ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ನೆರವೇರಿದ ಪೂಜಾ ಗಾಂಧಿ ಮದುವೆ: ಇಲ್ಲಿದೆ ಫೋಟೋಸ್
ಮಳೆ ಹುಡುಗಿ ಪೂಜಾ ಗಾಂಧಿ ಹಾಗೂ ವಿಜಯ್ ಘೋರ್ಪಡೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಕುವೆಂಪು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಪೂಜಾ ಹಾಗೂ ವಿಜಯ್ ಮದುವೆ ನೆರವೇರಿದೆ. ಬಹುಕಾಲದ ಗೆಳೆಯನ ಜೊತೆ 'ಮಂಗಾರು ಮಳೆ' ಚೆಲುವೆ ಹೊಸ ಜೀವನ ಆರಂಭಿಸಿದ್ದಾರೆ.
ಬೆಂಗಳೂರು ಮೂಲದ ಉದ್ಯಮಿ ವಿಜಯ್ ಘೋರ್ಪಡೆ ಜೊತೆ ಪೂಜಾ ಗಾಂಧಿ ಮದುವೆ ನೆರವೇರಿದೆ. ಇತ್ತೀಚೆಗೆ ನಟಿ ಪೂಜಾ ಗಾಂಧಿ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಾ ಬರುತ್ತಿದ್ದಾರೆ. ಕನ್ನಡ ಓದಲು, ಬರೆಯಲು, ಹಾಡು ಹಾಡಲು ಪೂಜಾ ಗಾಂಧಿ ಕಲಿತ್ತಿದ್ದಾರೆ. ಕನ್ನಡದಲ್ಲೇ ಆಮಂತ್ರಣ ಬರೆದು ಪೂಜಾ ಎಲ್ಲರನ್ನೂ ಮದುವೆಗೆ ಆಹ್ವಾನಿಸಿದ್ದರು.

ಯಲಹಂಕ ಸಮೀಪ ಇರುವ ಆರಂಭ ರೆಸ್ಟೋರೆಂಟ್‌ನಲ್ಲಿ ಪೂಜಾ- ವಿಜಯ್ ಮದುವೆ ನೆರವೇರಿದೆ. ನಿರ್ಮಾಪಕರಾದ ಭಾಮಾ ಹರೀಶ್, ಕರಿಸುಬ್ಬು, ನಟ ಸುಂದರ್ ರಾಜ್ ದಂಪತಿ ಸೇರಿದಂತೆ ಚಿತ್ರರಂಗದ ಹಲವರು ಈ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಸದ್ಯ ಪೂಜಾ ಗಾಂಧಿ ಮದುವೆ ಫೋಟೊಗಳು ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಹುಟ್ಟಿದ ಸಂಜನಾ ಗಾಂಧಿ ದೆಹಲಿಯಲ್ಲಿ ಓದಿ ಬೆಳೆದರು. ಪಂಜಾಬಿ ಕುಟುಂಬದ ಹುಡುಗಿ ಸಂಜನಾ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದರು. ಬಳಿಕ ಹಿಂದಿ, ಬೆಂಗಾಳಿ ಹಾಗೂ ಒಂದು ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಬಳಿಕ ಪೂಜಾ ಗಾಂಧಿ ಆಗಿ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಚಿತ್ರದಲ್ಲಿ ನಟಿಸಿ ಗೆದ್ದರು.

'ಮುಂಗಾರು ಮಳೆ' ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಪೂಜಾ ಗಾಂಧಿ ಬಣ್ಣ ಹಚ್ಚಿದ್ದರು. 'ದಂಡುಪಾಳ್ಯ' ಸರಣಿ ಸಿನಿಮಾಗಳಲ್ಲಿ ಕೊನೆಯದಾಗಿ ನಟಿಸಿದ ಪೂಜಾ ಸದ್ಯ 'ಸಂಹಾರಿಣಿ' ಎನ್ನುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಪೂಜಾ ಗಾಂಧಿ ಕರ್ನಾಟಕ ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದರು. ಮೊದಲಿಗೆ ಜೆಡಿಎಸ್ ಪಕ್ಷ ಸೇರಿದ್ದ ಮಳೆ ಹುಡುಗಿ ಬಳಿಕ ಕೆಜೆಪಿ ಪಕ್ಷಕ್ಕೆ ಹೋಗಿದ್ದರು.
ಕೆಜೆಪಿ ಪಕ್ಷದಿಂದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಪಲಾಯನ ಮಾಡಿದ್ದ ಪೂಜಾ ಗಾಂಧಿ 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಪಂಜಾಬಿ ಹುಡುಗಿಯಾದರೂ ಬೆಂಗಳೂರಿನಲ್ಲೇ ನೆಲೆಸಿರುವ ಪೂಜಾ ಕನ್ನಡದ ಹುಡುಗಿಯೇ ಆಗಿಬಿಟ್ಟಿದ್ದಾರೆ. ಇದೀಗ ಕನ್ನಡ ಕಲಿತು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. 2012ರಲ್ಲಿ ಆನಂದ್ ಗೌಡ ಎಂಬುವವರ ಜೊತೆ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು.
ಕನ್ನಡದಲ್ಲೇ ಬರೆದು ಪೂಜಾ ಗಾಂಧಿ ತಮ್ಮ ಮದುವೆಗೆ ಎಲ್ಲರನ್ನು ಆಹ್ವಾನಿಸಿದ್ದರು. "ಆತ್ಮೀಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಗಳಲ್ಲೂ ನೀವು ನನ್ನ ಜೊತೆಗಿದ್ದೀರಿ. ನವೆಂಬರ್ 29-11-2023ನೇ ತಾರೀಕು ಕುವೆಂಪು ಆಶಯದ 'ಮಂತ್ರ ಮಾಂಗಲ್ಯ'ದ ಮೂಲಕ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ,ಆಶೀರ್ವದಿಸಿ' ಎಂದು ಬರೆದಿದ್ದರು.

ಪೂಜಾ ಗಾಂಧಿ ಕನ್ನಡ ಕಲಿಯಲು ಪ್ರಿಯಕರ ವಿಜಯ್ ಘೋರ್ಪಡೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕನ್ನಡ ಚಿತ್ರರಂಗ ಪ್ರವೇಶಿಸಿದ ಬಳಿಕ ಇಲ್ಲಿ ಸಿಕ್ಸಸ್‌ನಿಂದ ಪೂಜಾ ಇಲ್ಲೇ ಸೆಟ್ಲ್ ಆಗಿದ್ದರು. ಹಾಗಾಗಿ ಕನ್ನಡ ಮಾತನಾಡಲು ಕಲಿತಿದ್ದರು. ಆದರೆ ಇತ್ತೀಚೆಗೆ ಕನ್ನಡ ಓದಲು, ಬರೆಯಲು ಹಾಗೂ ಕನ್ನಡ ಹಾಡುಗಳನ್ನು ಹಾಡಲು ಅಭ್ಯಾಸ ಮಾಡುತ್ತಿದ್ದರು. ಆಕೆ ಕನ್ನಡ ಓದಿ, ಬರೆಯಲು ಕಲಿತ್ತಿರುವುದರ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇದ್ದಾರೆ.


Click it and Unblock the Notifications











