ಮಗನ ಚಿತ್ರ ಹಂಚಿಕೊಂಡ ನಟಿ ಮಯೂರಿ: ಮುದ್ದಾದ ಹೆಸರಿಟ್ಟಿದ್ದಾರೆ ದಂಪತಿ
ನಟಿ ಮಯೂರಿ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮಗುವಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಜೊತೆಗೆ ಮಗುವಿನ ಹೆಸರನ್ನೂ ಸಹ ಹೇಳಿದ್ದಾರೆ.
ಕಳೆದ ವರ್ಷ ಜೂನ್ 12 ರಂದು ಸರಳ ಸಮಾರಂಭದಲ್ಲಿ ಗೆಳೆಯ ಅರುಣ್ ಅನ್ನು ವರಿಸಿದ್ದ ಮಯೂರಿ ಇದೇ ವರ್ಷ ಮಾರ್ಚ್ 16 ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಮಯೂರಿ, ಅರುಣ್ ಮಗುವಿನೊಂದಿಗೆ ಸುಂದರ ಫೋಟೋಶೂಟ್ ಮಾಡಿಸಿಕೊಂಡು ಚಿತ್ರಗಳ ಗುಚ್ಛವನ್ನು ವಿಡಿಯೋ ಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವಿಗೆ 'ಆರವ್' ಎಂದು ಹೆಸರಿಟ್ಟಿರುವುದಾಗಿ ಹೇಳಿದ್ದಾರೆ.

''ಮಾರ್ಚ್ 15, 2021ರಂದು ಮಗ ಹುಟ್ಟಿದ್ದಾನೆ. ಬದುಕು ಸಂಪೂರ್ಣವಾಗಿ ಬದಲಾಗಿದೆ. ನನ್ನ ಮಗನೇ ನನಗೀಗ ಹೊಸ ಪ್ರಪಂಚ. ನನ್ನ ಮಗು ಆರವ್'' ಎಂದು ಬರೆದುಕೊಂಡಿದ್ದಾರೆ ನಟಿ ಮಯೂರಿ. ಮಗು ಹುಟ್ಟಿ ಹದಿನೈದು ದಿನಕ್ಕೆ ಫೊಟೊ ಶೂಟ್ ಮಾಡಿಸಲಾಗಿತ್ತು. ಅದನ್ನು ಈಗ ಹಂಚಿಕೊಂಡಿದ್ದಾರೆ ಮಯೂರಿ.

Recommended Video
'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ನಟನೆ ಆರಂಭಿಸಿದ್ದ ಮಯೂರಿ ಆ ನಂತರ 'ಕೃಷ್ಣ ಲೀಲ' ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟರು. ನಂತರ 'ಇಷ್ಟಕಾಮ್ಯ', ಶಿವಣ್ಣನ ಜೊತೆ 'ರುಸ್ತುಂ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ಬಿಡುಗಡೆ ಆದ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾದಲ್ಲಿಯೂ ಧ್ರುವ ಸರ್ಜಾ ತಂಗಿಯ ಪಾತ್ರದಲ್ಲಿ ನಟಿಸಿದ್ದರು ಮಯೂರಿ.


Click it and Unblock the Notifications











