ನಟ ದರ್ಶನ್ ನನ್ನ ಬೆಸ್ಟ್ ಫ್ರೆಂಡ್: ನಿಖಿತಾ ತುಕ್ರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಿಖಿತಾ ತುಕ್ರಲ್ ಅವರಿಗೆ ಸಂಬಂಧವಿದೆ ಎಂಬ ಆರೋಪಗಳು ಕೇಳಿಬಂದಾಗ ಅವರ ಮೇಲೆ ಕನ್ನಡ ಚಿತ್ರೋದ್ಯಮ ತಾತ್ಕಾಲಿಕವಾಗಿ ನಿಷೇಧ ಹೇರಿತ್ತು. ಆ ಬಳಿಕ ನಿಖಿತಾ ಕೂಡ ಮೌನಕ್ಕೆ ಶರಣಾಗಿದ್ದರು. ಈಗ ದರ್ಶನ್ ಹಾಗೂ ನಿಖಿತಾ ಜೋಡಿಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಅದ್ದೂರಿ ಚಿತ್ರ ಸುದ್ದಿಯಲ್ಲಿದೆ. ಈ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ಪತ್ನಿಯ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಬಿಡುಗಡೆಯಾದ ಮೇಲೆ ದರ್ಶನ್ ಅಭಿನಯದ 'ಸಾರಥಿ' ಚಿತ್ರ ತೆರೆಕಂಡಿತು. ಬಾಕ್ಸಾಫೀಸರಲ್ಲಿ ಈ ಚಿತ್ರ ಲಂಗು ಲಗಾಮಿಲ್ಲದಂತೆ ಕಲೆಕ್ಷನ್ ಮಾಡಿದ್ದನ್ನು ನೋಡಿದ್ದೀರಿ. ಈಗ ದರ್ಶನ್ ಜೊತೆ ತಾವು ಅಭಿನಯಿಸಿರುವ ಐತಿಹಾಸಿಕ ಚಿತ್ರ 'ಸಂಗೊಳ್ಳಿ ರಾಯಣ್ಣ' ಬಿಡುಗಡೆಯಾಗುತ್ತಿದೆ. ಇದೂ ಸಹ ಅಷ್ಟೇ ಬಾಕ್ಸಾಫೀಸ್ ಕೊಳ್ಳೆಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ನಿಖಿತಾ.
ತಮ್ಮಿಬ್ಬರ ಸಂಬಂಧ ಬಗ್ಗೆ ಇಲ್ಲಸಲ್ಲದ ಆರೋಪಗಳು ಕೇಳಿಬಂದಾಗ ನಾವಿಬ್ಬರೂ ಧೃತಿಗೆಡಲಿಲ್ಲ. ಒಂದೇ ಕುಟುಂಬದವರೆಂಬಂತೆ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಅಭಿನಯಿಸಿದೆವು. ದರ್ಶನ್ ಅವರಂತೂ ನನ್ನಲ್ಲಿ ಧೈರ್ಯ ತುಂಬಿ ಅದ್ಭುತವಾಗಿ ಅಭಿನಯಿಸುವಂತೆ ಪ್ರೋತ್ಸಾಹಿಸಿದರು.
ಇದೆಲ್ಲದರ ಫಲಿತವೇ ನಿಮ್ಮ ಮುಂದೆ ಬರುತ್ತಿರುವ ಸಂಗೊಳ್ಳಿ ರಾಯಣ್ಣ. ಈ ಚಿತ್ರದಲ್ಲಿ ಆಗಿನ ಕಾಲದ ವಸ್ತ್ರಗಳು, ಆಭರಣಗಳು ಹಾಗೂ ಭಾಷೆ ಕೂಡ ಇದೆ. ದರ್ಶನ್ ಜಿ ಅವರ ಪ್ರೋತ್ಸಾಹ ಸ್ಫೂರ್ತಿ ಇಲ್ಲದಿದ್ದರೆ ತಮ್ಮ ಪಾತ್ರ ಇಷ್ಟೊಂದು ಸೊಗಸಾಗಿ ಮೂಡಿಬರುತ್ತಿರಲಿಲ್ಲ ಎಂದಿದ್ದಾರೆ ನಿಖಿತಾ.
ತಮಗೆ ಸಾಕಷ್ಟು ಅವಕಾಶಗಳು ಬಂದರೂ ಉದ್ದೇಶಪೂರ್ವಕವಾಗಿಯೇ ತಾನು ಯಾವುದೇ ಹೊಸ ಕನ್ನಡ ಚಿತ್ರಗಳಿಗೆ ಸಹಿಹಾಕಲಿಲ್ಲ. ಪ್ರಜ್ವಲ್ ದೇವರಾಜ್ ಜೊತೆ ಸೇರಿದಂತೆ ಹಲವಾರು ಯುವನಾಯಕರ ಜೊತೆ ನಟಿಸುವ ಅವಕಾಶ ಬಂತು. ಆದರೆ ನಾನು ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದೆ.
ಇಷ್ಟೆಲ್ಲಾ ಕೆಟ್ಟ ಬೆಳವಣಿಗಳಿಂದ ನಮ್ಮಿಬ್ಬರ ಗೆಳೆತನ ಇನ್ನಷ್ಟು ಗಟ್ಟಿಯಾಗಿದೆ. ಒಟ್ಟಿಗೆ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇವೆ. ಒಬ್ಬರನ್ನೊಬ್ಬರು ಗೌರವಿಸಿಕೊಳ್ಳುತ್ತೇವೆ. ಮುಂದೆಯೂ ಅವಕಾಶ ಸಿಕ್ಕಿದಿದರೆ ಒಟ್ಟಿಗೆ ಅಭಿನಯಿಸುತ್ತೇವೆ. ಅವರು ನನ್ನ ಅತ್ಯುತ್ತಮ ಸಹ ಕಲಾವಿದ. ಜೊತೆಗೆ ಬೆಸ್ಟ್ ಫ್ರೆಂಡ್ ಎಂದು ತಮ್ಮ ಮಾತಿಗೆ ಫುಲ್‍ಸ್ಟಾಪ್ ಇಟ್ಟಿದ್ದಾರೆ ನಿಖಿತಾ. (ಏಜೆನ್ಸೀಸ್)


Click it and Unblock the Notifications











