Ram Pran Pratishtha: ಬಾಲರಾಮನನ್ನು ಜಗ್ಗೇಶ್, ಗಣೇಶ್, ರಾಧಿಕಾ ಕುಮಾರಸ್ವಾಮಿ ಸ್ವಾಗತಿಸಿದ್ದು ಹೀಗೆ!
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಇಡೀ ದೇಶವೇ ಕಾತುರದಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದು, ಹಲವು ಸೆಲೆಬ್ರಿಟಿಗಳು ಈಗಾಗಲೇ ರಾಮಧಾಮಕ್ಕೆ ತಲುಪಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ ಸೇರಿ ಹಲವರು ಅಯೋಧ್ಯೆಯಲ್ಲಿದ್ದಾರೆ. ಇದೇ ವೇಳೆ ಅಯೋಧ್ಯೆಗೆ ಹೋಗದ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ತಮ್ಮದೇ ಆದ ರೀತಿಯಲ್ಲಿ ರಾಮನನ್ನು ಸ್ವಾಗತಿಸಿದ್ದಾರೆ.
ರಾಜ್ಯದಲ್ಲಿಯೇ ಕುಳಿತಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳುತ್ತಿರುವ ಅನೇಕ ನಟ ನಟಿಯರು ವಿಶೇಷವಾಗಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ. ನಟ, ಸಂಸದ ಜಗ್ಗೇಶ್, ಗೋಲ್ಡನ್ ಸ್ಟಾರ್ ಗಣೇಶ್, ನಟಿ ರಾಧಿಕಾ ಕುಮಾರಸ್ವಾಮಿ ರಾಮ ಭಜನೆ, ಹಾಡುಗಳ ಮೂಲಕ ರಾಮನಿಗೆ ಸ್ವಾಗತ ಬಯಸಿದ್ದಾರೆ. ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹನುಮನ ಪ್ರಾಣ ಹೇ ಪ್ರಭು ರಘುರಾಮ ಎಂದ ಜಗ್ಗೇಶ್
ನಟ, ಸಂಸದ ಜಗ್ಗೇಶ್ ದೊಡ್ಡ ದೈವ ಭಕ್ತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಮಹೋನ್ನತ ಕಾರ್ಯಕ್ರಮದ ಸಂದರ್ಭದಲ್ಲಿ ಜೈಶ್ರೀರಾಮ್ ಎಂದು ಹೇಳುತ್ತಲೇ "ಹನುಮನ ಪ್ರಾಣ ಹೇ ಪ್ರಭು ರಘುರಾಮ..." ಎಂಬ ಹಾಡನ್ನು ಹಾಡಿ ರಾಮನಿಗೆ ಸ್ವಾಗತ ಕೋರಿದ್ದಾರೆ. ರಾಮನಿಗಾಗಿ, ಸಂಕೋಚ ಬಿಟ್ಟು ಹಾಡುವ ಮುಖಾಂತರ ರಾಮನ ಬರಮಾಡಿಕೊಳ್ಳೋಣ ಸ್ನೇಹಿತರೆ ಎಂದಿದ್ದಾರೆ.
"ಹಾಡುವ ಮುಖಾಂತರ ರಾಮನ ಬರಮಾಡಿಕೊಳ್ಳೋಣ ಸ್ನೇಹಿತರೆ. ಶಾಸ್ತ್ರೀಯವಾಗಿ ಬಂದರು ಸರಿ ಇಲ್ಲದಿದ್ದರು ಸರಿ ರಾಮನಿಗಾಗಿ
ಸಂಕೋಚ ಬಿಟ್ಟು ಯತ್ನಿಸಿ. ನಿಮ್ಮ ಜಾಲತಾಣದಲ್ಲಿ ಟ್ಯಾಗ್ ಮಾಡಿ ಎಂದು ಪ್ರಾರ್ಥನೆ. ರಾಮನಿಗಾಗಿ ಸಣ್ಣ ಭಕ್ತಿಯ ಪ್ರಯತ್ನ ... ನಾನು ಹಾಡುಗಾರನಲ್ಲ ತಪ್ಪಿದ್ದರೆ ಕ್ಷಮಿಸಿ. ಜೈ ಶ್ರೀರಾಮ" ಎಂದು ಶೀರ್ಷಿಕೆ ಬರೆಸಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿ.ವೈ ವಿಜಯೇಂದ್ರ ಅವರನ್ನು ಟ್ಯಾಗ್ ಮಾಡಿದ್ದಾರೆ.
ಸೀತಾ-ರಾಮರ ಕಥೆಯನ್ನು ನೃತ್ಯದ ಮೂಲಕ ಹೇಳಿದ ರಾಧಿಕಾ
ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ರಾಮ- ಸೀರೆಯರ ಕಥೆಯನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಿರುವ ಅವರನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಬಿಳಿ ಬಟ್ಟೆ ಧರಿಸಿ, ಒಂದೇ ಕಡೆ ಕುಳಿತು ತಮ್ಮ ನೃತ್ಯ ಮತ್ತು ಭಾವಾಭಿನಯದ ಮೂಲಕ 'ಆದಿಪುರುಷ್' ಸಿನಿಮಾದ ಹಾಡನ್ನು ರಾಮ ಪ್ರಾಣ ಪ್ರತಿಷ್ಠಾಪನೆಗೆ ಸಮರ್ಪಿಸಿದ್ದಾರೆ.
'ಆದಿಪುರುಷ್' ಸಿನಿಮಾದ ಜನಮ್ ಜನಮ್ ಕಿ ಖೋಜ್ ಬತಾಯೇ.. ರಾಮ್ ಸೇ ಚಲ್‌ಕೇ ರಾಮ್ ಪೇ ಆಯೇ ಎಂಬ 'ರಾಮ್ ಸಿಯಾ ರಾಮ್' ಹಾಡಿಗೆ ರಾಧಿಕಾ ಕುಮಾರಸ್ವಾಮಿ ನೃತ್ಯ ರೂಪಕ ಬಳಸಿದ್ದಾರೆ. ಈ "ಜೈ ಶ್ರೀ ರಾಮ್" ಎಂದು ಶೀರ್ಷಿಕೆ ನೀಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ರಾಮನಾಮ ಪಠಿಸಿದ ಗೋಲ್ಡನ್ ಸ್ಟಾರ್ ಗಣೇಶ್
ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೊಂದು ಶುರುವಾಗಿದೆ. ಅದೇ ರಾಮನಾಮ ಪಠಣ. ಬಿ.ವೈ ವಿಜಯೇಂದ್ರ ಅವರ ಆಹ್ವಾನದ ಮೇರೆಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ರಾಮನಾಮ ಪಠಿಸಿದ್ದಾರೆ. ಜೊತೆಗೆ ಇನ್ನೂ ಇಬ್ಬರು ಸೆಲಬ್ರಿಟಿಗಳಿಗೆ ರಾಮನಾಮ ಪಠಿಸಲು ಆಹ್ವಾನ ನೀಡಿದ್ದಾರೆ.
"ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಪವಿತ್ರ ಕ್ಷಣದಲ್ಲಿ ಬಿವೈ ವಿಜಯೇಂದ್ರ ಅವರು #NannaRama ಅಭಿಯಾನದ ಮೂಲಕ ನನಗೆ ರಾಮನಾಮ ಪಠಿಸಲು ಆಹ್ವಾನ ನೀಡಿದ್ದಾರೆ. ಈ ಭಕ್ತಿಪರವಶತೆಯ ಕ್ಷಣದಲ್ಲಿ ನಾನು ಉಪೇಂದ್ರ ಸರ್ ಹಾಗೂ ಅನೀಲ್ ಕುಂಬ್ಳೆ ಸರ್ ಅವರನ್ನು ಆಹ್ವಾನಿಸುತ್ತಿದ್ದೇನೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











