ಬಹುಭಾಷಾ ನಟಿ ಪದ್ಮಪ್ರಿಯಾಗೆ ಕಂಕಣ ಭಾಗ್ಯ
ಬಹುಭಾಷಾ ಪ್ರತಿಭಾವಂತ ನಟಿ ಪದ್ಮಪ್ರಿಯಾ ಅವರು ತಮ್ಮ ಆಪ್ತ ಗೆಳೆಯನನ್ನು ಬುಧವಾರ(ನ.12) ವರಿಸುತ್ತಿದ್ದಾರೆ. ಕೆಲ ಕಾಲ ಚಿತ್ರರಂಗದಿಂದ ದೂರವಿದ್ದ ಪದ್ಮಪ್ರಿಯಾ ಈಗ ಮತ್ತೊಮ್ಮೆ ಬಣ್ಣ ಹಚ್ಚಿದ್ದು ಮಲೆಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡದಲ್ಲಿ ಅಗ್ನಿ ಶ್ರೀಧರ್ ನಿರ್ದೇಶನದ ಶಿವರಾಜ್ ಕುಮಾರ್ ಅವರ ಜೊತೆ ತಮಸ್ಸು ಚಿತ್ರದಲ್ಲಿ ನಟಿಸಿದ್ದರು. ಪದ್ಮಪ್ರಿಯಾ ಅವರು ಮುಂಬೈನಲ್ಲಿ ಗೆಳೆಯ ಜಾಸ್ಮಿನ್ ಜೊತೆ ಮದುವೆಯಾಗಲಿದ್ದು, ಕುಟುಂಬ ವರ್ಗ ಹಾಗೂ ಬಂಧು ಮಿತ್ರರಿಗೆ ಮಾತ್ರ ಮದುವೆ ವೀಕ್ಷಿಸುವ ಭಾಗ್ಯ ಸಿಕ್ಕಿದೆ. ಮಾಧ್ಯಮ ಹಾಗೂ ಸಿನಿಮಾ ಪ್ರಪಂಚದ ಮಂದಿಗಳನ್ನು ದೂರವಿಡಲಾಗಿದೆ.
ಸಿನಿಮಾದಿಂದ ದೂರಾಗಿದ್ದ ಪದ್ಮ: ಮದುವೆಗಾಗಿ ಸಿನಿಮಾರಂಗದಿಂದ ದೂರಾಗುವ ನಟಿಯರ ಮಧ್ಯೆ ಉನ್ನತ ವ್ಯಾಸಂಗದ ನೆಪವೊಡ್ಡಿ ಚಿತ್ರರಂಗದಿಂದ ಪದ್ಮ ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಸಾರ್ವಜನಿಕ ವಲಯದಲ್ಲಿ ಆರ್ಥಿಕ ವ್ಯವಹಾರ ಎಂಬ ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ನ್ಯೂಯಾರ್ಕ್ ನಲ್ಲಿ ಜ್ಞಾನಾರ್ಜನೆ ಮಾಡಿಕೊಂಡು ಬಂದಿದ್ದಾರೆ.

ನ್ಯೂಯಾರ್ಕ್ ನಲ್ಲಿ ಜಾಸ್ಮೀನ್(Jasmine) ರನ್ನು ಭೇಟಿ ಮಾಡಿದ ಪದ್ಮಪ್ರಿಯಾ ಅವರಿಗೆ ಸಿನಿಮಾ ಮಾದರಿಯಲ್ಲೇ ಗೆಳೆಯ-ಪ್ರೇಮ ಉಂಟಾಗಿದೆ.ಈಗ ಇಬ್ಬರು ಹಸೆಮಣೆ ಏರಿದ್ದಾರೆ. ಗುಜರಾತ್ ಮೂಲದ ಜಾಸ್ಮೀನ್ ಬಡತನ ನಿರ್ಮೂಲನಾ ಸಂಘಟನೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.
ಬಹುಮುಖ ಪ್ರತಿಭೆ: ಭರತನಾಟ್ಯ ಕಲಾವಿದೆ, ರೂಪದರ್ಶಿಯಾಗಿರುವ ಪದ್ಮಪ್ರಿಯಾ ಅವರು ತೆಲುಗು, ಕನ್ನಡ, ತಮಿಳು ಹಾಗೂ ಮಲೆಯಾಳಂ ಚಿತ್ರಗಳಲ್ಲದೆ ಹಿಂದಿ, ಬೆಂಗಾಳಿ ಚಿತ್ರಗಳಲ್ಲೂ ನಟಿಸಿದ್ದಾರೆ. ಐದು ವರ್ಷಗಳ ಸಿನಿಪಯಣದಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಲ್ಲದೆ 3 ಫಿಲಂಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಬ್ರಿಗೇಡಿಯರ್ ಜಾನಕಿರಾಮನ್ ಹಾಗೂ ವಿಜಯ ದಂಪತಿಯ ಪುತ್ರಿಯಾದ ಸಿಕಂದರಾಬಾದ್, ಆಂಧ್ರಪ್ರದೇಶ, ಪಂಜಾಬ್ ಗಳಲ್ಲಿ ಬೆಳೆದ ಪದ್ಮಪ್ರಿಯಾಗೆ ಓದಿನ ಜೊತೆ ಜೊತೆಗೆ ಚಿತ್ರರಂಗಕ್ಕೂ ಕಾಲಿಟ್ಟರು.
ಬೆಂಗಳೂರು ಕನೆಕ್ಷನ್: ಬಿ.ಕಾಂ ಡಿಗ್ರಿ, ಎಂಬಿಎ ಪಡೆದ ಮೇಲೆ ಬೆಂಗಳೂರಿನ ಜಿಇ ಕ್ಯಾಪಿಟಲ್ ಹಾಗೂ ಸಿಂಫೋನಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದರು. 2001ರಲ್ಲಿ ಮಿಸ್ ಆಂಧ್ರಪ್ರದೇಶ ಆದ ಪದ್ಮಪ್ರಿಯಾ ರೂಪದರ್ಶಿಯಾಗಿ ನಟಿಯಾಗಿ ಬೆಳೆದರು. ಈಗ ಮುಂಬೈನಲ್ಲಿ ಮದುವೆಯಾಗುತ್ತಿರುವ ಪದ್ಮಪ್ರಿಯಾಗೆ ಫಿಲ್ಮಿಬೀಟ್ ತಂಡದಿಂದ ಶುಭ ಹಾರೈಕೆಗಳು.


Click it and Unblock the Notifications