಸಿನಿಮಾ ಮತ್ತೆ ತೆರೆಗೆ ಬರಲಿಲ್ಲ. 'ಟಾಕ್ಸಿಕ್' ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ರಾವಣನ ಪಾತ್ರದಲ್ಲಿ ಯಶ್ ನಟಿಸಿರುವುದು ವಿಶೇಷ.


Click it and Unblock the Notifications