ಪಿತೃ ಪಕ್ಷದಲ್ಲಿ ಲೋಕೇಶ್, ರಾಜ್, ಅಪ್ಪು, ಜಯಂತಿಗೆ ಪೂಜೆ: ದಾದಾ, ಶಂಕ್ರಣ್ಣ ಫೋಟೊ ಯಾಕಿಲ್ಲ? ಗಿರಿಜಾ ಲೋಕೇಶ್ ಸ್ಪಷ್ಟನೆ

ಪಿತೃ ಪಕ್ಷದ ಹದಿನೈದು ದಿನಗಳ ಕಾಲ ಹಿಂದೂ ಧರ್ಮದ ಪ್ರಕಾರ ಪೂರ್ವಜರಿಗೆ ಪಿಂಡ ಪ್ರಧಾನ ಮಾಡುವ ಪ್ರತೀತಿ ಇದೆ. ಶ್ರಾದ್ಧ ಪಕ್ಷವು ಮಹಾಲಯ ಅಮಾವಾಸ್ಯೆಯಂದು ಮುಕ್ತಾಯವಾಗುತ್ತದೆ. ಈ ವರ್ಷವೂ ಜನರು ಹಿರಿಯರಿಗೆ ಪೂಜೆ ಪುನಸ್ಕಾರ ಮಾಡಿ ಸ್ಮರಿಸಿದ್ದಾರೆ. ಅಮಾವಾಸ್ಯೆ ತಿಥಿಯಂದು ಪೂರ್ವಜರಿಗೆ ನೈವೇದ್ಯ ಅರ್ಪಿಸುವುದು, ತರ್ಪಣವನ್ನು ಅರ್ಪಿಸಿ ಸಂತೃಪ್ತಿ ಪಡಿಸಲಾಗುತ್ತದೆ.

ಈ ವಿಶೇಷ ದಿನ ಮಾಡುವ ಪಿತೃ ಕಾರ್ಯದಿಂದ ಅಗಲಿರುವ ಪಿತೃಗಳ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗುತ್ತೆ ಎಂಬ ನಂಬಿಕೆ ಇದೆ. ಜೊತೆಗೆ ಅವರು ಕುಟುಂಬದ ಸದಸ್ಯರ ಸೇವೆಗೆ ಸಂತುಷ್ಟರಾದ ತಮ್ಮ ಕುಟುಂಬಗಳನ್ನು ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ಇದೆ. ಹಿರಿಯ ನಟಿ ಗಿರಿಜಾ ಲೋಕೇಶ್ ಪ್ರತಿವರ್ಷ ತಮ್ಮನ್ನು ಅಗಲಿರುವ ಆಪ್ತರಿಗೆ ಪಿಂಡ ಪ್ರಧಾನ ಮಾಡೋ ಮೂಲಕ ಪಿತೃ ತರ್ಪಣ ಬಿಡುತ್ತಾರೆ. ಈ ವರ್ಷವೂ ಮಹಾಲಯ ಅಮಾವಾಸ್ಯೆಯ ಮರುದಿನ ಮನೆಯಲ್ಲಿ 130ಕ್ಕೂ ಅಧಿಕ ಜನರಿಗೆ ತರ್ಪಣ ಬಿಟ್ಟಿದ್ದಾರೆ.

Girija-lokesh-mahalaya-amavasye-vihsnuvardhan

2004, ಅಕ್ಟೋಬರ್ 14ರಂದು ಲೋಕೇಶ್ ಇಹಲೋಕ ತ್ಯಜಿಸಿದ್ದರು. ಈ ಬಾರಿ ಲೋಕೇಶ್ ಪುಣ್ಯಸ್ಮರಣೆ ಜೊತೆಗೆ ಮನೆಯಲ್ಲಿ ಮಹಾಲಯ ಅಮಾವಾಸ್ಯೆ ಆಚರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಪುತ್ರ ಸೃಜನ್ ಲೋಕೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮನೆಯ ದೇವರ ಮನೆಯಲ್ಲಿ ಲೋಕೇಶ್, ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಜಯಂತಿ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಜನ ಅಗಲಿರುವ ಗಣ್ಯರಿಗೆ ಪೂಜೆ ಸಲ್ಲಿಸಿರುವುದನ್ನು ನೋಡಬಹುದು.

ಮಹಾಲಯ ಅಮಾವಾಸೆಯ ದಿನ ನಮ್ಮನ್ನು ಅಗಲಿದ ಎಲ್ಲ ನಟ- ನಟಿಯರಿಗೆ ಲೋಕೇಶ್ ಕುಟುಂಬ ಪೂಜೆ ಸಲ್ಲಿಸಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಫೋಟೊಗಳು ಯಾಕೆ ಇಲ್ಲ? ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಗಿರಿಜಾ ಲೋಕೇಶ್ ಫಿಲ್ಮಿಬೀಟ್‌ಗೆ ಸ್ಪಷ್ಟನೆ ನೀಡಿದ್ದಾರೆ.

"ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದರ ಫೋಟೊಗಳನ್ನು ನಮ್ಮ ಮನೆಯಲ್ಲಿ ಇಟ್ಟು ಪೂಜಿಸುತ್ತೇವೆ. ಪ್ರತಿ ವರ್ಷ ನಾವು ಇದೇ ರೀತಿ ಪೂಜೆ ಮಾಡುತ್ತಾ ಬರುತ್ತಿದ್ದೇವೆ. ಡಾ. ರಾಜ್‌ಕುಮಾರ್ ನಮ್ಮ ಯಜಮಾನರ ತಂದೆ ಸುಬ್ಬಯ್ಯ ನಾಯ್ಡು ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಹಾಗಾಗಿ ಅವರು ನಮ್ಮ ಕುಟುಂಬಕ್ಕೆ ಬಹಳ ಆಪ್ತರು. ಅದೇ ರೀತಿ ಪುನೀತ್, ಚಿರು ಎಲ್ಲರೂ ನಮ್ಮ ಮಕ್ಕಳಿಗೆ ಆಪ್ತರು. ಇನ್ನು ಜಯಂತಿ ಅವರು ನನಗೆ ಬಹಳ ಆಪ್ತರಾಗಿದ್ದರು. ಹೀಗೆ ನಮಗೆ ಬಹಳ ಆಪ್ತರಾಗಿದ್ದವರ ಫೋಟೊಗಳನ್ನು ಇಟ್ಟು ಪೂಜೆ ಮಾಡುತ್ತೇವೆ"

"ತೂಗುದೀಪ ಶ್ರೀನಿವಾಸ್ ನಮಗೆ ಸಂಬಂಧಿಕರೇ ಆಗಬೇಕು. ಇನ್ನು ನಮ್ಮ ಮಾವ, ಚಿಕ್ಕಪ್ಪ ಸೇರಿದಂತೆ ಹಲವರು ಫೋಟೊಗಳು ಇವೆ. ವಿಷ್ಣುವರ್ಧನ್, ಶಂಕರ್ ನಾಗ್ ಅವರ ಸಿನಿಮಾಗಳಲ್ಲಿ ನಾವು ಕೆಲಸ ಮಾಡಿದ್ದೇವೆ. ಅವರು ನಮ್ಮ ಸಹ ಕಲಾವಿದರು. ಆದರೆ ನಾವು ಪ್ರತಿವರ್ಷ 130 ಜನರಿಗೆ ತರ್ಪಣ ಕೊಡುತ್ತೇವೆ. ಎಲ್ಲರ ಫೋಟೊ ಇಟ್ಟುಕೊಳ್ಳುವಂತಿದ್ದರೆ ಪಾರ್ವತಮ್ಮ ಅವರದ್ದು ಇಟ್ಟುಕೊಳ್ಳಬೇಕಿತ್ತು ಅಲ್ಲವೇ?"

"ಕನ್ನಡದ ಎಲ್ಲಾ ದಿವಂಗತ ಕಲಾವಿದರ ಫೋಟೊಗಳನ್ನು ಇಟ್ಟು ನಾವು ಪೂಜೆ ಮಾಡುತ್ತಿಲ್ಲ. ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದವರ ಫೋಟೊ ಇಟ್ಟು ಪೂಜಿಸುತ್ತೇವೆ. ಪುರೋಹಿತರು ನಮ್ಮ ಮನೆಗೆ ಬಂದರೆ ಮೂರ್ನಾಲ್ಕು ಗಂಟೆ ಪೂಜೆ ಮಾಡುತ್ತಾರೆ. 100ಕ್ಕೂ ಅಧಿಕ ಜನರ ಹೆಸರುಗಳನ್ನು ಹೇಳಿ ತರ್ಪಣ ಕೊಡಬೇಕು. ಅಷ್ಟು ಸಮಯ ಹಿಡಿಸುತ್ತದೆ. ಎಲ್ಲರ ಫೋಟೊ ಇಡುವುದಕ್ಕೆ ಜಾಗ ಇಲ್ಲ. ಲೋಕೇಶ್ ಅವರು ಇದ್ದಾಗ ಕೇಳಿಕೊಂಡೆ ಕೆಲವರ ಫೋಟೊ ಇಟ್ಟೆ. ರಾಜಾರಾಮ್ ನಮ್ಮ ಮನೆಗೆ ಬಹಳ ಆಪ್ತರು. ಅವರ ಫೋಟೊ ಇಟ್ಟಿಲ್ಲ. ಹಾಗಂತ ಅವರ ಮರೆತಿದ್ದೀವಿ ಅಂತಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಕಿರುತೆರೆಯ ಸತ್ಯ ಧಾರಾವಾಹಿಯಲ್ಲಿ ಸತ್ಯ ಹಾಗೂ ದಿವ್ಯಾ ಅಜ್ಜಿ ಪಾತ್ರದಲ್ಲಿ ಗಿರಿಜಾ ಲೋಕೇಶ್ ನಟಿಸುತ್ತಿದ್ಧಾರೆ. ಇನ್ನುಳಿದಂತೆ ಎರಡ್ಮೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ಧಾರೆ.

More from Filmibeat

English summary
Girija lokesh reacts on Vishnuvardhan's photo in Mahalaya pitri paksha pooja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X