"ವೈವಾಹಿಕ ಜೀವನ ಅಷ್ಟು ಕಂಫರ್ಟ್ ಅನ್ನಿಸಲಿಲ್ಲ. ನಾನು ಒಳ್ಳೆ ನಿರ್ಧಾರ ತೆಗೆದುಕೊಂಡೆ": ಪ್ರೇಮಾ
ನಮ್ಮ ಮನೆ ಮಗಳೇ ಎನ್ನುವಂತೆ ತೆರೆಮೇಲೆ ಅದ್ಭುತ ಪಾತ್ರಗಳಿಂದ ಮೋಡಿ ಮಾಡಿದ ಚೆಲುವೆ ಪ್ರೇಮಾ. 90 ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸಮಯದಲ್ಲೇ ಮದುವೆ ಆಗಿ ಅಚ್ಚರಿ ಮೂಡಿಸಿದ್ದರು. ಅಷ್ಟೇ ಬೇಗ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ನಟಿ ಪ್ರೇಮಾ ವೈವಾಹಿಕ ಜೀವನ, ಆರೋಗ್ಯದ ಬಗ್ಗೆ ಸಾಕಷ್ಟು ಅಂತೆಕಂತೆ ಸುದ್ದಿಗಳು ಹರಿದಾಡಿದ್ದವು. ಆದರೆ ಯಾವುದಕ್ಕೂ ಆಕೆ ಪ್ರತಿಕ್ರಿಯಿಸುವ ಮನಸ್ಸು ಮಾಡಿರಲಿಲ್ಲ. ಮದುವೆ ನಂತರ ಪ್ರೇಮಾ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿತ್ತು. 'ಶಿಶಿರ' ಸಿನಿಮಾ ನಂತರ ಚಿತ್ರರಂಗದಿಂದ ದೂರವೇ ಉಳಿದರು. 8 ವರ್ಷಗಳ ನಂತರ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮತ್ತೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಇದೇ ವರ್ಷ 'ವೆಡ್ಡಿಂಗ್ ಗಿಫ್ಟ್' ಚಿತ್ರದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
2006ರಲ್ಲಿ ಕೊಡಗಿನ ಜೀವನ್ ಅಪ್ಪಚ್ಚು ಎಂಬುವವರನ್ನು ಪ್ರೇಮಾ ಮದುವೆ ಆಗಿದ್ದರು. ವೈಯಕ್ತಿಕ ಜೀವನದ ಬಗ್ಗೆ ಸದಾ ಮೌನ ವಹಿಸುತ್ತಿದ್ದ ನಟಿ ಪ್ರೇಮಾ ಇದೇ ಮೊದಲ ಬಾರಿಗೆ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅದೆಲ್ಲಾ ಮುಗಿದ ಅಧ್ಯಾಯ. ಅದೊಂದು ಜೀವನ ಪಾಠ ಅಷ್ಟೇ ಎಂದಿದ್ದಾರೆ.

ಅದೆಲ್ಲಾ ಮುಗಿದ ಅಧ್ಯಾಯ
ವೈವಾಹಿಕ ಜೀವನ ಹೇಗಿದೆ? ಒಂದಷ್ಟು ಸಮಸ್ಯೆಗಳು ಆಗಿತ್ತು ಎಂದು ಕೇಳಿದ್ದೆವು, ಅದರ ಬಗ್ಗೆ ಏನು ಹೇಳುತ್ತೀರಾ ಎನ್ನುವ ನಿರೂಪಕಿ ಪ್ರಶ್ನೆಗೆ "ವೈವಾಹಿಕ ಜೀವನ ಅಷ್ಟು ಕಂಫರ್ಟ್ ಅನ್ನಿಸಲಿಲ್ಲ. ನನಗೆ 100% ಭರವಸೆ ಇರಲಿಲ್ಲ. ಹೌದು ನಾನು ಒಳ್ಳೆ ನಿರ್ಧಾರ ತೆಗೆದುಕೊಂಡೆ. 2006ರಲ್ಲಿ ಮದುವೆ ಆಗಿತ್ತು. ಅದೆಲ್ಲಾ ಮುಗಿದು ಹೋದ ಅಧ್ಯಾಯ. ಚಿತ್ರರಂಗದಲ್ಲಿ ಬ್ಯುಸಿ ಇದ್ದಾಗಲೇ ಮದುವೆ ಆಗಿದ್ದೆ. ಅಷ್ಟೇ ಅದು ಜೀವನದ ಒಂದು ಭಾಗ" ಎಂದಿದ್ದಾರೆ.

ಅದು ನನ್ನ ಜೀವನಕ್ಕೆ ಒಂದು ಪಾಠ
"ನನಗೆ ಹೀಗೆ ಆಯಿತು ಅಂತ ಎಂದು ಅನ್ನಿಸಲಿಲ್ಲ. ಯಾವಾಗ ಏನು ಆಗುತ್ತದೆ ಎನ್ನುವುದು ಗೊತ್ತಿಲ್ಲ. ಪರಿಸ್ಥಿತಿ ಹೇಗಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಫೋಕಸ್ ಆಗಿ ಇರಬೇಕು. ಆ ರೀತಿ ನನಗೆ ಅದು ಒಂದು ಪಾಠ ಆಗಿತ್ತು. ನಾನು ನನ್ನ ಪೋಷಕರಿಗೆ ಧನ್ಯವಾದ ತಿಳಿಸುತ್ತೇನೆ. ಯಾಕಂದ್ರೆ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ಮಹಿಳೆಯರಿಗೆ ನಾನು ಹೇಳುವುದು, ಧೈರ್ಯವಾಗಿರಿ, ಭಯ ಬಿಟ್ಟು ಭರವಸೆ ಇದ್ದರೆ ನೀವು ಎಲ್ಲಿ ಬೇಕಾದರೂ ಹೋಗಬಹುದು" ಎಂದಿದ್ದಾರೆ.

2016ರಲ್ಲಿ ವಿಚ್ಛೇದನ ಕೋರಿ ಅರ್ಜಿ
ಮದುವೆ ಆದ ಆರಂಭದಲ್ಲೇ ನಟಿ ಪ್ರೇಮಾ ಹಾಗೂ ಜೀವನ್ ಅಪ್ಪಚ್ಚು ಬದುಕಿನಲ್ಲಿ ಬಿರುಗಾಳಿ ಎದ್ದಿತ್ತು. 2016ರಲ್ಲಿ ಹಿಂದು ವಿವಾಹಕಾಯ್ದೆ ಸೆಕ್ಷನ್ 13ರ ಅಡಿಯಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಜೀವನ್ ಸುಳ್ಳು ಹೇಳಿ ಮದುವೆ ಆಗಿದ್ದರು. ಅದೇ ಕಾರಣಕ್ಕೆ ದಾಂಪತ್ಯದಲ್ಲಿ ವೈಮನಸ್ಸು ಮೂಡಿತ್ತು ಎಂದು ಕೆಲ ವರ್ಷಗಳ ಹಿಂದೆ ಟಿವಿ9 ಕನ್ನಡ ವರದಿ ಮಾಡಿತ್ತು.

ಒಳ್ಳೆ ಪಾತ್ರ ಸಿಕ್ಕರೆ ನಟಿಸುತ್ತೇನೆ
1995ರಲ್ಲಿ 'ಸವ್ಯಸಾಚಿ' ಚಿತ್ರದಲ್ಲಿ ಮೊದಲ ಬಾರಿಗೆ ಪ್ರೇಮಾ ನಟಿಸಿದ್ದರು. ನಂತರ ಅದೇ ವರ್ಷ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಜೋಡಿಯಾಗಿ 'ಓಂ' ಚಿತ್ರದಲ್ಲಿ ಬಣ್ಣ ಹಚ್ಚಿದರು. ಉಪೇಂದ್ರ ನಿರ್ದೇಶನದ ಈ ಸಿನಿಮಾ ಕೊಡಗಿನ 'ಚೆಲುವಿ'ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಮುಂದೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಕನ್ನಡ, ತೆಲುಗಿನ ಅವತ್ತಿನ ಕಾಲದ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಮೋಡಿ ಮಾಡಿದ್ದರು.


Click it and Unblock the Notifications











