ಹಿರಿಯ ನಟಿ ಬಿ. ಸರೋಜಾ ದೇವಿ ನಿಧನ; ಗಣ್ಯರ ನುಡಿ ನಮನ
ಚತುರ್ಭಾಷಾ ತಾರೆ ಬಿ. ಸರೋಜಾ ದೇವಿ ಇಂದು(ಜುಲೈ 12) ವಿಧಿವಶರಾಗಿದ್ದಾರೆ. ತಮ್ಮ 87ನೇ ವಯಸ್ಸಿನಲ್ಲಿ ಅನಾರೋಗ್ಯ ಸಮಸ್ಯೆಯಿಂದ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮಲ್ಲೇಶ್ವರದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಇರಿಸಲಾಗಿದ್ದು ಸಾಕಷ್ಟು ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿನಯ ಸರಸ್ವತಿ ಎಂದು ಬಿ. ಸರೋಜಾ ದೇವಿ ಜನಪ್ರಿಯರಾಗಿದ್ದರು. ದಶಕಗಳ ಕಾಲ ನಾಯಕಿಯಾಗಿಯೇ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದು ಅವರ ಹೆಗ್ಗಳಿಕೆ. ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿದ ಬಳಿಕ ಟಿವಿ ನೋಡಲು ಸರೋಜಾ ದೇವಿ ಅವರು ಮುಂದಾಗಿದ್ದರು. ಆ ವೇಳೆಗೆ ಬಹಳ ಸುಸ್ತಾಗಿದ್ದರು. ನೋಡ ನೋಡುತ್ತಲೇ ಅರೆಪ್ರಜ್ಞಾ ಸ್ಥಿತಿಗೆ ಹೋಗಿದ್ದರು. ಕುಟುಂಬಸ್ಥರು ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಕನ್ನಡ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಮಾತ್ರವಲ್ಲದೇ ಪರಭಾಷಾ ಸಿನಿಮಾರಂಗ ಗಣ್ಯರು ಬಿ. ಸರೋಜಾ ದೇವಿ ಅಗಲಿಕೆ ಕಂಬನಿ ಮಿಡಿದಿದ್ದಾರೆ. ಕಿಚ್ಚ ಸುದೀಪ್, ದರ್ಶನ್, ರಜನಿಕಾಂತ್, ಸಿಎಂ ಸಿದ್ದರಾಮಯ್ಯ ಸೇರಿ ಸಾಕಷ್ಟು ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ನುಡಿನಮನ ಸಲ್ಲಿಸಿದ್ದಾರೆ.
ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿ "ಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಶ್ರೀಮತಿ ಸರೋಜ ದೇವಿ ಅವರು ತಮ್ಮ ಮೋಹಕತೆಯೊಂದಿಗೆ ಹೊರಟಿದ್ದಾರೆ.ಹಲವು ಭಾಷೆಗಳ ಪ್ರೌಡಿಮೆ ಹೊಂದಿದ್ದ ಅವರು ಅನೇಕ ದಿಗ್ಗಜರೊಂದಿಗೆ ನಟಿಸಿ ತಾನೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನೆಡೆಸಿ ನಮ್ಮನ್ನು ಆಗಲಿ ಹೊರಟಿದೆ. ಕಲಾ ಸರಸ್ವತಿಗೆ ವಿನಯಪೂರ್ವಕ ನಮನ" ಎಂದು ಬರೆದುಕೊಂಡಿದ್ದಾರೆ.
ಇನ್ನು ನಟ ದರ್ಶನ್ ಟ್ವೀಟ್ ಮಾಡಿ "ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
"ಲಕ್ಷಾಂತರ ಅಭಿಮಾನಿಗಳ ಮನಸ್ಸು ಸೂರೆಗೊಂಡ ಮಹಾನ್ ನಟಿ ಸರೋಜಾ ದೇವಿ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಸೂಪರ್ ಸ್ಟಾರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ "ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ" ಎಂದು ಬರೆದುಕೊಂಡಿದ್ದಾರೆ.
"ಅಭಿನಯ ಸರಸ್ವತಿಗೆ ಪ್ರೀತಿಯ ವಿದಾಯ. ಬಿ. ಸರೋಜಾ ದೇವಿ ಅವರ ನಿಧನದ ಸುದ್ದಿ ನೋವು ತಂದಿದೆ. ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿ, 6 ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿ, ಸೈ ಎನಿಸಿಕೊಂಡಿದ್ದರು. ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ. ಅಪಾರ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ಡಿಸಿಯಂ ಡಿ. ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಇನ್ನು ನಟಿ ರಮ್ಯಾ ಟ್ವೀಟ್ ಮಾಡಿ "ಸರೋಜಾ ದೇವಿ ಅವ್ರು ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದರು. ನಾವು ಭೇಟಿಯಾದಾಗಲೆಲ್ಲಾ ಅವರು ತಮ್ಮ ಜೀವನದ ಹಲವಾರು ವೈಯಕ್ತಿಕ ಘಟನೆಗಳನ್ನು ಹಂಚಿಕೊಂಡಿದ್ದರು. ಅವುಗಳಲ್ಲಿ ಹೆಚ್ಚಿನವು ಹಾಸ್ಯಮಯವಾಗಿದ್ದವು. ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ" ಎಂದಿದ್ದಾರೆ.


Click it and Unblock the Notifications











