ಲಾಕ್‌ಡೌನ್ ನಿಂದಾಗಿ ಹೋಟೆಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ನಟಿ ಜಯಂತಿ
ಕೊರೊನಾ ಲಾಕ್‌ಡೌನ್ ನಿಂದಾಗಿ ಲಕ್ಷಾಂತರ ಜನಕ್ಕೆ ಮನೆಗಳಿಗೆ ಮರಳಲು ಸಾಧ್ಯವಾಗಿಲ್ಲ. ಪ್ರವಾಸಕ್ಕೆ ಬಂದವರು ಅಲ್ಲಲ್ಲಿಯೇ ಉಳಿದು ಬಿಟ್ಟಿದ್ದಾರೆ.
ಕನ್ನಡದ ಹಿರಿಯ ನಟಿ ಜಯಂತಿ ಸಹ ಇದೇ ಸಮಸ್ಯೆಗೆ ಸಿಲುಕಿದ್ದಾರೆ. ಅವರೂ ಸಹ ಕಳೆದ ಮೂರು ವಾರದಿಂದ ಹಂಪಿಯ ಹೋಟೆಲ್ ಒಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಕೊರೊನಾ ಭೀತಿ ಹೆಚ್ಚು ವ್ಯಾಪಿಸದೇ ಇದ್ದ ಸಮಯದಲ್ಲಿ ನಟಿ ಜಯಂತಿ ತಮ್ಮ ಕುಟುಂಬದೊಂದಿಗೆ ಹಂಪಿಗೆ ಬಂದಿದ್ದರು. ಆದರೆ ಅವರಿನ್ನೂ ಪ್ರವಾಸದಲ್ಲಿರುವಾಗಲೇ ಲಾಕ್‌ಡೌನ್ ಘೋಷಣೆ ಆಯ್ತು. ಹಾಗಾಗಿ ಅವರು ಹಂಪಿಯಲ್ಲೇ ಉಳಿದಿದ್ದಾರೆ.

ಮಾರ್ಚ್ 22 ರಂದು ಪ್ರವಾಸಕ್ಕೆ ಬಂದಿದ್ದರು
ಮಾರ್ಚ್ 22 ರಂದು ನಟಿ ಜಯಂತಿ ಮತ್ತು ಕುಟುಂಬ ಹಂಪಿ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಇನ್ನೂ ನಡೆಯುತ್ತಿರುವಾಗಲೇ ಲಾಕ್‌ಡೌನ್ ಘೋಷಣೆ ಆಯಿತು. ಹಾಗಾಗಿ ಜಯಂತಿ ಮತ್ತು ಕುಟುಂಬ ಹೊಸಪೇಟೆಯ ಹೋಟೆಲ್ ಒಂದರಲ್ಲಿ ಉಳಿಯಬೇಕಾಯಿತು.

ಬೆಂಗಳೂರಿಗೆ ವಾಪಸ್ಸಾಗಲು ಸಾಧ್ಯವಾಗಿಲ್ಲ
ಲಾಕ್‌ಡೌನ್ ಆದ ಬಳಿಕ ಜಯಂತಿ ಮತ್ತು ಕುಟುಂಬಕ್ಕೆ ಬೆಂಗಳೂರಿಗೆ ವಾಪಸ್ ಬರಲು ಆಗಿಲ್ಲ. ಹಾಗಾಗಿ ಹೋಟೆಲ್‌ನಲ್ಲಿಯೇ ಕಳೆದ 22 ದಿನಗಳಿಂದಲೂ ಇದ್ದಾರೆ. ಅಲ್ಲಿಯೇ ಊಟ ಅಲ್ಲಿಯೇ ವಾಸ್ಥವ್ಯ.

ಏಪ್ರಿಲ್ 14 ಕ್ಕೆ ಲಾಕ್‌ಡೌನ್ ಅಂತ್ಯವಾಗುವ ನಿರೀಕ್ಷೆ ಇತ್ತು
ಏಪ್ರಿಲ್ 14 ಕ್ಕೆ ಲಾಕ್‌ಡೌನ್ ಅಂತ್ಯವಾಗಬಹುದು ಎಂಬ ಆಸೆಯಲ್ಲಿದ್ದ ಜಯಂತಿ ಮತ್ತು ಕುಟುಂಬಕ್ಕೆ ಮತ್ತೆ ನಿರಾಸೆಯಾಗಿದ್ದು, ಮೇ 3 ರ ವರೆಗೆ ಲಾಕ್‌ಡೌನ್ ಮುಂದುವರೆದಿರುವುದು ತಲೆನೋವಾಗಿ ಪರಿಣಮಿಸಿದೆ. ಇನ್ನುಳಿದ ದಿನಗಳನ್ನೂ ಸಹ ಅವರು ಹೋಟೆಲ್‌ನಲ್ಲಿಯೇ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಯಂತಿ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು
75 ವರ್ಷ ವಯಸ್ಸಿನ ನಟಿ ಜಯಂತಿ ಅವರಿಗೆ ಕಳೆದ ವರ್ಷ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ಈಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿಯೇ ಇದ್ದು, ಖಾಸಗಿ ಹೋಟೆಲ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಇದ್ದಾರೆ ಎನ್ನಲಾಗಿದೆ.

ಜಯಂತಿ ಅಲ್ಲಿ ಉಳಿಯುವುದೇ ಉತ್ತಮ
ಬಳ್ಳಾರಿ ಜಿಲ್ಲೆಯಲ್ಲಿ 6 ಕೊರೊನಾ ಪಾಸಿಟಿವ್ ಪ್ರಕರಣಗಳು ಈ ವರೆಗೆ ಪತ್ತೆಯಾಗಿದೆ. ಅದೇ ಬೆಂಗಳೂರಿನಲ್ಲಿ 80 ಪ್ರಕರಣಗಳು ದಾಖಲಾಗಿವೆ, ಇದರಲ್ಲಿ 47 ಸಕ್ರಿಯ ಪ್ರಕರಣಗಳು ಇವೆ (ಏಪ್ರಿಲ್ 14 ರ ಅಂಕಿ-ಸಂಖ್ಯೆ). ಹಾಗಾಗಿ ಜಯಂತಿ ಅವರು ಬೆಂಗಳೂರಿಗೆ ಮರಳುವುದಕ್ಕಿಂತಲೂ ಅಲ್ಲಿಯೇ ಉಳಿಯುವುದು ಉತ್ತಮ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.


Click it and Unblock the Notifications











