5 ವರ್ಷದ ನಂತರ ತಮಿಳಿಗೆ ಹೊರಟ ಪ್ರಿಯಾಮಣಿ
ನಟಿ ಪ್ರಿಯಾಮಣಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಬಹುಭಾಷ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದಕ್ಷಿಣದ ಯಶಸ್ವಿ ನಟಿ ಪ್ರಿಯಾಮಣಿ ಕಳೆದ ಐದು ವರ್ಷದಿಂದ ತಮಿಳಿನ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಇದೀಗ, 5 ವರ್ಷದ ನಂತರ ಕಾಲಿವುಡ್ ಗೆ ಮತ್ತೆ ಲಗ್ಗೆಯಿಟ್ಟಿದ್ದಾರೆ.
ತಮಿಳಿನ ಖ್ಯಾತ ನಟಿ ತ್ರಿಷಾ ಅಭಿನಯಿಸುತ್ತಿರುವ ಚಿತ್ರದಲ್ಲಿ ಪ್ರಿಯಾಮಣಿ ಕೂಡ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ಜುಗಲ್ ಬಂದಿಯಲ್ಲಿ ಈ ಸಿನಿಮಾ ಮೂಡಿಬರಲಿದೆಯಂತೆ.

ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿರಲಿದ್ದು, ನಾಯಕರು ಇರುವುದಿಲ್ಲಂತೆ. ತ್ರಿಷಾ ಮತ್ತು ಪ್ರಿಯಾಮಣಿ ಅವರೇ ಮುಖ್ಯಪಾತ್ರಗಳು. ಇದುವರೆಗೂ ತ್ರಿಷಾ ಮತ್ತು ಪ್ರಿಯಾಮಣಿ ಒಟ್ಟಿಗೆ ಯಾವ ಸಿನಿಮಾ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸುತ್ತಿದ್ದಾರೆ.
ಇನ್ನುಳಿದಂತೆ ಕನ್ನಡದಲ್ಲಿ ಬ್ಯುಸಿಯಾಗಿರುವ ಪ್ರಿಯಾಮಣಿ 'ಧ್ವಜ' ಮತ್ತು 'ನನ್ನ ಪ್ರಕಾರ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎರಡು ಚಿತ್ರಗಳು ಬಹುತೇಕ ಚಿತ್ರೀಕರಣ ಮುಗಿಸಿದೆ.

2012ರಲ್ಲಿ ಕೊನೆಯದಾಗಿ ಪ್ರಿಯಾಮಣಿ ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದರು. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದ್ದ 'ಚಾರುಲತ' ಕೊನೆಯ ತಮಿಳು ಸಿನಿಮಾ. ವಿಶೇಷ ಅಂದ್ರೆ, ತಮಿಳಿನ 'ಪರುತ್ತಿವೀರನ್' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಇನ್ನು ಕಳೆದ ವರ್ಷ ಆಗಸ್ಟ್ 24 ರಂದು ಪ್ರಿಯಾಮಣಿ ಮತ್ತು ಮುಸ್ತಾಫ್ ರಾಜ್ ಅವರ ಮದುವೆ ಬೆಂಗಳೂರಿನಲ್ಲಿ ನಡೆದಿತ್ತು.


Click it and Unblock the Notifications











