ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ಅಮಿತಾಬ್ ಬಚ್ಚನ್ ಪತ್ನಿ ಜಯಾ ವಾಗ್ದಾಳಿ
ಮಾಜಿ ಸ್ಪೀಕರ್, ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ವಿರುದ್ಧ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ರಮೇಶ್ ಕುಮಾರ್ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆ ಇಂದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಸಚಿವೆ ಸ್ಮೃತಿ ಇರಾನಿ, ಸಂಸದೆ ಜಯಾ ಬಚ್ಚನ್ ಸೇರಿದಂತೆ ಹಲವರು ರಮೇಶ್ ಕುಮಾರ್ ಹೇಳಿಕೆಯನ್ನು ಖಂಡಿಸಿದ್ದಾರೆ.
ವಿಧಾನಸಭೆಯಲ್ಲಿ ನಿನ್ನೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿತ್ತು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ಬಗ್ಗೆ ಆತಂಕಿತರಾಗಿ, ಹೀಗಾದರೆ ಸದನವನ್ನು ನಡೆಸುವುದು ಹೇಗೆ ಎಂದು ಪ್ರಶ್ನೆ ಮಾಡಿ ಮಾಜಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಹೆಸರು ಉಲ್ಲೇಖಿಸಿದರು.

ಆಗ ಮಾತನಾಡಿದ ರಮೇಶ್ ಕುಮಾರ್, ಅತ್ಯಾಚಾರವನ್ನು ತಡೆಯಲು ಆಗದಿದ್ದಾಗ ಸುಮ್ಮನೆ ಮಲಗಿ ಅದನ್ನು ಎಂಜಾಯ್ ಮಾಡಬೇಕು ಎಂದು ಅರ್ಥ ನೀಡುವ ಇಂಗ್ಲೀಷ್‌ನ ಗಾದೆಯೊಂದನ್ನು ಹೇಳಿದರು. ರಮೇಶ್ ಕುಮಾರ್ ಈ ಗಾದೆ ಹೇಳಿದಾಗ ಸದನದಲ್ಲಿದ್ದವರೆಲ್ಲ ಜೋರಾಗಿ ನಕ್ಕರು. ಆದರೆ ನಂತರ ರಮೇಶ್ ಕುಮಾರ್ ಅವರ ಈ ಹೇಳಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯಿತು.
ಸಮಾಜವಾದಿ ಪಕ್ಷದ ಸಂಸದೆಯೂ ಆಗಿರುವ ಜಯಾ ಬಚ್ಚನ್, ಈ ಬಗ್ಗೆ ಮಾತನಾಡಿ, ''ಅದೊಂದು ನಾಚಿಕೆಗೇಡಿನ ಸಂಗತಿ, ನಾಚಿಕೆಗೇಡಿನ ವರ್ತನೆ. ಕಾಂಗ್ರೆಸ್ ಪಕ್ಷವು ಆ ಶಾಸಕ (ರಮೇಶ್ ಕುಮಾರ್) ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಆ ಮೂಲಕ ಎಲ್ಲರಿಗೂ ಮಾದರಿಯಾಗಬೇಕು. ಯಾರೂ ಇನ್ನು ಮುಂದೆ ಹೀಗೆ ಮಾತನಾಡುವ ಧೈರ್ಯ ತೋರಬಾರದು. ಸದನದಲ್ಲಿ ಈ ರೀತಿ ಮಾತನಾಡುವುದಿರಲಿ, ಯೋಚನೆ ಸಹ ಮಾಡಬಾರದು'' ಎಂದು ಜಯಾ ಹೇಳಿದ್ದಾರೆ.
ಮುಂದುವರೆದು, ''ಇದೊಂದು ನೀಚ ಘಟನೆ. ಈ ರೀತಿಯ ಯೋಚನೆಯುಳ್ಳ ಜನರಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಅರ್ಹತೆ ಸಹ ಇಲ್ಲ. ಆಡಿದ ಮಾತು ಹಿಂಪಡೆಯಲು ಸಾಧ್ಯವಿಲ್ಲ. ಅವರ ಪಕ್ಷವು ಆ ಶಾಸಕನ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು'' ಎಂದು ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ನಟನೆಯಿಂದ ದೂರ ಉಳಿದಿದ್ದು, ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಸಮಾಜವಾದಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಕಳೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧವಾಗಿ ಜಯಾ ಬಚ್ಚನ್ ಪ್ರಚಾರ ಮಾಡಿದ್ದರು. ಕೆಲ ವರ್ಷದ ಹಿಂದೆ ನಟ ಸಲ್ಮಾನ್ ಖಾನ್, ಅತ್ಯಾಚಾರ ಸಂತ್ರಸ್ತೆಯರ ಬಗ್ಗೆ ಹೇಳಿಕೆ ನೀಡಿದ್ದಾಗಲೂ ಜಯಾ ಬಚ್ಚನ್ ಅದನ್ನು ಖಂಡಿಸಿದ್ದರು.
ರಮೇಶ್ ಕುಮಾರ್ ಹೇಳಿಕೆಯನ್ನು ಬಿಜೆಪಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಖಂಡಿಸಿದ್ದು, ''ಕಾಂಗ್ರೆಸ್ ಪಕ್ಷವು ಆ ಶಾಸಕ (ರಮೇಶ್ ಕುಮಾರ್) ಅನ್ನು ಕೂಡಲೇ ಪಕ್ಷದಿಂದ ತೆಗೆದು ಹಾಕಿ ತಕ್ಕ ಪಾಠ ಕಲಿಸಬೇಕು'' ಎಂದಿದ್ದಾರೆ.
ತಾವು ನಿನ್ನೆ ನೀಡಿದ್ದ ಹೇಳಿಕೆಗೆ ರಮೇಶ್ ಕುಮಾರ್ ಅವರು ಇಂದು ವಿಧಾನಸಭೆಯಲ್ಲಿ ಕ್ಷಮಾಪಣೆ ಕೇಳಿದ್ದಾರೆ. ತಮಗೆ ಈ ವಿಷಯದಲ್ಲಿ ಪ್ರತಿಷ್ಠೆಯಿಲ್ಲವೆಂದು, ನನಗೆ ಮಹಿಳೆಯರಿಗೆ ಅಪಮಾನ ಮಾಡುವ ಉದ್ದೇಶವಿಲ್ಲವೆಂದು, ಮಾತಿನ ನಡುವೆ ಆಂಗ್ಲ ಭಾಷೆಯ ಗಾದೆಯನ್ನು ಉಲ್ಲೇಖಿಸಿದ್ದೇನೆ ಎಂದು ಹೇಳಿದ್ದಾರೆ. ಬೇಷರತ್ತಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದೂ ರಮೇಶ್ ಕುಮಾರ್ ಹೇಳಿದ್ದಾರೆ. ರಮೇಶ್ ಕುಮಾರ್ ಮಾತ್ರವೇ ಅಲ್ಲದೆ, ಅವರ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಕ್ಷಮೆ ಕೇಳಿದ್ದಾರೆ.


Click it and Unblock the Notifications











