ಈ ಕಾರಣಕ್ಕಾಗಿ ರಜನಿಕಾಂತ್ ಚಿತ್ರ ತಿರಸ್ಕರಿಸಿದ್ದರು 'ಅಮೆರಿಕಾ ಅಮೆರಿಕಾ' ನಟಿ ಹೇಮಾ!
Recommended Video
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಿತ್ರ ಅಮೆರಿಕಾ ಅಮೆರಿಕಾ. 1995ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ರಮೇಶ್ ಅರವಿಂದ್, ಆಕಾಶ್ ಆನಂದ್ ಮತ್ತು ಹೇಮಾ ಪ್ರಭಾತ್ ನಟಿಸಿದ್ದರು.
ಈ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಹಾಗೂ ಮೂರು ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಈ ಸಿನಿಮಾ ಬಳಿಕ ನಟಿ ಹೇಮಾ ಪ್ರಭಾತ್ ಗೆ ಅದೃಷ್ಟದ ಬಾಗಿಲು ತೆಗೆಯಿತು. ಸತತ ಸಿನಿಮಾಗಳ ಅವಕಾಶ ಹುಡುಕಿಕೊಂಡು ಬಂತು. ಅದಾಗಲೇ ವೈವಾಹಿಕ ಬದುಕು ಆರಂಭಿಸಿದ್ದ ನಟಿ ಅರಸಿ ಬಂದ ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದರು.
ಅಮೆರಿಕಾ ಅಮೆರಿಕಾ ಚಿತ್ರಕ್ಕೂ ಮುಂಚೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರವೊಂದನ್ನು ತಿರಸ್ಕರಿಸಿದ್ದರಂತೆ ಹೇಮಾ. ಈ ವಿಷಯವನ್ನು ಸ್ವತಃ ಹೇಮಾ ಫಿಲ್ಮಿಬೀಟ್ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

'ದೊರೆ' ಸಿನಿಮಾ ಮಾಡಿದ್ಮೇಲೆ ಆಫರ್
ಶಿವರಾಜ್ ಕುಮಾರ್ ನಟಿಸಿದ್ದ ದೊರೆ ಸಿನಿಮಾದಲ್ಲಿ ಹೇಮಾ ಪ್ರಭಾತ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರದಲ್ಲಿ ನಟಿಸಲು ಅವಕಾಶ ಬಂದಿತ್ತು. ಸಿನಿಮಾ ಮಾಡುವ ಆಸಕ್ತಿ ತೋರಿದರೂ, ಅಂತಿಮ ಕ್ಷಣದಲ್ಲಿ ಬೇಡವೆಂದು ರಿಜೆಕ್ಟ್ ಮಾಡಿದರಂತೆ.

'ತಲೈವಾ' ಚಿತ್ರ ತಿರಸ್ಕರಿಸಲು ಕಾರಣವೇನು
'ದೊರೆ ಸಿನಿಮಾ ಬಿಡುಗಡೆ ಬಳಿಕ ಅವಕಾಶ ಒಂದು ಬಂತು. ನಾನು ಕನ್ನಡ ಸಿನಿಮಾ ಇದ್ದರೆ ಮಾತ್ರ ಮಾಡುವುದು ಎಂದೆ. ಅದಕ್ಕೆ ಅವರು ರಜನಿಕಾಂತ್ ಚಿತ್ರ ಅಂದರು. ಸರಿ ಒಂದು ಸಲ ಕಥೆ ಹೇಳಿ ಅಂದೆ. ಅದಕ್ಕೆ ಅವರು ಕಥೆ ಹೇಳಲು ಸಾಧ್ಯವಿಲ್ಲ ಎಂದರು. ಹಾಗಾದ್ರೆ ಬೇಡ ಬಿಡಿ ನಾನು ಮಾಡಲ್ಲ ಎಂದು ಬಿಟ್ಟೆ' ಎಂದು ರಜನಿ ಚಿತ್ರವನ್ನು ತಿರಸ್ಕರಿಸಿದ ಕಥೆ ವಿವರಿಸಿದರು.

ಇಂದಿಗೂ ಬೇಸರ ಇಲ್ಲ
ದೊರೆ ಸಿನಿಮಾ ಬಿಡುಗಡೆಯಾಗಿದ್ದು 1995. ಆ ಸಮಯದಲ್ಲಿ ರಜನಿಕಾಂತ್ ದೊಡ್ಡ ಸ್ಟಾರ್. ಬಹುಶಃ ರಜನಿ ಚಿತ್ರದಲ್ಲಿ ನಟಿಸಿದ್ರೆ ಆ ನಟಿ ಒಂದೇ ಸಲ ಸ್ಟಾರ್ ನಟಿ ಆಗಿಬಿಡುತ್ತಿದ್ದರು. ಅಂತಹ ಅವಕಾಶವನ್ನು ಕೈಚೆಲ್ಲಿಕೊಂಡ್ರಾ ಎಂದು ಕೇಳಿದ್ದಕ್ಕೆ ''ಇಲ್ಲ ನನಗೆ ಏನು ಹಾಗೆ ಅನಿಸಿಲ್ಲ, ಕಥೆ ಹೇಳಿಲ್ಲ, ತನ್ನ ಪಾತ್ರದ ಬಗ್ಗೆ ಹೇಳಿಲ್ಲ ಅಂದ್ರೆ ಯಾರ ಚಿತ್ರವಾದರೇ ಏನು ಅಲ್ವಾ'' ಎಂದು ಹೇಳಿಕೊಂಡಿದ್ದಾರೆ.

ಹೇಮಾ ಅವರ ಚಿತ್ರಗಳು
ಹೇಮಾ ಪ್ರಭಾತ್ ಅವರು ನಟಿಸಿರುವ ಚಿತ್ರಗಳನ್ನು ಗಮನಿಸುವುದಾದರೇ, ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಬಳಿಕ ಶಿವಣ್ಣನ ದೊರೆ, ಅಮೆರಿಕಾ ಅಮೆರಿಕಾ, ಸಂಭ್ರಮ, ಬಂಗಾರದ ಮನೆ, ರವಿಮಾಮ ಅಂತಹ ಹಿಟ್ ಚಿತ್ರದಲ್ಲಿ ಹೇಮಾ ನಾಯಕಿಯಾಗಿ ನಟಿಸಿದ್ದಾರೆ. ಇದೀಗ, ಪ್ರಭಾತ್ ಶಾಲೆ ಮೂಲಕ ಮಕ್ಕಳಿಗೆ ಡ್ಯಾನ್ಸ್ ಕಲಿಸುತ್ತಿದ್ದಾರೆ.


Click it and Unblock the Notifications











