ಕಾಶಿಗೆ ಹೋಗಿ ನೋವು ಹೊರ ಹಾಕಿದ ನಟಿ ಪವಿತ್ರಾ ಗೌಡ
ನಟಿ ಪವಿತ್ರಾ ಗೌಡ ಇತ್ತೀಚೆಗೆ ಕುಂಭಮೇಳದಲ್ಲಿ ಭಾಗಿ ಆಗಿದ್ದರು. ತ್ರಿವೇಣಿ ಸಂಗಮದಲ್ಲಿ ಮೌನಿ ಅಮಾವಾಸ್ಯೆ ದಿನವೇ ಶಾಹಿ ಸ್ನಾನ ಮಾಡಿದ ಬಗ್ಗೆ ವೀಡಿಯೋ ಸಮೇತ ಮಾಹಿತಿ ಹಂಚಿಕೊಂಡಿದ್ದರು. ಆಕೆಯ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್‌ಗಳು ಬಂದಿದ್ದವು. ಇದೀಗ ಆ ಬಗ್ಗೆ ಮತ್ತೊಂದು ಪೋಸ್ಟ್ ಮಾಡಿ ಬೇಸರ ಹೊರ ಹಾಕಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಆರೋಪಿಯಾಗಿ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ನಿಧಾನವಾಗಿ ಸಹಜ ಜೀವನಕ್ಕೆ ಮರಳಿದ್ದರು. ಇನ್ನು ಟೆಂಪಲ್ ರನ್ ಮಾಡಿ ಆ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ತಮ್ಮ 'ರೆಡ್ ಕಾರ್ಪೆಟ್ ಸ್ಟುಡಿಯೋ' ಡಿಸೈನರ್ ಬೊಟಿಕ್ ರೀ-ಲಾಂಚ್ ಮಾಡುತ್ತಿರುವುದಾಗಿಯೂ ಪೋಸ್ಟ್ ಮಾಡಿದ್ದರು.

ಉತ್ತರಪ್ರದೇಶನದ ಪ್ರಯಾಗ್ರಾಜ್ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮೇಳಕ್ಕೆ ಕೋಟಿ ಕೋಟಿ ಜನ ಭಾಗಿ ಆಗುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ. ಉದ್ಯಮಿಗಳು, ಸಿನಿಮಾ ತಾರೆಯರು ಕೂಡ ಈ ಪಟ್ಟಿಯಲ್ಲಿದ್ದಾರೆ. ಇತ್ತೀವೆಗೆ ಆಂಕರ್ ಅನುಶ್ರೀ, ನಿರ್ದೇಶಕ ರಾಜ್. ಬಿ ಶೆಟ್ಟಿ ಸ್ನೇಹಿತರ ಜೊತೆ ಅಲ್ಲಿ ಭೇಟಿ ನೀಡಿದ್ದರು.
ನಟಿ ಪವಿತ್ರಾ ಗೌಡ ಕೂಡ ಮೌನಿ ಅಮಾವಾಸ್ಯೆ ದಿನ ಕುಂಭಮೇಳದಲ್ಲಿ ಪವಿತ್ರಾ ಸ್ನಾನ ಮಾಡಿದ ಬಗ್ಗೆ ಪೋಸ್ಟ್ ಮಾಡಿದ್ದರು. ಅದಕ್ಕೆ ಬಂದ ಕಾಮೆಂಟ್‌ಗಳನ್ನು ನೋಡಿ ಬೇಸರಗೊಂಡಿದ್ದಾರೆ. "ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಗೆದ್ದದ್ದು ಧರ್ಮವೇ. ಮೊದಮೊದಲು ಅಧರ್ಮಕ್ಕೆ ಜಯ ಸಿಕ್ಕಿರಬೋಹುದು ಆದರೆ ಕೊನೆಗೆ ಗೆಲುವಾಗುವುದು ಧರ್ಮಕ್ಕೆ. ಎಲ್ಲಾ ಗೌರವಾನ್ವಿತ ಸುದ್ದಿ ವಾಹಿನಿಗಳಿಗೂ ಹಾಗೂ ಸಾಮಾಜಿಕ ಜಾಲತಾಣಗಳಿಗೂ ನನ್ನ ವಂದನೆಗಳು. ಕೆಲವು ಮಾಧ್ಯಮದವರ ಅಮಾನವೀಯ ಮಾತುಗಳು ಹಾಗೂ ಕೆಲ ವಿಕೃತ ಮನಸ್ಕರ ಕಾಮೆಂಟ್ಸ್ ಬೇಸರ ತಂದಿದೆ. ಕಾಲಾಯ ತಸ್ಮಯ್ ನಮಃ" ಎಂದು ಬರೆದುಕೊಂಡಿದ್ದಾರೆ.
ಸದ್ಯ ಪವಿತ್ರಾ ಗೌಡ ಕಾಶಿಗೆ ತೆರಳಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಅದರ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದ ಬಳಿಕ "ಮೌನಿ ಅಮಾವಾಸ್ಯಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೆ ಧನ್ಯಳು. ಎಲ್ಲಾ ನಕಾರಾತ್ಮಕ ಶಕ್ತಿಯಿಂದ ಮುಕ್ತನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ. ಹರ ಹರ ಮಹಾದೇವ" ಎಂದು ಬರೆದುಕೊಂಡಿದ್ದರು.
ಪವಿತ್ರಾ ಮಾಡಿದ್ದ ಪೋಸ್ಟ್‌ಗೆ ಬಗ್ಗೆ ಕೆಲವರು ವ್ಯಂಗ್ಯ ಮಾಡಿ ಕಾಮೆಂಟ್ ಮಾಡಿದ್ದರು. ಮತ್ತೆ ಕೆಲವರು ಆಕೆಯನ್ನು ಬೆಂಬಲಿಸಿದ್ದರು. "ಮಾಡೋದೆಲ್ಲಾ ಮಾಡಿ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದರೆ ಪಾಪ ನಾಶ ಆಗುತ್ತಾ?" ಎಂದು ಕುಹಕವಾಡಿದ್ದರು. "ಗಂಗಾ ನದಿ ಮಲಿನ ಆಯ್ತು, ದೇವರೇ ನಾವು ಬಂದು ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮುಂಚೆ ನದಿ ಶುದ್ಧೀಕರಣವಾಗಲಿ" ಎಂದು ಮತ್ತೊಬ್ಬರು ಮಾಡಿದ್ದ ಕಾಮೆಂಟ್ ಸಹ ವೈರಲ್ ಆಗಿತ್ತು.
ಇದಕ್ಕೂ ಮುನ್ನ "ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ, ಮೇಲೊಬ್ಬ ಎಲ್ಲವನ್ನೂ ವೀಕ್ಷಿಸುತ್ತಿರುವನು, ನಿಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು" ಎನ್ನುವ ಭಗವತ್‌ಗೀತೆ ಸಾಲುಗಳನ್ನು ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.


Click it and Unblock the Notifications











