ಜೈಲಿನಿಂದ ಹೊರಬಂದ ರಾಗಿಣಿ: 'ಮಾತಾಡೋದು ಜಾಸ್ತಿ ಇದೆ, ಪ್ರೆಸ್ ಮೀಟ್ ಮಾಡ್ತೀನಿ'
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಕೊನೆಗೂ ಸೋಮವಾರ ರಾತ್ರಿ ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಿದ್ದಾರೆ.
ಜನವರಿ 21 ರಂದು ಗುರುವಾರ ಸುಪ್ರೀಂಕೋರ್ಟ್ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿತ್ತು. ಸುಪ್ರೀಂ ಆದೇಶ ಪ್ರತಿ ಪರಪ್ಪನ ಅಗ್ರಹಾರ ಜೈಲು ಸೇರುವುದು ತಡವಾದ ಕಾರಣ ಸೋಮವಾರ ರಾಗಿಣಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ.
ಸುಪ್ರೀಂ ಆದೇಶದಂತೆ ಸ್ಥಳೀಯ ನ್ಯಾಯಾಲಯದಲ್ಲಿ ಕಾನೂನು ಕ್ರಮಗಳನ್ನು ಪೂರೈಸಲಾಗಿದೆ. ನಂತರ ಜೈಲು ಅಧಿಕಾರಿಗಳಿಗೆ ಸುಪ್ರೀಂ ಆದೇಶ ಪ್ರತಿ ಸಲ್ಲಿಸಲಾಯಿತು. ಸುಪ್ರೀಂ ಆದೇಶ ಪ್ರತಿ ಪರಿಶೀಲನೆ ನಡೆಸಿದ ಜೈಲು ಅಧಿಕಾರಿಗಳು ರಾಗಿಣಿ ಅವರನ್ನು ಕಳುಹಿಸಿಕೊಟ್ಟಿದ್ದಾರೆ.

ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಸಮೀಪದಲ್ಲಿದ್ದ ಜಡೇ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ರಾಗಿಣಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಾಗಿಣಿ, ''ನ್ಯಾಯಕ್ಕೆ ಸಿಕ್ಕ ಜಯ ಇದು, ನಾಕಷ್ಟು ವಿಚಾರಗಳನ್ನು ಮಾತನಾಡುವುದು ಬಾಕಿ ಇದೆ, ಪ್ರೆಸ್ ಮೀಟ್ ಮಾಡಿ ಎಲ್ಲವನ್ನು ಚರ್ಚೆ ಮಾಡುತ್ತೇನೆ, ಸದ್ಯಕ್ಕೆ ಏನೂ ಹೇಳುವುದಿಲ್ಲ'' ಎಂದರು.
''ಎಲ್ಲ ಜನತೆಗೆ, ನ್ಯಾಯಾಲಯಕ್ಕೆ ಧನ್ಯವಾದ ತಿಳಿಸುತ್ತೇನೆ. ಸತ್ಯ ಮೇವ ಜಯತೆ ಎಂದು ಹೇಳಲು ಬಯಸುತ್ತೇನೆ. ನನ್ನ ಫ್ಯಾಮಿಲಿ ಜೊತೆ ಸಮಯ ಕಳೆಯಲು ಇಷ್ಟಪಡುತ್ತೇನೆ, ಸ್ವಲ್ಪ ಸಮಯ ತಗೊಂಡು, ಎಲ್ಲವನ್ನು ಮಾತನಾಡುತ್ತೇನೆ'' ಎಂದು ಹೇಳಿ ರಾಗಿಣಿ ಕುಟುಂಬದವರ ಜೊತೆ ಮನೆಗೆ ತೆರಳಿದರು.
ಕಳೆದ ವರ್ಷ ಸೆಪ್ಟೆಂಬರ್ 4 ರಂದು ನಟಿ ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸೆಪ್ಟೆಂಬರ್ 14ರವರೆಗೂ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿಯನ್ನು ಸೆಪ್ಟೆಂಬರ್ 15 ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಇದೀಗ, ಸುಮಾರು 140ಕ್ಕೂ ಹೆಚ್ಚು ದಿನಗಳ ಬಳಿಕ ರಾಗಿಣಿ ಬಿಡುಗಡೆಯಾಗಿದ್ದಾರೆ. ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿನಿ ಎ2 ಆಗಿದ್ದರು.


Click it and Unblock the Notifications











