ವಿಡಿಯೋ ವೈರಲ್: ಕೃಷಿ ಮಾಡುತ್ತಿರುವ ನಟಿ ಅದಿತಿ ಪ್ರಭುದೇವ
ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಕೃಷಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಅನೇಕರು ನಗರ ಜೀವನಕ್ಕೆ ಗುಡ್ ಬೈ ಹೇಳಿ ಹಳ್ಳಿ ಕಡೆ ವಲಸೆ ಹೋಗಿದ್ದಾರೆ. ಸಾಕಷ್ಟು ಮಂದಿ ಯುವಕರು ಕೃಷಿ ಕಡೆ ಮುಖ ಮಾಡುತ್ತಿದ್ದಾರೆ. ಕೆಲಸವಿಲ್ಲದೆ ಖಾಲಿಕುಳಿತಿದ್ದ ಅದೆಷ್ಟೋ ಮಂದಿಗೆ ಕೃಷಿ ಕೈ ಹಿಡಿದಿದೆ. ನಗರ ಜೀವನಕ್ಕೆ ಮಾರುಹೋಗಿ, ಬಿಡುಗಾಸಿನ ಸಂಬಳಕ್ಕೆ ಪೇಚಾಡುತ್ತಿದ್ದ ಅನೇಕರು ಮತ್ತೆ ಹಳ್ಳಿ ಸೇರಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.
ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಕೂಡ ಬಿಡುವಿನ ವೇಳೆಯಲ್ಲಿ ಹಳ್ಳಿಯಲ್ಲಿ ಕಾಲಕಳೆಯುವ ಜೊತೆಗೆ ಹೊಲದಲ್ಲಿ ಕೆಲಸ ಮಾಡಿ ಸಂತಸ ಪಟ್ಟಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಅದಿತಿ ತಮ್ಮ ಸಿನಿಮಾ ಕೆಲಸದ ನಡುವೆ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ತಾವು ಭೂಮಿ ಉಳುಮೆ ಮಾಡಿ, ಮನೆಗೆಲಸ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುಂದೆ ಓದಿ...

ಅದಿತಿಯ ಹಳ್ಳಿ ಪ್ರೀತಿ
ಅದಿತಿಯ ಹಳ್ಳಿ ಪ್ರೀತಿ, ಕೃಷಿ ಜೀವನಕ್ಕೆ ಅಭಿಮಾನಿಗಳ ಫಿದಾ ಆಗಿದ್ದಾರೆ. ಅಂದಹಾಗೆ ಅದಿತಿ ಕೃಷಿ ಹಿನ್ನಲೆ ಕುಟುಂಬದಿಂದ ಬಂದವರು. ಬೆಂಗಳೂರಿಗೆ ಬಂದ ಅದಿತಿ ಮೊದಲು ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ ಬೆಳ್ಳಿತೆರೆ ಮೇಲೆ ಮಿಂಚಲು ಪ್ರಾರಂಭಿಸಿದ ಅದಿತಿ ಈಗ ಸ್ಯಾಂಡಲ್ ವುಡ್ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆದರೂ ತನ್ನ ಹಳ್ಳಿ ಪ್ರೀತಿ, ಜೀವನವನ್ನು ಮರೆತಿಲ್ಲ.

ಕೃಷಿ ಮಾಡಿ ಗಮನ ಸೆಳೆದ ಅದಿತಿ
ಚಿತ್ರರಂಗದಲ್ಲಿ ಯಶಸ್ವಿ ಬೆಳೆದು, ಅಪಾರ ಸಂಖ್ಯೆ ಅಭಿಮಾನಿ ಬಳಗ ಹೊಂದಿರುವ ನಟಿಯಾಗಿದ್ದರೂ ತನ್ನ ಹಿನ್ನಲೆಯನ್ನು ಮರೆತಿಲ್ಲ. ಸರಳ ಹಳ್ಳಿ ಜೀವನಕ್ಕೆ ಮನಸೋತಿರುವ ಅದಿತಿ ಆಗಾಗ ಹಳ್ಳಿಗೆ ಹೋಗಿ ಸಂತಸ ಪಡುತ್ತಿರುತ್ತಾರೆ. ಅದಿತಿಗೆ ಕೃಷಿ ಅಂದರೆ ತುಂಬಾ ಇಷ್ಟ. ತಾವೆ ಟ್ರಾಕ್ಟರ್ ಏರಿ ಬಿತ್ತನೆ ಮಾಡಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡಿದ್ದಾರೆ. ಈ ವಿಡಿಯೋವನ್ನು ಅದಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಗಣಿ ಬಾಚಿ, ಹಾಲು ಕರೆದ 'ಟಾಪ್' ನಟಿ
ಅಷ್ಟೆಯಲ್ಲ ದನದ ಕೊಟ್ಟಿಗೆ ಕೆಲಸ ಮಾಡಿ ಎಲ್ಲರ ಮನಗೆದ್ದಿದ್ದಾರೆ. ಸಗಣಿ ಬಾಚಿ, ಕೊಟ್ಟಿಗೆ ಗುಡಿಸಿ, ಹಾಲು ಕರೆದು ಕುಡಿದು ಬಳಿಕ ಕಟ್ಟಿಗೆ ಒಲೆಯಲ್ಲಿ ರೊಟ್ಟಿ ಮಾಡಿ ತಿಂದು ಸಂಭ್ರಮಿಸಿದ್ದಾರೆ. ಗ್ಲಾಮರ್ ಬೊಂಬೆಯಾಗಿ ಫೋಟೋಗಳಲ್ಲಿ ಪೋಸ್ ಕೊಡುತ್ತಾ, ತೆರೆಮೇಲೆ ಮಿಂಚುತ್ತಿದ್ದ ಅದಿತಿ ಈಗ ಹಳ್ಳಿ ಹುಡುಗಿಯಾಗಿರುವುದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅದಿತಿ ಪ್ರಭುದೇವ ಪತ್ರ
ತನ್ನ ಈ ಹಳ್ಳಿಯ ಕೆಲಸದ ವಿಡಿಯೋವನ್ನು ಪ್ರತಿಯೊಬ್ಬ ರೈತರಿಗೂ ಅರ್ಪಿಸಿದ್ದಾರೆ. ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸಿ ಪತ್ರವನ್ನು ಹಂಚಿಕೊಂಡಿದ್ದಾರೆ. "ನಾನು ಹಳ್ಳಿಯ ಹೆಣ್ಣು ಮಗಳಾದರೂ, ರೈತ ಕುಟುಂಬದ ಹಿನ್ನಲೆ ಇದ್ದರೂ, ಈಗಿರುವ ಪರಿಸ್ಥಿತಿಯಲ್ಲಿ ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವಾಗಲಿ, ಕೆಲಸವಾಗಲಿ, ದಿನಚರಿಯಾಗಲಿ ವಿಭಿನ್ನವಾಗಿ ಇರಬಹುದು. ಆದರೂ ಪ್ರತಿಸಲ ನಾನು ಯಾವುದೇ ಹಳ್ಳಿಗೆ ಹೋದರೂ ಇರುವ ಒಂದೆರಡು ದಿನಗಳಾದರೂ ಅಲ್ಲಿಯ ವಾತಾವರಣವನ್ನು ಪ್ರೀತಿಯಿಂದ ಅನುಭವಿಸುತ್ತೇನೆ" ಎಂದು ಹೇಳಿದ್ದಾರೆ.
ತೋಟ ಮಾಡುವ ಕನಸುಕಂಡ ಅದಿತಿ
"ಪ್ರಕೃತಿಯ ಜೊತೆಗಿನ ನಂಟು ಜೀವನಕ್ಕೆ ಸಾರ್ಥಕತೆಯನ್ನು, ನೆಮ್ಮದಿಯನ್ನು ತರುತ್ತೆ. ಆ ಸಂತೋಷವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಅನೇಕ ಜನರ ಕನಸಂತೆ ನನಗೂ ನನ್ನದೇ ಆದ ಒಂದು ಪುಟ್ಟ ತೋಟ ಮಾಡುವ ಹಂಬಲ. ನೋಡೋಣ ಮುಂದೊಂದು ದಿನ ಅದು ಆದರೂ ಆಗಬಹುದು" ಎಂದಿದ್ದಾರೆ.
ಅನ್ನಬ್ರಹ್ಮ ರೈತರಿಗೆ ಅದಿತಿ ನಮನ
"ಅದೆಷ್ಟೋ ಬಾರಿ ಬೆಳೆದ ಸೂಕ್ತ ಬೆಲೆ ಸಿಗದಿದ್ದರೂ, ಮೈತುಬಾ ಸಾಲವಿದ್ದರೂ ಪ್ರತಿನಿತ್ಯ ಕಷ್ಟಪಟ್ಟು ಕೆಲಸ ಮಾಡಿ ನಮ್ಮೆಲ್ಲರಿಗೂ ಅನ್ನ ನೀಡುತ್ತಿರವ ದೇವರು ಅನ್ನಬ್ರಹ್ಮ ರೈತನಿಗೆ ಈ ಮೂಲಕ ನಮನ. ಪ್ರತಿಯೊಬ್ಬ ರೈತ ಮಿತ್ರರಿಗೆ ಸಮರ್ಪಣೆ" ಎಂದು ದೀರ್ಘವಾಗಿ ಪತ್ರ ಬರೆದಿದ್ದಾರೆ.


Click it and Unblock the Notifications











