ನಂಗೂ ಗೊತ್ತು ಎಲ್ಲಿ ಹೇಗೆ ಇರಬೇಕು? ಯಾವ ಬಟ್ಟೆ ತೊಡಬೇಕು? ಅಂತ ನಿಮ್ಮದು ನೀವು ನೋಡ್ಕೊಳಿ
ಸೆಲೆಬ್ರೆಟಿಗಳಿಗೆ ಟ್ರೋಲ್ ಅನ್ನೋದು ಹೊಸದೇನು ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾರು, ಯಾರಿಗೆ, ಏನು ಬೇಕಾದರೂ ಕಾಮೆಂಟ್ ಮಾಡಬಹುದು ಎನ್ನುವಂತಾಗಿದೆ. ಇನ್ನು ಫೇಕ್ ಅಕೌಂಟ್‌ಗಳ ಹಾವಳಿ ಹೇಳುವುದು ಬೇಡ. ಇನ್ನು ಸಿನಿಮಾ ನಟಿಯರ ಪೋಸ್ಟ್‌ಗಳಿಗೆ ಕೆಲವರು ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕೆಲ ಸೆಲೆಬ್ರೆಟಿಗಳು ಕಾಮೆಂಟ್ ಬಾಕ್ಸ್ ಆಫ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಟೀಕೆ, ಕೀಳುಮಟ್ಟದ ಭಾಷೆಯಲ್ಲಿ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ವಿಚಾರದ ಬಗ್ಗೆ ನಟಿ ಚೈತ್ರಾ ಆಚಾರ್ ಮಾತನಾಡಿದ್ದಾರೆ. ಆಗಾಗ್ಗೆ ಹಾಟ್ ಫೋಟೊಶೂಟ್ ಮೂಲಕ ಚೈತ್ರಾ ಗಮನ ಸೆಳೆಯುತ್ತಾರೆ. ಆದರೆ ಆಕೆಯ ಪೋಸ್ಟ್‌ಗಳಿಗೆ ಕೆಟ್ಟ ಕೆಟ್ಟ ಕಾಮೆಂಟ್ಸ್ ಬರುತ್ತವೆ.

ಚೈತ್ರಾ ಆಚಾರ್ ಕಾಮೆಂಟ್ ಸೆಕ್ಷನ್ ಆಫ್ ಮಾಡಿ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ಆಕೆ ಇಂಗ್ಲೀಷ್‌ನಲ್ಲಿ ಮಾತನಾಡಿದಾಗ ಕನ್ನಡದಲ್ಲಿ ಮಾತನಾಡಿ ಎನ್ನುತ್ತಾರೆ. ತೊಡುವೆ ಬಟ್ಟೆ ಬಗ್ಗೆ ಚಕಾರ ಎತ್ತಿ ಕೆಲವರು ನೈತಿಕ ಪೊಲೀಸ್‌ಗಿರಿ ತೋರುತ್ತಾರೆ. ಈ ರೀತಿ ತಮ್ಮನ್ನು ಟ್ರೋಲ್ ಮಾಡುವವರ ಬಗ್ಗೆ ಆಕೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನನಗೂ ಎಲ್ಲಾ ಗೊತ್ತು ಎಲ್ಲಿ ಹೇಗೆ ಇರಬೇಕು? ಏನು ಬಟ್ಟೆ ತೊಡಬೇಕು? ಅಂತ ಸುಮ್ಮನೆ ಬುದ್ಧಿ ಹೇಳುವ ಮುನ್ನ ನಿಮ್ಮ ಬಗ್ಗೆ ನೀವು ತಿಳಿಯಿರಿ ಎಂದಿದ್ದಾರೆ.
"ನಾನು ಕೆಟ್ಟದಾಗಿ ಕಾಮೆಂಟ್ಸ್ ಮಾಡಿದರೆ ಅದನ್ನು ಬ್ಲಾಕ್ ಮಾಡುತ್ತೇನೆ. ನಾನು ಯಾರ ಕಾಮೆಂಟ್ಸ್ ಕೂಡ ನೋಡಲ್ಲ. ನನ್ನ ಕೆಲಸದ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಮರ್ಶೆ ಮಾಡಿದರೆ ಒಪ್ಪುತ್ತೇನೆ. ಅದು ಸರಿ. ಆದರೆ ಅವರು ಯಾವುದರ ಬಗ್ಗೆ ಮಾತನಾಡುತ್ತಾರೆ ಗೊತ್ತಾ? ಉದಾಹರಣೆಗೆ ನಾನು ಸಂದರ್ಶನದಲ್ಲಿ ಇಂಗ್ಲೀಷ್ ಮಾತನಾಡಿದರೆ ಕನ್ನಡ ಮಾತನಾಡಿ ಎನ್ನುತ್ತೀರಾ"
"ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವಳು. ನಾನು ಓದಿದ ಶಾಲೆಗಳಲ್ಲಿ ಬೇರೆ ಭಾಷೆ ಮಾತನಾಡುವಂತೆ ಇರಲಿಲ್ಲ. ಇಂಗ್ಲೀಷ್‌ನಲ್ಲೇ ಮಾತನಾಡುವುದು ಕಡ್ಡಾಯವಾಗಿತ್ತು. ಕಾಲೇಜ್‌ಗಳಲ್ಲಿ ಕೂಡ ಇದು ಮುಂದುವರೆಯಿತು. ಹಾಗಾಗಿ ಇಂಗ್ಲೀಷ್ ಬಂದುಬಿಟ್ಟಿದೆ. ನಾವು ನಮ್ಮ ಆಪ್ತರ ಜೊತೆ ಕನ್ನಡದಲ್ಲೇ ಮಾತನಾಡುತ್ತೇವೆ. ಆದರೆ ನಾವು ಏನೇ ಸಾಧನೆ ಮಾಡಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಅವರು ಹೇಳುವುದು ಕನ್ನಡದಲ್ಲಿ ಮಾತನಾಡಿ ಅಂತ"

"ಕನ್ನಡ ಮಾತನಾಡಿ ಎಂದು ಇಂಗ್ಲೀಷ್‌ನಲ್ಲಿ ಟೈಪ್ ಮಾಡಿ ಹೇಳುತ್ತಾರೆ. ಅದೇ ಸ್ಯಾಡಿಸ್ಟ್, ಫನ್ನಿ ವಿಚಾರ. ಕೆಲವರು ನಾನು ತೊಡುವ ಬಟ್ಟೆಗೆ ಮಾತನಾಡುತ್ತಾರೆ. ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸುತ್ತಾರೆ. ನನ್ನ ಫೋಟೊಶೂಟ್ ನೋಡಿ ಮೇಡಂ ನೀವು ದೇವರ ಹಾಡು ಹಾಡುತ್ತೀರಾ, ಆದರೆ ಇಂತಹ ಬಟ್ಟೆ ಹಾಕುತ್ತೀರಾ? ಎನ್ನುತ್ತಾರೆ. ನಾನು ಯಾವಾಗ ಬರೆದುಕೊಟ್ಟಿದ್ದೆ ಆ ಹಾಡು ಹಾಡಿದ ಮೇಲೆ ಇಂತಹ ಬಟ್ಟೆ ತೊಡುತ್ತೇನೆ ಎಂದು?" ಆಕೆ ಚೈತ್ರಾ ಪ್ರಶ್ನಿಸಿದ್ದಾರೆ.
"ನಾನು ಕೂಡ ವಿದ್ಯಾವಂತೆ. ವಿದ್ಯೆ ಅಂದರೆ ಡಬಲ್ ಡಿಗ್ರಿ ಪಡೆಯುವುದು ಅಲ್ಲ. ಅದು ಬೇಸಿಕ್ ಕಾಮನ್ ಸೆನ್ಸ್. ನೀವು ಇನ್ನು ಯಾವ ಶತಮಾನದಲ್ಲಿ ಇದ್ದೀರಾ? ನಾನು ಪಾರ್ಟಿಗೆ ಆ ಬಟ್ಟೆ ಹಾಕುವುದು ಗಂಡನಿಗೆ ಇಷ್ಟವಿಲ್ಲ, ಪಾರ್ಟಿಯಲ್ಲಿ ನನ್ನ ಪ್ರೇಯಸಿ ಬಹಳ ಪೊಸೆಸಿವ್, ಎನ್ನುವ ಸ್ಥಳದಲ್ಲಿ ನೀವಿದ್ದುಕೊಂಡು ಮತ್ತೊಬ್ಬರ ಮೇಲೆ ಕಾಮೆಂಟ್ ಮಾಡುತ್ತಿದ್ದೀರಾ ಅದು ಸರಿ ಅಲ್ಲ ಅಂತ. ಎಂತಹ ಬಟ್ಟೆ ಹಾಕ್ತೀಯಾ? ಏನು ತೋರಿಸ್ತಿದ್ದೀಯಾ? ನಿನ್ನ ಎದೆ ಸೀಳು ಕಾಣುತ್ತಿದೆ ಎನ್ನುತ್ತೀರಾ? ಇದೆಲ್ಲಾ ಏನು ಎನ್ನುವುದು ಅರ್ಥವಾಗ್ತಿಲ್ಲ" ಎಂದು ಚೈತ್ರಾ ಕೇಳಿದ್ದಾರೆ.
"ನಾವು ಮಾಡಿದೆಲ್ಲ ಸರಿ ಅಂತ. ಬೆತ್ತಲಾಗಿ ಓಡಾಡಬೇಕು ಹೇಳುತ್ತಿಲ್ಲ. ಸಮಾಜದ ನಿಯಮಗಳನ್ನು ಅನುಸರಿಸಬೇಕು. ನನ್ನನ್ನು ಸೇರಿದಂತೆ. ಮತ್ತೆ ಕೆಲವರು ಇಂತಹ ಬಟ್ಟೆ ತೊಡಲು ನೀನು ಬಾಲಿವುಡ್ ನಟಿ ಅಲ್ಲ ಎಂದು ಕಾಮೆಂಟ್ ಮಾಡ್ತಾರೆ. ಅಂದ್ರೆ ಬಾಲಿವುಡ್ ನಟಿ ಅಂತಹ ಬಟ್ಟೆ ತೊಡುವುದು ನೋಡ್ತೀರಾ. ಆದರೆ ಕನ್ನಡ ನಟಿ ತೊಟ್ಟರೆ ಒಪ್ಪಲ್ಲ ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ಸಾಕಷ್ಟು ಜನ ನಟಿಯರು ನನ್ನ ವಾದವನ್ನು ಒಪ್ಪುತ್ತಾರೆ. ದನಿಗೂಡಿಸಿದ್ದಾರೆ"
"ಕೆಲವರು ಈ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ ಅಂತಹವರಿಗೆ ಏನು ಮಾಡಲು ಸಾಧ್ಯವಿಲ್ಲ. ಅವರಿಗೆ ತಿಳಿವಳಿಕೆ ಹೇಳಲು ಆಗಲ್ಲ. ಅವರ ಪೋಷಕರಿಂದಲೇ ಅವರನ್ನು ಸರಿಯಾಗಿ ಬೆಳೆಸಲು ಸಾಧ್ಯವಿಲ್ಲ. ನಾವೇನು ಮಾಡಲು ಸಾಧ್ಯ. ಕೆಲವರು ಒಳ್ಳೆ ರೀತಿ ಸಲಹೆ ನೀಡುತ್ತಾರೆ. ಅದನ್ನು ಒಪ್ಪುತ್ತೇನೆ. ನನಗೆ ನೀವು ಹಣ ಕೊಡಲ್ಲ. ಹಾಗಿದ್ದ ಮೇಲೆ ನಿಮಗೆ ನನಗೆ ಸಲಹೆ ನೀಡುವ ಅಧಿಕಾರ ಇಲ್ಲ" ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.


Click it and Unblock the Notifications











