ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; 34 ವರ್ಷಗಳ ಬಳಿಕ ಕ್ಷಮೆ ಕೇಳಿ ನಾಯಕಿ ಕಣ್ಣೀರು
ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ರವಿಚಂದ್ರನ್ ನಟಿಸಿದ ಹಿಟ್ ಸಿನಿಮಾಗಳಲ್ಲಿ 'ಹಳ್ಳಿಮೇಷ್ಟ್ರು' ಕೂಡ ಒಂದು. ತಮಿಳಿನ 'ಮುಂಡಾನೈ ಮುಡಿಚು' ಚಿತ್ರದ ರೀಮೆಕ್ ಇದಾಗಿತ್ತು. ಮೋಹನ್-ಮಂಜು ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರು. ಹಂಸಲೇಖ ಸಂಭಾಷಣೆ, ಸಾಹಿತ್ಯ- ಸಂಗೀತ ಒದಗಿಸಿದ್ದರು.
'ಹಳ್ಳಿಮೇಷ್ಟ್ರು' ಚಿತ್ರದಲ್ಲಿ ರವಿಚಂದ್ರನ್ ಜೋಡಿಯಾಗಿ ಮುಂಬೈ ಬೆಡಗಿ ಬಿಂದಿಯಾ ನಟಿಸಿದ್ದರು. ಆದರೆ ಸಿನಿಮಾ ಮುಗಿಯುವ ವೇಳೆಗೆ ಕ್ರೇಜಿಸ್ಟಾರ್ ಮೇಲೆ ಆಕೆ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ರವಿಚಂದ್ರನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಆಕೆ ಕ್ಷಮೆ ಕೇಳಿದ್ದರು. ವಿವಾದ ತಣ್ಣಗಾಗಿತ್ತು. 34 ವರ್ಷಗಳ ಬಳಿಕ ಆ ಘಟನೆ ಬಗ್ಗೆ ನಟಿ ಬಿಂದಿಯಾ ಮಾತನಾಡಿದ್ದಾರೆ. ಬಹಿರಂಗವಾಗಿ ಕ್ರೇಜಿಸ್ಟಾರ್ ಕ್ಷಮೆ ಕೇಳಿದ್ದಾರೆ. ನಾನು ಆಗ ಚಿಕ್ಕ ಹುಡುಗಿ, ಏನೋ ಗೊತ್ತಿಲ್ಲದೇ ತಪ್ಪು ಮಾಡಿಬಿಟ್ಟೆ. ದಯವಿಟ್ಟು ಕ್ಷಮಿಸಿ ಎಂದು ಕೇಳಿದ್ದಾರೆ.

ನಟಿ ಫರ್ಹೀನ್ ಖಾನ್ ಚಿತ್ರರಂಗದಲ್ಲಿ ಬಿಂದಿಯಾ ಎಂದೇ ಖ್ಯಾತಿ ಗಳಿಸಿದ್ದರು. ನೋಡಲು ಕೊಂಚ ಮಾಧುರಿ ದೀಕ್ಷಿತ್ ರೀತಿ ಕಾಣುತ್ತಾರೆ ಎಂದು 30 ವರ್ಷಗಳ ಹಿಂದೆ ಕ್ರೇಜ್ ಸಂಪಾದಿಸಿದ್ದರು. 'ಜಾನ್ ತೇರೆ ನಾಮ್' ಚಿತ್ರದ ಮೂಲಕ ಆಕೆ ಚಿತ್ರರಂಗ ಪ್ರವೇಶಿಸಿದ್ದರು. ಅದೇ ಸಮಯದಲ್ಲಿ 'ಹಳ್ಳಿಮೇಷ್ಟ್ರು' ಚಿತ್ರಕ್ಕಾಗಿ ರವಿಚಂದ್ರನ್ ನಾಯಕಿಯ ಹುಡುಕಾಟ ನಡೆಸಿದ್ದರು. ಮುಂಬೈಗೆ ಹೋದಾಗ ಬಿಂದಿಯಾ ಕಣ್ಣಿಗೆ ಬಿದ್ದಿದ್ದರು. ಬಳಿಕ ಬಂದು ನಟಿಸಿದ್ದರು. ಈ ಬಗ್ಗೆ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ 3 ದಶಕಗಳ ಬಳಿಕ ಬಿಂದಿಯಾ ಮಾತನಾಡಿದ್ದಾರೆ. ಆ ವಿವಾದದ ಬಗ್ಗೆಯೂ ಕೂಡ ಪ್ರತಿಕ್ರಿಯಿಸಿದ್ದಾರೆ.
ನನಗೆ ಕನ್ನಡ ಕೂಡ ಬರ್ತಿರ್ಲಿಲ್ಲ. ಆದರೂ ನನ್ನನ್ನು ಮೊದಲ ಬಾರಿ ಭೇಟಿಯಾಗಿ ಕೆಲವೊತ್ತು ಮಾತನಾಡಿದ ಕೂಡಲೇ ರವಿ ಸರ್ ಚಿತ್ರಕ್ಕೆ ಆಯ್ಕೆ ಮಾಡಿದ್ರು ಎಂದು ಬಿಂದಿಯಾ ನೆನಪಿಸಿಕೊಂಡಿದ್ದಾರೆ. "ನಾನು ದಕ್ಷಿಣದ ಚಿತ್ರಗಳಿಗೆ ಹೊಸಬಳಾಗಿ ಬಂದೆ. ಅದೇ ರೀತಿ ನನ್ನನ್ನು ಟ್ರೀಟ್ ಮಾಡಿದ್ರು. ರವಿ ಸರ್ ಬೆಂಬಲಕ್ಕೆ ನಿಂತ್ರು. ಹೇಗೆ ಡೈಲಾಗ್ ಹೇಳಬೇಕು, ನಟಿಸಬೇಕು ಎಂದು ಹೇಳಿಕೊಟ್ರು. ಆದ್ರೆ ನನ್ನ ನಟನೆ ಅವರಿಗೆ ಇಷ್ಟವಾಯಿತು. ಕೊನೆ ಕೊನೆಗೆ ಎಲ್ಲವೂ ಸರಿ ಹೋಗಲಿಲ್ಲ. ಒಬ್ಬ ಪತ್ರಕರ್ತೆ ಮ್ಯಾಗಜೀನ್ ಅಲ್ಲಿ ಏನೋ ಬರೆದುಬಿಟ್ಲು. ನಾನು ಏನೋ ಹೇಳ್ದೆ, ಅದು ಮತ್ತೆನೋ ಆಗಿ ಸುದ್ದಿ ಆಗಿಬಿಡ್ತು. ದೂರು ದಾಖಲಾಯಿತು. ಬಹಳ ಬೇಸರವಾಯಿತು" ಎಂದಿದ್ದಾರೆ.

ಆ ಮ್ಯಾಗಜೀನ್ ಪತ್ರಕರ್ತೆ ಮಾಡಿದ ತಪ್ಪಿಗೆ ಆ ವಿವಾದ ಭುಗಿಲೆದ್ದಿತ್ತು. ರವಿಚಂದ್ರನ್ ಅವರಿಗೆ ಹೃದಯಪೂರ್ವಕವಾಗಿ ಕ್ಷಮೆ ಕೇಳ್ತೀನಿ. ಅವ್ರು ಅಷ್ಟು ದೊಡ್ಡ ಬ್ರೇಕ್ ಕೊಟ್ರು. ಆದ್ರೆ ಆ ಮ್ಯಾಗಜೀನ್ ವರದಿಯಿಂದ ದೊಡ್ಡ ಕೇಸ್ ಆಯ್ತು. ಆ ರೀತಿ ಆಗಬಾರದಿತ್ತು. ಇವತ್ತಿಗೂ ರವಿ ಸರ್ ಚಿತ್ರದಲ್ಲಿ ತಾಯಿ ಪಾತ್ರ, ಅಜ್ಜಿ ಪಾತ್ರ ಕೊಟ್ರೆ ನಟಿಸೋಕೆ ಸಿದ್ಧ. ಯಾವುದೇ ಸಂಭಾವನೆ ಇಲ್ಲದೇ ನಟಿಸ್ತೀನಿ. ದಯವಿಟ್ಟು ಒಂದು ಅವಕಾಶ ಕೊಡಿ ಸರ್. ಆ ಘಟನೆ ಬಳಿಕ ರವಿಚಂದ್ರನ್ ಅವರೊಟ್ಟಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಕೋರ್ಟ್‌ನಲ್ಲೇ ಭೇಟಿ ಆಗಿದ್ವಿ. ಆಗ ನಾನು ಬಹಳ ಚಿಕ್ಕವಳು, ಬುದ್ದಿ ಇಲ್ದೆ ನಡೆದುಕೊಂಡಿದ್ದೆ. ಪ್ರಬುದ್ಧತೆ ಇರ್ಲಿಲ್ಲ" ಎಂದಿದ್ದಾರೆ.
ಕೊನೆಗೆ ರವಿ ಸರ್ ಕೇಸ್ ಗೆದ್ರು, ಬಳಿಕ ವಾಪಸ್ ಪಡೆದ್ರು. ಎಲ್ಲಾ ಇತ್ಯರ್ಥವಾಗಿತ್ತು. ಕಾರಣ ನನ್ನ ಆರೋಪಕ್ಕೆ ಯಾವುದೇ ಆಧಾರ ಇರಲಿಲ್ಲ. ನಾನು ಹೇಳಿದ್ದು ಬೇರೆ, ಮ್ಯಾಗಜೀನ್‌ನಲ್ಲಿ ಬಂದಿದ್ದು ಬೇರೆ. ಅದು ರವಿಚಂದ್ರನ್ ಅವರ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತವಾಗುವಂತಾಗಿತ್ತು. ಕೋರ್ಟ್‌ನಲ್ಲಿ ಅವರನ್ನು ನೋಡಿದಾಗ ಸಂಕಟವಾಯಿತು. ಅಷ್ಟು ದೊಡ್ಡ ನಟ ಅಲ್ಲಿಗೆ ಬರುವಂತಾಯಿತು. ರವಿ ಸರ್ ನಿಜಕ್ಕೂ ಯಾವುದೇ ತಪ್ಪು ಮಾಡ್ಲಿಲ್ಲ ಎಂದು ಹೇಳಿ ಬಿಂದಿಯಾ ಕಣ್ಣೀರು ಹಾಕಿದ್ದಾರೆ.
ಅಂದಹಾಗೆ ನಟಿ ಬಿಂದಿಯಾ ಅಂದು ನಟ ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಆಕೆಗೆ ಬುದ್ದಿ ಕಲಿಸಬೇಕು ಎಂದು ಕ್ರೇಜಿಸ್ಟಾರ್ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕೋರ್ಟ್‌ನಲ್ಲಿ ಬಿಂದಿಯಾ ಕ್ಷಮೆ ಕೇಳಿದ ಬಳಿಕ ವಿವಾದ ಬಗೆಹರಿದಿತ್ತು. ಈ ಬಗ್ಗೆ 'ಸೂಪರ್ ಟಾಕ್ ಟೈಂ' ಸಂದರ್ಶನದಲ್ಲಿ ಸ್ವತಃ ರವಿಚಂದ್ರನ್ ಮಾತನಾಡಿದ್ದರು.


Click it and Unblock the Notifications