ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ ಕನ್ನಡದ ಒಬ್ಬ ನಟಿ ಸಿಗಲಿಲ್ವಾ?; ಕಾರುಣ್ಯ ರಾಮ್ ಪ್ರಶ್ನೆ
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಸರ್ಕಾರದ ಈ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ. ಇದೀಗ ಕನ್ನಡ ಸಿನಿಮಾ ತಾರೆಯರು ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.
ಈಗಾಗಲೇ ನಟಿ ರಮ್ಯಾ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಸಾಬೂನು ಹಚ್ಚಿದ್ರೆ ಬೆಳ್ಳಗಾಗಲ್ಲ, ಜನರ ಟ್ಯಾಕ್ಸ್ ವೇಸ್ಟ್ ಮಾಡ್ಬೇಡಿ" ಎಂದು ವ್ಯಂಗ್ಯವಾಡಿದ್ದಾರೆ. ಇದೇ ವಿಚಾರದ ಬಗ್ಗೆ ಕನ್ನಡದ ಮತ್ತೊಬ್ಬ ನಟಿ ಕಾರುಣ್ಯ ರಾಮ್ ಪ್ರತಿಕ್ರಿಯಿಸಿದ್ದಾರೆ. "ಮೈಸೂರ್ ಸ್ಯಾಂಡಲ್ ಸೋಪ್ ಕನ್ನಡಿಗರ ಹೆಮ್ಮೆಯ ಉತ್ಪನ್ನ. ಇಂಥಾ ಉತ್ಪನ್ನದ ಪ್ರಚಾರಕ್ಕೆ ಕನ್ನಡದ ಒಬ್ಬ ನಟಿ ಸಿಗಲಿಲ್ವಾ..? ಪರಭಾಷೆಯ ನಟಿಯಿಂದಲೇ ಪ್ರಚಾರ ಬೇಕಾ..? ಕನ್ನಡದಲ್ಲಿ ಪ್ರತಿಭೆಗಳಿಗೆ ಕೊರತೆ ಇದೆಯಾ..? ದಯಮಾಡಿ ನಮ್ಮ ನಾಡಿನ ಪ್ರತಿಭೆಗಳಿಗೆ ಮೊದಲ ಆದ್ಯತೆ ಕೊಡಿ" ಎಂದು ಪೋಸ್ಟ್ ಮಾಡಿದ್ದಾರೆ.

ಕನ್ನಡಿಗರ ಹೆಮ್ಮೆಯ ಉತ್ಪನ್ನಕ್ಕೆ ರಾಯಭಾರಿಯಾಗಿ ಬಾಲಿವುಡ್ ನಟಿಯನ್ನು ನೇಮಿಸಿರುವ ಬಗ್ಗೆ ಕಾರುಣ್ಯ ರಾಮ್ ಫಿಲ್ಮಿಬೀಟ್ ಜೊತೆ ವಿವರವಾಗಿ ಮಾತನಾಡಿದ್ದಾರೆ. "ನಮ್ಮ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್ ಪ್ರಚಾರಕ್ಕೆ ಬಾಲಿವುಡ್ ನಟಿಯನ್ನು ಆಯ್ಕೆ ಮಾಡುವ ಅವಶ್ಯಕತೆ ಏನಿತ್ತು? ನಮ್ಮಲ್ಲೇ ಸಾಕಷ್ಟು ಕಲಾವಿದರು ಇದ್ದರು ಅಲ್ಲವೇ? ಅದಕ್ಕಾಗಿ 2 ವರ್ಷಕ್ಕೆ ತಮನ್ನಾ ಅವರಿಗೆ 6.20 ಕೋಟಿ ರೂ. ಕೊಡುವ ಅಗತ್ಯ ಏನಿತ್ತು?" ಎಂದು ಕಾರುಣ್ಯ ರಾಮ್ ಪ್ರಶ್ನಿಸಿದ್ದಾರೆ.
ಮಾತು ಮುಂದುವರೆಸಿರುವ ಕಾರುಣ್ಯ "ನಾವೆಲ್ಲ ದಶಕಗಳಿಂದ ಮೈಸೂರ್ ಸ್ಯಾಂಡಲ್ ಸೋಪ್ ಅನ್ನು ಬಳಸುತ್ತಾ ಬರುತ್ತಿದ್ದೇವೆ. ಇಷ್ಟು ದಿನ ಈ ರೀತಿ ನಟಿಯರನ್ನು ಕರೆತಂದು ಪ್ರಚಾರ ಮಾಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಯಾಕೆ ಸರ್ಕಾರ ಹಾಗೂ ಸಂಬಂಧಪಟ್ಟವರು ಇಂತಹ ನಿರ್ಧಾರಕ್ಕೆ ಬಂದರು ಎನ್ನುವುದು ಗೊತ್ತಿಲ್ಲ. ಈ ಹಿಂದೆ ನಂದಿನಿ ಹಾಲಿನ ಉತ್ಪನ್ನಗಳಿಗೆ ಪುನೀತ್ ರಾಜ್‌ಕುಮಾರ್ ಅವರು ಉಚಿತವಾಗಿ ರಾಯಭಾರಿ ಆಗಿದ್ದರು. ಸರ್ಕಾರದ ಕಾರ್ಯಕ್ರಮ ಅಂದಾಗ ನಾವೆಲ್ಲಾ ಯಾವುದೇ ಪ್ರತಿಫಲ ಅಪೇಕ್ಷಿಸದೇ ಭಾಗವಹಿಸುತ್ತೇವೆ. ಆದರೆ ಈಗ ಯಾಕೆ ಕನ್ನಡದವರಿಗೆ ಆದ್ಯತೆ ಕೊಡಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದು ಯಾಕೆ ಎನ್ನುವ ಬಗ್ಗೆ ಇತ್ತೀಚೆಗೆ ಸಚಿವರು ಸ್ಪಷ್ಟನೆ ನೀಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೈಸೂರ್ ಸ್ಯಾಂಡಲ್ ಸೋಪ್ ಅನ್ನು ಕೊಂಡೊಯ್ಯಲು ಈ ಪ್ರಯತ್ನ ಮಾಡಿದ್ದೇವೆ. ಕನ್ನಡಿಗರನ್ನು ಆಯ್ಕೆ ಮಾಡುವ ಪ್ರಯತ್ನ ನಡೀತು. ಆದರೆ ಅವರೆಲ್ಲಾ ಬ್ಯುಸಿ ಇದ್ದರು. ಸಾಧ್ಯವಾಗಿರಲಿಲ್ಲ. ಇನ್ನು ತಮನ್ನಾ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 2 ಕೋಟಿ 80 ಲಕ್ಷ ಫಾಲೋವರ್ಸ್ ಇದ್ದಾರೆ. ಇದು ಕೂಡ ಪ್ರಚಾರಕ್ಕೆ ಸಹಕಾರಿ ಆಗುತ್ತದೆ ಎಂದಿದ್ದರು. ಈ ಬಗ್ಗೆ ಕೂಡ ನಟಿ ಕಾರುಣ್ಯ ರಾಮ್ ಮಾತನಾಡಿದ್ದಾರೆ.
"ನಾನು ಕೂಡ ಸಚಿವರಾದ ಎಂ. ಬಿ ಪಾಟೀಲ್ ಸಾಹೇಬ್ರು ಮಾತನಾಡಿದ್ದನ್ನು ಕೇಳಿಸಿಕೊಂಡೆ. ಅದರಲ್ಲಿ ಅವರು ತಮನ್ನಾ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಬಗ್ಗೆ ಹೇಳುತ್ತಾರೆ. ಇದನ್ನೇ ಮಾನದಂಡವಾಗಿಟ್ಟುಕೊಂಡರೆ ಆಕೆಗಿಂತ ಜನಪ್ರಿಯತೆ ಗಳಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಕಡಿಮೆ ಫಾಲೋವರ್ಸ್ ಹೊಂದಿರುವವರು ಇದ್ದಾರೆ. ಹಾಲಿವುಡ್ ನಟ ಟಾಮ್ ಕ್ರೂಸ್ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಎಂತಹ ಅದ್ಭುತ ನಟ. ಅವರ ಜನಪ್ರಿಯತೆ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಆದರೆ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಕೋಟಿ 30 ಲಕ್ಷ ಫಾಲೋವರ್ಸ್ ಇದ್ದಾರೆ. ಹಾಗಂದ ಮಾತ್ರಕ್ಕೆ ಅವರ ಜನಪ್ರಿಯತೆ ಕಮ್ಮಿ ಎಂದು ಅರ್ಥ ಅಲ್ಲ" ಎಂದು ಕಾರುಣ್ಯ ತಿಳಿಸಿದ್ದಾರೆ.
"ಇಷ್ಟು ವರ್ಷ ಯಾವುದೇ ಪ್ರಚಾರ ಇಲ್ಲದೇ ನಾವೆಲ್ಲರೂ ಮೈಸೂರ್ ಸ್ಯಾಂಡಲ್ ಸೋಪ್ ಬಳಸುತ್ತಾ ಬರ್ತಿದ್ದೇವೆ. ನಮ್ಮ ತಂದೆ ಇಂದಿಗೂ ಅದೇ ಸೋಪ್ ಬಳಸುತ್ತಾರೆ. ಅವರಿಗೆ ಚಿತ್ರರಂಗದ ಬಗ್ಗೆ ಗೊತ್ತಿಲ್ಲ. ತಮನ್ನಾ ಯಾರೂ ಎನ್ನುವುದು ಗೊತ್ತಿಲ್ಲ. ಅಥವಾ ಯಾವುದೇ ಜಾಹೀರಾತು ನೋಡಿ ಆ ಸೋಪನ್ನು ಬಳಸುತ್ತಿಲ್ಲ. ನಮಗೆಲ್ಲಾ ಆ ಸೋಪಿನ ಬಗ್ಗೆ ಚೆನ್ನಾಗಿ ಗೊತ್ತು. ಈಗ ತಮನ್ನಾ ಅವರನ್ನು ರಾಯಭಾರಿಯಾಗಿ ನೇಮಿಸಿ ಪ್ರಚಾರ ಮಾಡಿ ಅದರ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸುವ ಅವಶ್ಯಕತೆ ಇರಲಿಲ್ಲ" ಎಂದು ಕಾರುಣ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ತನ್ನ ಬ್ರಾಂಡ್ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ನಿಯಮಿಸಿದೆ. ಈ ಸಂಬಂಧ ಒಪ್ಪಂದ ನಡೆದಿದ್ದು ಅದರ ಖಚಿತ ಮಾಹಿತಿ ಹೊರಬಿದ್ದಿದೆ. ಇದೇ ಕಾರಣಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ತೆರಿಗೆ ಹಣವನ್ನು ಯಾಕೆ ಬಾಲಿವುಡ್ ನಟಿಗೆ ಕೊಡಬೇಕು. ಅದು ಕೂಡ 2 ವರ್ಷಕ್ಕೆ 6.20 ಕೋಟಿ ರೂ. ಎಂದು ಅಸಮಾಧಾನ ವ್ಯಕ್ತವಾಗುತ್ತಿದೆ.
ಸರ್ಕಾರದ ಈ ನಡೆ ಖಂಡಿಸಿ ನಿನ್ನೆ(ಮೇ 23) ಕನ್ನಡ ಪರ ಸಂಘಟನೆ ಕಾರ್ಯಕರ್ತರು ಯಶಶವಂತಪುರದ KSDL ಕಾರ್ಖಾನೆ ಹೊರಗೆ ಪ್ರತಿಭಟನೆ ನಡೆಸಿದರು. "ತಮನ್ನಾ ಅವರನ್ನು ನೋಡಿ ಜನ ಮೈಸೂರ್ ಸ್ಯಾಂಡಲ್ ಸೋಪ್ ಖರೀದಿಸುತ್ತಾರಾ? ಜನಕ್ಕೆ ಅಗತ್ಯ ಇದ್ದರೆ ಖರೀದಿಸುತ್ತಾರೆ. ಪುನೀತ್ ರಾಜ್‌ಕುಮಾರ್ ಅವರು ನಂದಿನಿ ಹಾಲಿನ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಬ್ರ್ಯಾಂಡ್ ಎಷ್ಟರಮಟ್ಟಿಗೆ ತಲುಪಿದೆ ಎನ್ನುವುದನ್ನು ನೋಡಿದ್ದೇವೆ. ಯಾವುದೇ ನಟಿ ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ನಾವು ಬಿಡಲ್ಲ" ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹೇಳಿದ್ದಾರೆ.
ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ತಮನ್ನಾ ಆಯ್ಕೆಯನ್ನು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು ಬಹಳ ತೀಷ್ಣವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಸುದೀರ್ಘವಾಗಿ 'X' ಖಾತೆಯಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ. "ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂಪಾಯಿ ತೆತ್ತು ನೇಮಕ ಮಾಡಿರುವುದು ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ನಡೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕೆಂಡಕಾರಿದ್ದಾರೆ. ಯಾವ ತಮನ್ನಾನೂ ಬೇಡ, ಸುಮನ್ನಾನೂ ಬೇಡ. ಬೇಕಿದ್ರೆ ನಾನೇ ರಾಯಭಾರಿ ಆಗ್ತೀನಿ. ಮೈಸೂರು ಸ್ಯಾಂಡಲ್ ಸೋಪ್ ಎನ್ನುವುದೇ ಒಂದು ಬ್ರ್ಯಾಂಡ್ ಎಂದಿದ್ದಾರೆ.
ಒಟ್ಟಾರೆ ಯಾರ ಆಕ್ರೋಶಕ್ಕೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗಾಗಲೇ ಸಚಿವರಾದ ಎಂ. ಬಿ ಪಾಟೀಲ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ತಮನ್ನಾಗೂ ಮುನ್ನ ನಾವು ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಪೂಜಾ ಹೆಗ್ಡೆ ಹಾಗೂ ಕಿಯಾರಾ ಅದ್ವಾನಿ ಅವರನ್ನು ನೇಮಿಸಲು ಯತ್ನಿಸಿದ್ದೆವು. ಅವರೆಲ್ಲಾ ಬೇರೆ ಬೇರೆ ಕಮೀಟ್‌ಮೆಂಟ್ ಇದೆ ಎಂದರು. ಹಾಗಾಗಿ ತಮನ್ನಾ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಮ್ಮ ಉತ್ಪನ್ನವನ್ನು ಪ್ರಚಾರ ಮಾಡಲು, ಬೇರೆ ಉತ್ಪನ್ನಗಳ ಎದುರು ಪೈಪೋಟಿ ಎದುರಿಸಲು ಈ ನಿರ್ಧಾರ ಕೈಗೊಂಡಿದ್ಧೇವೆ ಎಂದು ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಮಾತ್ರ ನಿಂತಿಲ್ಲ.


Click it and Unblock the Notifications











