ಪವನ್ ಒಡೆಯರ್ ಸಿನಿಮಾದಲ್ಲಿ ಆಶಿಕಾ ರಂಗನಾಥ್
ನಟಿ ಆಶಿಕಾ ರಂಗನಾಥ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ಈಗ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೌದು, ನಿರ್ದೇಶಕ ಪವನ್ ಒಡೆಯರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ರೋಮ್ಯಾಂಟಿಕ್ ಸಿನಿಮಾಗೆ ಆಶಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈಗಾಗಲೆ ಪವನ್ ಒಡೆಯರ್ ಅವರ, ಇನ್ನು ಹೆಸರಿಡದ ಸಿನಿಮಾದ ಬಗ್ಗೆ ಮಾಹಿತಿ ಹೊರಬಿದ್ದಿತ್ತು. 'ರೋಗ್' ಚಿತ್ರದ ಖ್ಯಾತಿಯ ನಟ ಇಶಾನ್ ಈ ಚಿತ್ರದಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಪೂರಿ ಜಗನ್ನಾಥ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇಶಾನ್ ಆನಂತರ ಯಾವ ಸಿನಿಮಾದಲ್ಲು ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಪವನ್ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
'ನಟಸಾರ್ವಭೌಮ' ಚಿತ್ರದ ನಂತರ ಪವನ್ ಹೊಸಬರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಬಾರಿ ಇಶಾನ್ ಮತ್ತು ಆಶಿಕಾ ಅವರಿಗೆ ಆಕ್ಷನ್ ಕಟ್ ಹೇಳುವ ಮೂಲಕ ಒಂದು ಫ್ರೆಶ್ ಪೇರ್ ಅನ್ನು ಕನ್ನಡ ಚಿತ್ರಾಭಿಮಾನಿಗಳ ಮುಂದೆ ತರುತ್ತಿದ್ದಾರೆ.

ಇನ್ನು ಹೆಸರಿಡದ ಈ ಚಿತ್ರ ರೋಮ್ಯಾಂಟಿಕ್ ಚಿತ್ರವಾಗಿರಲಿದೆಯಂತೆ. ಸೂಪರ್ ಹಿಟ್ 'ಗೂಗ್ಲಿ' ಚಿತ್ರದ ನಂತರ ಸುಮಾರು 6 ವರ್ಷದ ಬಳಿಕ ಪವನ್ ಸಂಪೂರ್ಣ ರೋಮ್ಯಾಂಟಿಕ್ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಚಿತ್ರಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಸಧ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.


Click it and Unblock the Notifications











