Nikhil- Yuva: ನಿಖಿಲ್ ಸಿನಿಮಾ ಸೆಟ್‌ಗೆ ಯುವ ರಾಜ್‌ಕುಮಾರ್ ಸರ್‌ಪ್ರೈಸ್ ಎಂಟ್ರಿ
ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನ ಹೊಸ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಸೆಟ್‌ಗೆ ನಟ ಯುವ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ. 'ಯುವ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರಾಘಣ್ಣನ ಕಿರಿಮಗ ಕೂಡ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರಿನ ಸಪೋಟ ಗಾರ್ಡನ್‌ನಲ್ಲಿ ನಿಖಿಲ್ ಹೊಸ ಸಿನಿಮಾ ಚಿತ್ರೀಕರಣ ನಡೀತಿದೆ. ದಿಢೀರನೆ ಯುವ ರಾಜ್‌ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಜ್ ಸೆಟ್‌ಗೆ ಭೇಟಿ ನೀಡಿದ್ದರು. ನಿಖಿಲ್, ಯುವ, ಸಂತು ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಆ ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೆ ಶಿವಣ್ಣ ಹಾಗೂ ಧ್ರುವ ಸರ್ಜಾ ಕೂಡ ನಿಖಿಲ್ ಹೊಸ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದರು. ಆ ಫೋಟೊಗಳು ವೈರಲ್ ಆಗಿತ್ತು. ಇದೀಗ ದೊಡ್ಮನೆ ನಟ ಯುವ ರಾಜ್‌ಕುಮಾರ್ ಸರದಿ. ಇನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ 'ಯುವ' ಸಿನಿಮಾ ನಿರ್ಮಾಣವಾಗುತ್ತಿದ್ದು ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಆ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ.
ಕಳೆದ ತಿಂಗಳು ನಗರದ ಹಳೇ ಕಟ್ಟಡವೊಂದರಲ್ಲಿ ನಿಖಿಲ್ ನಟನೆಯ ಪ್ರೊಡಕ್ಷನ್ ನಂ.28 ಸಿನಿಮಾ ಚಿತ್ರೀಕರಣ ನಡೆದಿತ್ತು. ಶಿವಣ್ಣ ಪತ್ನಿ ಗೀತಾ ಸಮೇತ ಸೆಟ್‌ಗೆ ಹೋಗಿದ್ದರು. ಕೆಲ ಹೊತ್ತು ಇದ್ದು ಮಾತನಾಡಿ ಬಂದಿದ್ದರು. ಬಳಿಕ ನಿಖಿಲ್ ಕಾರಿನವರೆಗೂ ಬಂದು ಶಿವಣ್ಣ ದಂಪತಿಯನ್ನು ಬೀಳ್ಕೊಟ್ಟಿದ್ದರು.
ಒಂದ್ಕಡೆ ರಾಜಕೀಯರಂಗದಲ್ಲೂ ಬಹಳ ಬ್ಯುಸಿಯಾಗಿರುವ ನಿಖಿಲ್ ಬಿರುಸಿನ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಕಳೆದ ವಾರವಷ್ಟೇ ನಟ ಧ್ರುವ ಸರ್ಜಾ ಇದೇ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದರು. ನಿಖಿಲ್ ನಟನೆಯ ಹೊಸ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಸಂಸ್ಥೆ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದೆ. ಚಿತ್ರದಲ್ಲಿ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ನಿಖಿಲ್ ಸೋತಿದ್ದರು. ಜೆಡಿಎಸ್ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೂ ರಾಜಿನಾಮೆ ನೀಡಿದ್ದರು. ಇದರ ಬೆನ್ನಲ್ಲೇ ನಿಖಿಲ್ ತಂದೆ ಮಾಜಿ ಸಿಎಂ ಕುಮಾರಸ್ವಾಮಿ ಸಿನಿಮಾ ಕಡೆ ಹೆಚ್ಚು ಗಮನ ಹರಿಸಲು ಮಗನಿಗೆ ಹೇಳಿರುವುದಾಗಿ ಹೇಳಿದ್ದರು. ಇದನ್ನೆಲ್ಲಾ ನೋಡಿ ನಿಖಿಲ್ ಸಂಪೂರ್ಣವಾಗಿ ಸಿನಿಮಾಗಳಲ್ಲಿ ಗುರ್ತಿಸಿಕೊಳ್ಳುತ್ತಾರೆ. ರಾಜಕೀಯರಂಗದಿಂದ ದೂರಾಗುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಕೊನೆಗೆ ಸ್ವತಃ ನಿಖಿಲ್ ಅದಕ್ಕೆ ಸ್ಪಷ್ಟನೆ ನೀಡಿದ್ದರು.
ಯುವ ರಾಜ್‌ಕುಮಾರ್ ಸಿನಿ ಎಂಟ್ರಿ ಬಗ್ಗೆ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆಯಿದೆ. 'ಯುವ ರಣಧೀರ ಕಂಠೀರವ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಯಿತು. ಹಾಗಾಗಿ ಹೊಂಬಾಳೆ ಸಂಸ್ಥೆ ಯುವ ಲಾಂಚಿಂಗ್ ಸಿನಿಮಾ ಜವಾಬ್ದಾರಿ ವಹಿಸಿಕೊಂಡಿತ್ತು. 'ಯುವ' ಟೈಟಲ್‌ನಲ್ಲೇ ಸಿನಿಮಾ ನಿರ್ಮಾಣವಾಗುತ್ತಿದೆ. ಇದೊಂದು ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.


Click it and Unblock the Notifications











