"ದಕ್ಷಿಣ ಭಾರತೀಯರು ಆಫ್ರಿಕಾದವರಂತೆ ಕಾಣ್ತಾರೆ"; ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಣೀತಾ ತಿರುಗೇಟು
ವಿವಾದಾತ್ಮಕ ಹೇಳಿಕೆಗಳಿಂದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಪದೇ ಪದೆ ಸುದ್ದಿ ಆಗುತ್ತಾರೆ. ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ಹಾಕುವ ಪದ್ಧತಿಯನ್ನು ಭಾರತದಲ್ಲೂ ಜಾರಿಗೆ ತರಬೇಕು ಎಂದು ಹೇಳಿ ಇತ್ತೀಚೆಗೆ ಹಲವರು ಕೆಂಗಣ್ಣಿಗೆ ಗುರಿ ಆಗಿದ್ದರು. ಇದೀಗ ಭಾರತೀಯರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ಸಂದರ್ಶನವೊಂದರಲ್ಲಿ ಭಾರತವು ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರ, ಅದಕ್ಕೆ ಕಾರಣ ಏನು ಎನ್ನುವ ಬಗ್ಗೆ ಸ್ಯಾಮ್ ಪಿತ್ರೋಡಾ ಮಾತನಾಡಿದ್ದಾರೆ. ಆದರೆ ಈ ಹೇಳಿಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. "ಭಾರತೀಯರು ಕಳೆದ 75 ವರ್ಷಗಳಿಂದಲೂ ತಮ್ಮೆಲ್ಲಾ ವೈವಿಧ್ಯತೆಗಳ ನಡುವೆಯೂ ಸಂತೋಷದಿಂದ ಬದುಕುತ್ತಿದ್ದಾರೆ. ಕೆಲವೊಮ್ಮೆ ಗಲಭೆಗಳಾಗಿರಬಹುದು. ಆದರೆ ಅಷ್ಟೇ ಬೇಗ ಅದೆಲ್ಲ ಮರೆತು ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ ಎಂದು 'ದಿ ಸ್ಟೇಟ್ಸ್‌ಮನ್' ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತದ ವೈವಿಧ್ಯತೆಯ ಬಗ್ಗೆ ಮಾತ್ರ ಸ್ಯಾಮ್ ಪಿತ್ರೋಡಾ ಮಾತನಾಡಿದ್ದರೆ ಯಾರು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಮುಂದುವರೆದು ಮಾತನಾಡಿರುವ ಸ್ಯಾಮ್ ಪಿತ್ರೋಡಾ "ಭಾರತದ ಪೂರ್ವ ಭಾಗದವರು ಚೀನಾದವರಂತೆ ಕಾಣ್ತಾರೆ, ಇನ್ನು ದಕ್ಷಿಣ ಭಾರತೀಯರು ಆಫ್ರಿಕರನ್ನರಂತೆ ಕಾಣ್ತಾರೆ. ಉಳಿದಂತೆ ಭಾರತದ ಪಶ್ಚಿಮ ಭಾಗದವರು ಅರಬ್ಬರಂತೆ ಕಂಡರೆ, ಉತ್ತರ ಭಾರತೀಯರು ಬಿಳಿ ಚರ್ಮವುಳ್ಳವರಾಗಿದ್ದಾರೆ. ತಮ್ಮ ಬಣ್ಣ, ಸಂಸ್ಕೃತಿ ಹೀಗೆ ಹಲವು ವಿಚಾರಗಳಲ್ಲಿ ವ್ಯತ್ಯಾಸ ಇದ್ದರೂ ಭಾರತೀಯರೆಲ್ಲರೂ ಉತ್ತಮವಾಗಿ, ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ವೈವಿಧ್ಯತೆಗಳ ನಡುವೆ ಕೂಡ ಒಟ್ಟಿಗೆ ಜೀವನ ಸಾಗಿಸುತ್ತಿರುವುದೇ ಭಾರತೀಯರ ಹೆಗ್ಗಳಿಕೆ" ಎಂದಿದ್ದಾರೆ.
"ದಕ್ಷಿಣ ಭಾರತೀಯರು ಆಫ್ರಿಕರನ್ನರಂತೆ ಕಾಣ್ತಾರೆ" ಎಂದಿರುವ ಸ್ಯಾಮ್ ಪಿತ್ರೋಡಾ ಹೇಳಿಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಂದೇ ಸಾಲಿನಲ್ಲಿ ಸ್ಯಾಮ್ ಪಿತ್ರೋಡಾಗೆ ತಿರುಗೇಟು ನೀಡಿದ್ದಾರೆ. "ನಾನು ದಕ್ಷಿಣ ಭಾರತದವಳು. ನಾನು ಭಾರತೀಯಳಂತೆ ಕಾಣುತ್ತೇನೆ, ಸ್ಯಾಮ್ ಪಿತ್ರೋಡಾ" ಎಂದು ಬರೆದು ಫೋಟೊ ಶೇರ್ ಮಾಡಿದ್ದಾರೆ.
ಸಾಕಷ್ಟು ಜನ ಕಾಮೆಂಟ್ ಮಾಡಿ ಪ್ರಣೀತಾ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. ದೇಶದ ಆಗುಹೋಗುಗಳ ಬಗ್ಗೆ ನಟಿ ಪ್ರಣೀತಾ ಪ್ರತಿಕ್ರಿಯಿಸುತ್ತಿರುತ್ತಾರೆ. 3 ವರ್ಷಗಳ ಹಿಂದೆ ಮದುವೆ ಆಗಿದ್ದ ಪ್ರಣೀತಾ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಲಾಲನೆ ಪಾಲನೆ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಪ್ರಣೀತಾ ಸುಭಾಷ್ ನಟನೆಯ 'ರಾಮನ ಅವತಾರ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಈ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ 'ರಿಷಿ' ಹೀರೊ ಆಗಿ ನಟಿಸಿದ್ದಾರೆ. ಗುರುವಾರವೇ ಚಿತ್ರದ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಗುರುವಾರ ಹಾಗೂ ಶುಕ್ರವಾರ ಚಿತ್ರದ ಟಿಕೆಟ್ ದರ 99 ರೂ. ನಿಗದಿಪಡಿಸಲಾಗಿದೆ.


Click it and Unblock the Notifications










