'ಮುಂಗಾರು ಮಳೆ' ತೆರೆಕಂಡ 17 ವರ್ಷಗಳ ಬಳಿಕ ಕನ್ನಡ ಬರೆಯಲು ಕಲಿತ ಪೂಜಾ ಗಾಂಧಿ: ಹೇಗಿದೆ ಹ್ಯಾಂಡ್ ರೈಟಿಂಗ್?
ಒಂದು ಕಾಲದಲ್ಲಿ ಕನ್ನಡಿಗರ ಹೃದಯ ಕದ್ದಿದ್ದ ನಟಿ ಪೂಜಾಗಾಂಧಿ. ಯೋಗರಾಜ್ ಭಟ್ ನಿರ್ದೇಶಿಸಿದ್ದ ಕನ್ನಡದ ಎವರ್‌ಗ್ರೀನ್ ಸಿನಿಮಾ 'ಮುಂಗಾರು ಮಳೆ' ಮೂಲಕ ಪೂಜಾ ಗಾಂಧಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಂದು ಕನ್ನಡವೇ ಬಾರದ ನಟಿ ಸ್ಯಾಂಡಲ್‌ವುಡ್‌ನ ದಿಕ್ಕನ್ನೇ ಬದಲಿಸಿದ ಸಿನಿಮಾದ ನಾಯಕಿಯಾಗಿ ಮಿಂಚಿದ್ದರು. ಒಂದೆರಡು ಸಿನಿಮಾ ಮಾಡಿ ಮತ್ತೆ ವಾಪಾಸ್ ಹೋಗುತ್ತಾರೆ ಅಂತ ಅದೆಷ್ಟೋ ಮಂದಿ ಮಾತಾಡಿಕೊಂಡಿದ್ದರು. ಅಂತಹವ ಬಾಯಿ ಮುಚ್ಚಿಸಿ, ಕನ್ನಡಿಗರ ನೆಚ್ಚಿನ ನಟಿಯಾಗಿ ಬೆಳೆದು ನಿಂತಿದ್ದಾರೆ.
'ಮುಂಗಾರು ಮಳೆ' ಸೇರಿದಂತೆ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರೋ ಪೂಜಾ ಗಾಂಧಿ ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಅಲ್ಲದೆ ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಿದ್ದರೆ, ಪೂಜಾಗಾಂಧಿ ಈಗ ಏನು ಮಾಡುತ್ತಿದ್ದಾರೆ? ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಇತ್ತು. ಅದರಂತೆಯೇ ಪೂಜಾ ಗಾಂಧಿ ಈಗ ಕನ್ನಡ ಭಾಷೆಯ ಮೇಲೆ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ ಅನ್ನೋ ಸುಳಿವು ಸಿಕ್ಕಿದೆ.

ಕನ್ನಡದ ಮೇಲೆ ಪೂಜಾ ಗಾಂಧಿ ಒಲವು
17 ವರ್ಷಗಳ ಹಿಂದೆ 'ಮುಂಗಾರು ಮಳೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಕನ್ನಡದ ಒಂದೇ ಒಂದು ಪದ ಕೂಡ ಬರುತ್ತಿರಲಿಲ್ಲ. ಆ ಬಳಿಕ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದಾಗ, ಕನ್ನಡ ಮಾತಾಡಲು ಕಲಿತಿದ್ದರು. ಆದರೆ, ಕನ್ನಡದಲ್ಲಿ ಬರೆಯಲು ಬರುತ್ತಿರಲಿಲ್ಲ. ಈಗ ಪೂಜಾ ಗಾಂಧಿ ಕನ್ನಡ ಬರೆಯಲು ಕಲಿತಿದ್ದಾರೆ. ಇದನ್ನು ಸ್ವತ: ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳು ಕೂಡ ಫುಲ್ ಫಿದಾ ಆಗಿದ್ದರು.
ಇತ್ತೀಚೆಗೆ 'ಮುಂಗಾರು ಮಳೆ' ಸಿನಿಮಾ ಬಿಡುಗಡೆಯಾಗಿ 17 ವರ್ಷಗಳನ್ನು ಪೂರೈಸಿತ್ತು. ಈ ಬೆನ್ನಲ್ಲೇ ಪೂಜಾ ಗಾಂಧಿ ಕನ್ನಡದಲ್ಲಿ ಕೆಲವು ಪದಗಳನ್ನು ಬರೆದು ಹರ್ಷವ್ಯಕ್ತ ಪಡಿಸಿದ್ದರು. " ನನ್ನ ಆತ್ಮೀಯ ಸ್ನೇಹಿತರೇ ಮುಂಗಾರು ಮಳೆ ರಿಲೀಸ್ ಆಗಿ 17 ವರ್ಷಗಳು ಮುಕ್ತಾಯಗೊಂಡಿದೆ. ನನಗೆ ಈ ಸಿನಿಮಾದ ಮೊದಲ ದಿನದ ಶೂಟಿಂಗ್‌ನ ಅನುಭವ ನೆನಪಿಗೆ ಬರುತ್ತಿದೆ. ಆ ವೇಳೆ ನನಗೆ ಒಂದೇ ಒಂದು ಕನ್ನಡ ಪದ ಕೂಡ ಗೊತ್ತಿರಲಿಲ್ಲ. ಆದ್ರೀಗ 17 ವರ್ಷಗಳ ಬಳಿಕ ನನಗೆ ಕನ್ನಡ ಓದು ಹಾಗೂ ಬರೆಯಲು ಬರುತ್ತೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ." ಪೂಜಾ ಗಾಂಧಿ ಬರೆದುಕೊಂಡಿದ್ದರು ಜೊತೆ ವಿಡಿಯೋ ಒಂದನ್ನು ಶೇರ್ ಮಾಡಿದ್ದರು.

ಪೂಜಾ ಗಾಂಧಿ ಹ್ಯಾಂಡ್ ರೈಟಿಂಗ್‌ಗೆ ಫ್ಯಾನ್ಸ್ ಫಿದಾ
ಪೂಜಾ ಗಾಂಧಿ ಕನ್ನಡ ಪ್ರೀತಿಗಷ್ಟೇ ಕನ್ನಡಿಗರು ಮೆಚ್ಚುಗೆ ಸೂಚಿಸಿಲ್ಲ. ಅವರ ಕನ್ನಡ ಹ್ಯಾಂಡ್ ರೈಟಿಂಗ್ ಕೂಡ ಅಷ್ಟೇ ಸುಂದರವಾಗಿದೆ. ಇದನ್ನು ನೋಡಿ ಕನ್ನಡಿಗರು ಮನಸಾರೆ ಹರ್ಷ ವ್ಯಕ್ತಪಡಿಸಿದ್ದಾರೆ. ಪೂಜಾ ಗಾಂಧಿ ಸುಂದರವಾಗಿ ಬರವಣಿಗೆ ಶೈಲಿಗೆ ಭೇಷ್ ಎಂದಿದ್ದಾರೆ. ಅಲ್ಲಲ್ಲಿ ಕನ್ನಡದ ಪದ ದೋಷಗಳು ಕಾಣುತ್ತಿದ್ದರೂ, ಪೂಜಾ ಗಾಂಧಿಗ ಪ್ರಯತ್ನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪೂಜಾಗಾಂಧಿ ಕನ್ನಡ ಬರೆಯೋದನ್ನಷ್ಟೇ ಕಲಿತಿಲ್ಲ. ಇತ್ತೀಚೆಗೆ ಡಾ.ರಾಜ್‌ಕುಮಾರ್ ಹಾಡಿದ್ದ "ಜೇನಿನ ಹೊಳೆಯೋ.." ಅನ್ನೋ ಹಾಡನ್ನು ಹಾಡಿ ಅಭಿಮಾನಿಗಳ ಮನಗೆದ್ದಿದ್ದರು. ಒಂದು ಕಾಲದಲ್ಲಿ ಕನ್ನಡ ಮಾತಾಡುವುದಕ್ಕೆ ಕಷ್ಟ ಪಡುತ್ತಿದ್ದ ಪೂಜಾ ಗಾಂಧಿ ಈಗ ಕನ್ನಡದಲ್ಲೂ ಹಾಡುವುದನ್ನು ನೋಡಿ ಕನ್ನಡಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ಪೂಜಾ ಗಾಂಧಿ ಇಷ್ಟು ದಿನ ಸಿನಿಮಾದಿಂದ ದೂರ ಉಳಿದಿದ್ದರೂ, ಕನ್ನಡಿಗರಿಂದ ದೂರ ಆಗಿಲ್ಲ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಸದ್ಯ ಪೂಜಾ ಗಾಂಧಿ ಹೊಸ ಸಿನಿಮಾಗಳು ಅನೌನ್ಸ್ ಆಗಿಲ್ಲ. ಇನ್ನೊಂದು ಕಡೆ ರಾಜಕೀಯದಲ್ಲೂ ಸಕ್ರಿಯವಾಗಿಲ್ಲ. ಹೀಗಾಗಿ ನಟಿ ಪೂಜಾ ಗಾಂಧಿ ಮುಂದಿನ ನಡೆಯೇನು ಅನ್ನೋದು ಇನ್ನೂ ನಿಗೂಢವಾಗಿಯೇ ಇದೆ. ಈ ವರ್ಷನಾದರೂ ಪೂಜಾ ಗಾಂಧಿ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರಾ? ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಾರಾ? ಅನ್ನೋ ಪ್ರಶ್ನೆಯಂತೂ ಎದುರಾಗಿದೆ.


Click it and Unblock the Notifications











