ಜಬರ್ದಸ್ತ್ ಡ್ಯಾನ್ಸ್ ಮಾಡಿ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ; ವಿಡಿಯೋ ವೈರಲ್
'ದಮಯಂತಿ' ಸಿನಿಮಾ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಚೆಲುವೆ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ರಾಧಿಕಾ ಬೊಂಬಾಟ್ ಡ್ಯಾನ್ಸ್ ಮಾಡಿ ಜಾರಿ ಬಿದ್ದಿರೋ ವಿಡಿಯೋ ಫುಲ್ ವೈರಲ್ ಆಗಿದೆ.
20 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಾಧಿಕಾ ಕುಮಾರಸ್ವಾಮಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. 2008ರಲ್ಲಿ 'ನವಶಕ್ತಿ ವೈಭವ' ಚಿತ್ರದಲ್ಲಿ ನಟಿಸಿದ್ದ ರಾಧಿಕಾ, ನಂತರ ಮದುವೆ, ಮಗು ಅಂತ ಚಿತ್ರರಂಗದಿಂದ ಬ್ರೇಕ್ ತಗೊಂಡಿದ್ದರು. 2012ರಲ್ಲಿ 'ಲಕ್ಕಿ' ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿ ಬಣ್ಣದ ಲೋಕಕ್ಕೆ ಮತ್ತೆ ಬಂದ ಚೆಲುವೆ ಮರುವರ್ಷವೇ 'ಸ್ವೀಟಿ' ಚಿತ್ರದಲ್ಲಿ ನಟಿಸಿ ಗೆದ್ದರು. ನಂತರ 'ಅವತಾರಂ', 'ರುದ್ರ ತಾಂಡವ', 'ದಮಯಂತಿ', 'ಕಾಂಟ್ರ್ಯಾಕ್ಟ್' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ರಾಧಿಕಾ ಈಗ ಸೈಲೆಂಟ್ ಆಗಿಬಿಟ್ಟಿದ್ದಾರೆ.
2017ರಲ್ಲಿ ಕಿರುತೆರೆಯ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದರು. ಕ್ರೇಜಿ ಡ್ಯಾನ್ಸ್‌ನಿಂದ ವೀಕ್ಷಕರನ್ನು ರಂಜಿಸಿದ್ದರು. ಅಂದಹಾಗೆ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ 2 ಇನ್‌ಸ್ಟಾಗ್ರಾಂ ಖಾತೆಗಳಿದ್ದು, ಸಾಕಷ್ಟು ಜನ ಫಾಲೋ ಮಾಡುತ್ತಿದ್ದಾರೆ. ಈ ಖಾತೆಗಳಲ್ಲಿ ಸ್ವೀಟಿ ಫೋಟೊಗಳು, ವಿಡಿಯೋಗಳು ಹರಿದಾಡುತ್ತಿರುತ್ತದೆ. ಇದು ಆಕೆಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆ ಹೌದೋ ಅಲ್ಲವೋ ಗೊತ್ತಿಲ್ಲ. ಸದ್ಯ ರಾಧಿಕಾ ಡ್ಯಾನ್ಸ್ ಮಾಡಿರೋ ಹೊಸದೊಂದು ವಿಡಿಯೋ ಸಖತ್ ಸೌಂಡ್ ಮಾಡ್ತಿದೆ.
ಡ್ಯಾನ್ಸ್ ಮಾಡಿ ಜಾರಿ ಬಿದ್ದ ರಾಧಿಕಾ
ಹೇಳಿ ಕೇಳಿ ರಾಧಿಕಾ ಕುಮಾರಸ್ವಾಮಿ ಒಳ್ಳೆ ಡ್ಯಾನ್ಸರ್. ಮದುವೆ ಆಗಿ ಒಂದು ಮಗುವಿನ ತಾಯಿಯಾದರೂ ಯುವನಟಿಯರಿಗೆ ಪೈಪೋಟಿ ಕೊಡಬಲ್ಲ ಸೌಂದರ್ಯ ಅವರದು. ಇತ್ತೀಚೆಗೆ ರಾಧಿಕಾ ಡ್ಯಾನ್ಸ್ ಕ್ಲಾಸ್‌ನಲ್ಲಿ ಡ್ಯಾನ್ಸ್ ಮಾಸ್ಟರ್ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕಿ ಧೂಳೆಬ್ಬಿಸಿದ್ದಾರೆ. ಆದರೆ ಕೊನೆಗೆ ಆಯತಪ್ಪಿ ಬಿದ್ದಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದ ಸ್ವೀಟಿ
ಕೆಲ ದಿನಗಳ ಹಿಂದೆ ಸ್ವೀಟಿ ಡ್ಯಾನ್ಸ್ ಮಾಡಿದ್ದ ಇಂಥದ್ದೇ ಮತ್ತೊಂದು ವಿಡಿಯೋ ಸೆನ್ಸೇಷನಲ್ ಕ್ರಿಯೇಟ್ ಮಾಡಿತ್ತು. ಬ್ಲಾಕ್ ಕಲರ್ ಡ್ರೆಸ್‌ನಲ್ಲಿ ಫುಲ್ ಎನರ್ಜಿಯಿಂದ ಬಾಲಿವುಡ್ ಸೂಪರ್ ಹಿಟ್ 'ಮೇರಾ ಯಾರಾ' ಹಾಡಿಗೆ ಬಿಂದಾಸ್ ಸ್ಟೆಪ್ ಹಾಕಿದ್ರು. ಸಮುದ್ರ ತಟದಲ್ಲಿ ಕಣ್ಣಿಗೆ ಗಾಗಲ್ ಹಾಕಿಕೊಂಡು ದರ್ಶನ ಕೊಟ್ಟಿದ್ದ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಹುಬ್ಬೇರಿಸಿದ್ದರು.

ಸ್ವೀಟಿ ಕೈಯಲ್ಲಿವೆ 2 ಸಿನಿಮಾಗಳು
ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿರುವ ಸ್ವೀಟಿ ಕೈಯಲ್ಲಿ 'ಭೈರಾದೇವಿ' ಹಾಗೂ 'ರಾಜೇಂದ್ರ ಪೊನ್ನಪ್ಪ' ಸಿನಿಮಾಗಳಿವೆ. ಆದರೆ ಇತ್ತೀಚೆಗೆ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳದ ರಾಧಿಕಾ ಕುಮಾರಸ್ವಾಮಿ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ ? ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ನಿರ್ಮಾಪಕಿಯಾಗಿ ರಾಧಿಕಾ ವಾಪಸ್
ರಾಧಿಕಾ ಕುಮಾರಸ್ವಾಮಿಯವರು ಒಳ್ಳೆ ಒಳ್ಳೆ ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸಿದೆ. 10 ವರ್ಷಗಳ ಹಿಂದೆ ಮಗಳು ಶಮಿಕಾ ಹೆಸರಿನಲ್ಲಿ ಬ್ಯಾನರ್ ಶುರು ಮಾಡಿದ್ದ ರಾಧಿಕಾ 'ಲಕ್ಕಿ' ಹಾಗೂ 'ಸ್ವೀಟಿ' ಸಿನಿಮಾಗಳನ್ನು ನಿರ್ಮಿಸಿದ್ದರು. ಆದರೆ ನಂತರ ಆ ಬ್ಯಾನರ್‌ನಿಂದ ಸಿನಿಮಾಗಳು ನಿರ್ಮಾಣವಾಗಲಿಲ್ಲ.


Click it and Unblock the Notifications











