ಡಾಕ್ಟರ್ ಮಕ್ಕಳು ಡಾಕ್ಟರ್ ಆಗ್ತಾರೆ, ಸ್ಟಾರ್ ಕಿಡ್ಸ್ ಇಂಡಸ್ಟ್ರಿಗೆ ಬರಬಾರ್ದಾ? ನೆಪೋಟಿಸಂ ಬಗ್ಗೆ ರಕ್ಷಿತಾ ಮಾತು
ನೆಪೋಟಿಸಂ ಬಗ್ಗೆ ಕೆಲ ವರ್ಷಗಳಿಂದ ಭಾರೀ ಚರ್ಚೆ ಆಗುತ್ತಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಈ ಬಗ್ಗೆ ಪದೇ ಪದೆ ಪರ - ವಿರೋಧ ವಾದ ಕೇಳಿಬರುತ್ತಲೇ ಇರುತ್ತದೆ. ಸ್ಟಾರ್ ಕಿಡ್ಸ್ ಚಿತ್ರರಂಗಕ್ಕೆ ಬಂದರೆ ಬೇರೆಯವರಿಗೆ ಅವಕಾಶಗಳು ಸಿಗಲ್ಲ ಎನ್ನುವ ಆರೋಪ ಇದೆ. ಸ್ಟಾರ್ಸ್ ಮಕ್ಕಳು ಎನ್ನುವ ಕಾರಣಕ್ಕೆ ಅವರನ್ನು ಚಿತ್ರರಂಗದಲ್ಲಿ ಬೆಳಸಬೇಕಾ? ಎನ್ನುವವರು ಇದ್ದಾರೆ.
ಪ್ರತಿಭೆ ಇರುವ ಯಾರೇ ಆಗಲಿ ತಮ್ಮ ಪರಿಶ್ರಮದಿಂದ ಗೆಲ್ಲಬಹುದು. ಆದರೆ ಕೆಲ ಕ್ಷೇತ್ರಗಳಲ್ಲಿ ಮಾತ್ರ ಆವರ ಹಿನ್ನೆಲೆ ನೋಡಿ ಅವಕಾಶಗಳು, ಸೌಕರ್ಯಗಳು ದೊರೆಯುತ್ತದೆ. ಇದೇ ಕಾರಣಕ್ಕೆ ಅರ್ಹರು ಅವಕಾಶ ವಂಚಿತರಾಗುತ್ತಾರೆ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. ಸ್ವಜನ ಪಕ್ಷಪಾತ ಎನ್ನುವುದು ಚಿತ್ರರಂಗದಲ್ಲಿ ಗಾಢವಾಗಿದೆ ಎಂದು ಕೆಲವರು ಹೇಳುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್‌ನಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಹೆಚ್ಚಾಯಿತು.

ಹಿಂದಿ ಚಿತ್ರರಂಗದಲ್ಲಿದ್ದ ಸ್ವಜನ ಪಕ್ಷಪಾತ ಕೂಡ ಸುಶಾಂತ್ ಸಿಂಗ್ ನಿಧನಕ್ಕೆ ಕಾರಣ ಎನ್ನುವ ಅರ್ಥದಲ್ಲಿ ಕೆಲವರು ಮಾತನಾಡಿದರು. ಬಳಿಕ ಜಾನ್ವಿ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್, ಇಶಾನ್ ಕಟ್ಟರ್ ಸೇರಿದಂತೆ ಹಲವರನ್ನು ನೆಪೋ ಕಿಡ್ಸ್ ಎಂದು ದೂರುವವರು ಇದ್ದಾರೆ. ಇನ್ನು ಸಲ್ಮಾನ್ ಖಾನ್, ಕರೀನಾ ಕಪೂರ್ ಸೇರಿದಂತೆ ಹಲವರು ಇದೇ ರೀತಿ ಚಿತ್ರರಂಗದಲ್ಲಿ ಬೆಳೆದು ಬಂದರು ಎನ್ನುತ್ತಾರೆ.
ಸಾಕಷ್ಟು ಜನ ನೆಪೊಟಿಸಂ ಎನ್ನುವುದನ್ನು ಒಪ್ಪಲು ಸಿದ್ಧರಿಲ್ಲ. ಏನೇ ಸಿನಿಮಾ ಹಿನ್ನಲೆ ಇದ್ದರೂ ತಮ್ಮ ಪರಿಶ್ರಮದಿಂದ ಮಾತ್ರ ಚಿತ್ರರಂಗದಲ್ಲಿ ಉಳಿಯಲು ಸಾಧ್ಯ ಎನ್ನುತ್ತಾರೆ. ಒಂದು ವೇಳೆ ಅದೇ ನಿಜವಾಗಿದ್ದರೆ ಇಂಡಸ್ಟ್ರಿಯಲ್ಲಿ ಸ್ಟಾರ್ಸ್ ಕಿಡ್ಸ್ ಮಾತ್ರ ಸ್ಟಾರ್‌ಗಳಾಗು ಮೆರೆಯುತ್ತಿದ್ದರು ಇನ್ನುತ್ತಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಇದೇ ವಾದ ಮುಂದಿಟ್ಟಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಕೂಡ ಸಿನಿಮಾ ಹಿನ್ನೆಲೆ ಇರುವ ಕುಟುಂಬದಿಂದಲೇ ಚಿತ್ರರಂಗಕ್ಕೆ ಬಂದವರು. ತಂದೆ ಗೌರಿಶಂಕರ್ ಖ್ಯಾತ ಛಾಯಾಗ್ರಾಹಕರಾದ್ದರು. ತಾಯಿ ಮಮತಾ ರಾವ್ ಸಹ ಸಿನಿಮಾಗಳಲ್ಲಿ ನಟಿಸಿದ್ದರು. 'ಅಪ್ಪು' ಸಿನಿಮಾ ಮೂಲಕ ರಕ್ಷಿತಾ ಚಿತ್ರರಂಗಕ್ಕೆ ಬಂದರು. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್‌ನಲ್ಲಿ ರಕ್ಷಿತಾ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

"40 ವರ್ಷ ವಯಸ್ಸಿನಲ್ಲಿ ನನ್ನ ಜೀವನವನ್ನು ನಾನು ಹೇಗೆ ನೋಡ್ತೀನಿ ಅಂದ್ರೆ, ಯಾವುದು ಸುಲಭವಲ್ಲ. ಜೀವನದಲ್ಲಿ ಯಾವುದು ಸುಲಭವಾಗಿ ಧಕ್ಕಲ್ಲ. ನಾನು ಎಲ್ಲದ್ದಕ್ಕೂ ಕಷ್ಟಪಟ್ಟಿದ್ದೇನೆ. ಇಂಡಸ್ಟ್ರಿ ಕಿಡ್ ಎನ್ನುವ ಕಾರಣಕ್ಕೆ ಕೊಂಚ ಬೆಂಬಲ ಸಿಕ್ಕಿರಬಹುದು. ನನಗೆ ನೆಪೋಟಿಸಂ ಎನ್ನುವುದು ಅರ್ಥವೇ ಆಗಲ್ಲ" ಎಂದಿದ್ದಾರೆ.
"ಈಗ ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗ್ತಾರೆ. ಅದು ಅವರ ಸಾಮರ್ಥ್ಯ. ಡಾಕ್ಟರ್ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್ ಆಗ್ತಾರೆ. ನನ್ನ ಗೈನಕಾಲಜಿಸ್ಟ್ ಮಕ್ಕಳು ಡಾಕ್ಟರ್ ಆಗಿದ್ದಾರೆ. ಸ್ಟಾರ್ಸ್ ಕಿಡ್ಸ್ ಏನು ಮಾಡಲು ಸಾಧ್ಯ. ಸ್ಟಾರ್ ಕಿಡ್ಸ್ ಪ್ರತಿಭಾವಂತರಾಗಿದ್ದರೆ ಗೆಲ್ಲುತ್ತಾರೆ. ಮೊದಲ ಸಿನಿಮಾ ಪೋಕಷರು ಮಾಡಬಹುದು. ಬಳಿಕ ಏನು? ನೆಪೋಟಿಸಂ ಕಾರಣಕ್ಕೆ ಸೂಪರ್ ಸ್ಟಾರ್ ಆಗಲು ಸಾಧ್ಯವಿಲ್ಲ" ಎಂದಿದ್ದಾರೆ.
"ಸ್ಟಾರ್ ಕಿಡ್ ಎನ್ನುವುದರಿಂದ ಚಿತ್ರರಂಗಕ್ಕೆ ಬರಲು ದಾರಿ ಆಗಬಹುದು. ಸಣ್ಣ ಬೆಂಬಲ ಸಿಗಬಹುದು. ಬಳಿಕ ನಿಮ್ಮ ಜೀವನ ನೀವೇ ನೋಡಿಕೊಳ್ಳಬೇಕು. ಇವತ್ತು ಕನ್ನಡ, ತೆಲುಗು, ತಮಿಳು ಚಿತ್ರರಂಗ ಎನ್ನುವುದು ಇಲ್ಲ. ಇದು ಒಂದು ಚಿತ್ರರಂಗ. ಸರಿ ಕನ್ನಡದಲ್ಲಿ ನಿಮ್ಮ ಅಪ್ಪ, ಅಮ್ಮ ಇದ್ದಾರೆ. ತೆಲುಗಿಗೆ ಹೋದರೆ ಏನು ಮಾಡುವುದು? ನೀವು ಎಲ್ಲವನ್ನು ಅಲ್ಲಿ ಎದುರಿಸಬೇಕು. ಕಷ್ಟಪಡಬೇಕು" ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ.


Click it and Unblock the Notifications










