ಯಾರಾದರೂ ರಾಜಕಾರಣಿಯನ್ನು ಮದುವೆ ಮಾಡ್ಕೊಳ್ತೀನಿ ಏನಿವಾಗ?
ನಟಿ ರಚಿತಾರಾಮ್ ಅವರಿಗೆ ರಾಜಕಾರಣಿಗಳ ಪರಿಚಯವಿದೆ. ಮುಂದೆ ಒಂದು ವೇಳೆ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ನೀಡಿದರೂ ವಿಶೇಷವೇನೂ ಇಲ್ಲ ಎಂದು ನಂಬಲಾಗಿತ್ತು. ಆದರೆ, ಇದೀಗ ಉಪೇಂದ್ರ ಅವರ ಪ್ರಜಾಕೀಯಕ್ಕೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿತ್ತು.
ರಚಿತಾ ರಾಮ್ ಸದ್ಯ ಉಪೇಂದ್ರ ಜೊತೆಗೆ 'ಐ ಲವ್ ಯೂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ಪ್ರಜಾಕೀಯಕ್ಕೆ ರಚಿತಾ ಸೇರುತ್ತಾರಾ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಪತ್ರಿಕಾಗೋಷ್ಠಿ ನಡೆದಿದ್ದು, ತರ್ಲೆ ಪ್ರಶ್ನೆಗಳೂ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ರಚಿತಾಗೆ ಆಗಾಗ ನಿಮ್ಮ ಮದುವೆ ಯಾವಾಗ ಎನ್ನವ ಪ್ರಶ್ನೆ ಬರುತ್ತಲೇ ಇರುತ್ತದೆ. ಈಗಲೂ ಅಂತಹ ಪ್ರಶ್ನೆ ಬಂದಿದ್ದು, ಅದಕ್ಕೆ ಪತ್ರಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಖಾದಿ ಜುಬ್ಬ ಹೋಲುವ ಟಾಪ್
ಸದ್ಯಕ್ಕೆ ರಚಿತಾ ರಾಮ್ ಅವರು ಉಪೇಂದ್ರ ಅವರು ನಾಯಕರಾಗಿರುವ 'ಐಲವ್ ಯು' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಮಾಧ್ಯಮಗೋಷ್ಠಿಗೆ ಆಗಮಿಸುವ ವೇಳೆ ರಚಿತಾ ಅವರು ಖಾದಿ ಜುಬ್ಬ ಹೋಲುವ ಟಾಪ್ ಧರಿಸಿದ್ದರು. ಸಾಮಾನ್ಯವಾಗಿ ತಾರೆಯರು ಮಾಧ್ಯಮಗೋಷ್ಠಿಗೆ ಬರುವಾಗ ಕಲರ್ ಫುಲ್ ಬಟ್ಟೆಗಳನ್ನು ಧರಿಸುವುದು ವಾಡಿಕೆ. ಅಥವಾ ಚಿತ್ರಕ್ಕೆ ಸಂಬಂಧಿಸಿದ ಕಾಸ್ಟ್ಯೂಮ್ ನಲ್ಲಾದರು ಕಾಣಿಸುವುದನ್ನು ನೋಡಿರುತ್ತೇವೆ. ಆದರೆ, ರಚಿತಾ ಇವೆರಡೂ ಅಲ್ಲದ ಹಾಗೆ ಖಾದಿ ಮಾದರಿಯ ಚೂಡಿದಾರದೊಂದಿಗೆ ಪ್ರತ್ಯಕ್ಷವಾಗಿದ್ದರು.

ಪ್ರಜಾಕೀಯಕ್ಕೆ ಪ್ರವೇಶಿಸುತ್ತೀರ?
ಇದಕ್ಕೆ ಕಾರಣವನ್ನು ಅವರಲ್ಲೇ ವಿಚಾರಿಸಿದಾಗ ಅವರು ಹೇಳಿದ್ದೇನು ಗೊತ್ತೇ..? "ಖಂಡಿತವಾಗಿ ಇಲ್ಲ. ನಾನು ಮತ್ತು ಉಪ್ಪಿ ಸರ್ ಸಿನಿಮಾ ಬಗ್ಗೆ, ಪಾತ್ರಗಳ ಬಗ್ಗೆ ಮಾತನಾಡಿರುವುದೇ ಹೆಚ್ಚು. ಅದರ ಹೊರತು ರಾಜಕೀಯ - ಪ್ರಜಾಕೀಯದ ಹಂಗು ನಮಗಿಲ್ಲ. ಆದ್ರೆ ಪ್ರಜಾಕೀಯದ ಬಗ್ಗೆ ತಿಳಿದುಕೊಂಡಿದ್ದೀನಿ. ಅದು ಅಷ್ಟೆಲ್ಲ ಸುಲಭದಲ್ಲಿ ಸೇರಲು ಸಾಧ್ಯವಿಲ್ಲ. ಅದಕ್ಕೆ ನಿಯಮಗಳಿವೆ. ಅವರ ಯೋಜನೆಗಳ ಬಗ್ಗೆ ತಿಳಿದುಕೊಂಡರೆ ಅಚ್ಚರಿಯಾಗುತ್ತದೆ. ತುಂಬಾ ಉತ್ತಮವಾಗಿ ಪ್ಲ್ಯಾನ್ ಮಾಡುತ್ತಿದ್ದಾರೆ" ಎಂದರು ರಚಿತಾರಾಮ್.

ರಾಜಕಾರಣಿಯನ್ನು ಮದುವೆ ಮಾಡ್ಕೊಳ್ತೀನಿ ಏನಿವಾಗ?
"ಅರೇ ಈಗಷ್ಟೇ ರಾಜಕೀಯ, ಪ್ರಜಾಕೀಯ ಅಂತಾ ಇದ್ರಿ. ಮದುವೆ ಬಗ್ಗೆ ಕೂಡ ಕೇಳ್ತಾ ಇದ್ದೀರಲ್ಲ?" ಎಂದು ಅಚ್ಚರಿ ವ್ಯಕ್ತಪಡಿಸಿದರು ರಚಿತಾ. ಹಾಗಲ್ಲ ರಚಿತಾ ಅವರೇ, ಸಿನಿಮಾ ಬಿಟ್ಟು ಫ್ಯೂಚರ್ ಬಗ್ಗೆ ಯೋಜನೆ ಹಾಕಿರುತ್ತೀರಲ್ಲ? ಆ ಬಗ್ಗೆ ತಿಳಿಯಲು ಕೇಳುತ್ತಿದ್ದೇವೆ ಎನ್ನುವ ಸಮಜಾಯಿಷಿ ನೀಡಲಾಯಿತು. ಯಾಕೋ ಇವರು ಕಾಲೆಳೆಯೋಕೆ ಅಂತಾನೇ ಮಾತನಾಡಿಸ್ತಿದ್ದಾರೆ ಎಂದು ರಚಿತಾಗೂ ಕನ್ಫರ್ಮ್ ಆಗಿತ್ತು. ಅದಕ್ಕೆ ಆಕೆ "ನಾನು ರಾಜಕೀಯಕ್ಕೂ ಹೋಗಲ್ಲ, ಪ್ರಜಾಕೀಯನೂ ಬೇಡ. ಯಾರಾದರೂ ರಾಜಕಾರಣಿಯನ್ನು ವಿವಾಹ ಮಾಡ್ಕೊಳ್ತೀನಿ ಏನಿವಾಗ? ಎಂದು ವಾರೆಗಣ್ಣಿನಿಂದ ನೋಡಿ ನಕ್ಕರು.

ಹಾಗೇ ಫಾರಿನಲ್ಲಿ ಸೆಟಲಾಗ್ತೀರ?
"ಹಾಗೇ ಫಾರಿನಲ್ಲಿ ಸೆಟಲಾಗ್ತೀರ?" ಮತ್ತೊಂದು ಕಾಲೆಳೆಯುವ ಪ್ರಶ್ನೆ ಬಂತು. "ಏ ಇಲ್ಲಪ್ಪ.. ನನಗೆ ಫಾರಿನ್ ಎಲ್ಲ ಸೆಟಲಾಗಲ್ಲ. ನಾನೇನಿದ್ರೂ ಪಕ್ಕಾ ಲೋಕಲ್. ಊರು ಬಿಟ್ಟು ಬೇರೆ ಕಡೆ ಮನೆ ಮಾಡೋ ಯೋಚನೆಯೇ ಇಲ್ಲ. ಹಾಗೆಯೇ ಸದ್ಯಕ್ಕೆ ಸಿನಿಮಾ ಬಿಟ್ಟು ಬೇರೆ ಥಿಂಕ್ ಮಾಡೋಕೂ ಸಮಯವಿಲ್ಲ ಎಂದು ಗಂಭೀರವಾದರು.

ಐ ಲವ್ ಯೂ, ಕಲ್ಯಾಣ ಮತ್ತೆ ಇನ್ನೊಂದು..!
ಸದ್ಯಕ್ಕೆ ಉಪೇಂದ್ರ ಅವರ ಜೊತೆಗೆ 'ಐ ಲವ್ ಯೂ' ಹೇಳಿ ನಿಖಿಲ್ ಜೊತೆಗೆ 'ಸೀತಾರಾಮ ಕಲ್ಯಾಣ' ಮುಗಿಸಿ ಶಿವಣ್ಣನ ಜೋಡಿಯಾಗಿದ್ದಾರೆ ರಚಿತಾ. ಪಿ. ವಾಸು ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ಪಾತ್ರಕ್ಕೆ ಅಭಿನಯಕ್ಕೆ ಹೆಚ್ಚು ಅವಕಾಶವಿದೆ ಎನ್ನಲಾಗಿದೆ. ಅದು ಯಾವ ಪಾತ್ರ ಎನ್ನುವುದನ್ನು ಸದ್ಯದಲ್ಲೇ ರಿವೀಲ್ ಮಾಡಲಿದೆ ಚಿತ್ರತಂಡ.


Click it and Unblock the Notifications











