ರಾಜ್ ಬಿ ಶೆಟ್ಟಿಗೆ ನಾಯಕಿಯಾಗದ ಮೋಹಕ ತಾರೆ ರಮ್ಯಾ, ದೀಪಾವಳಿಯಂದು ಕಾರಣ ಹೇಳಿದ ನಟಿ!
ಬೆಳಕಿನ ಹಬ್ಬಕ್ಕೆ ಸ್ಯಾಂಡಲ್‌ವುಡ್ ನಟ ನಟಿಯರು ನಾಡಿನ ಜನತೆಗೆ, ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಇದರಲ್ಲಿ ಮೋಹಕ ತಾರೆ ರಮ್ಯಾ ಅವರ ವಿಶ್ ವಿಶೇಷವಾಗಿದೆ. ಕಾರಣ ಏನೆಂದರೆ, ಅವರು ಬಹು ದಿನಗಳಿಂದ ತಮ್ಮ ಅಭಿಮಾನಿಗಳ ಮನದಲ್ಲಿ ಇದ್ದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಹೌದು...ನಟಿ ರಮ್ಯಾ ಅವರು ತಮ್ಮ ಮೊದಲ ನಿರ್ಮಾಣದ ಸಿನಿಮಾ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಸಿನಿಮಾದ ಪೋಸ್ಟರ್ ನೋಡಿ ನಟಿಯ ಅಭಿಮಾನಿಗಳು ಖುಷಿಯಲ್ಲಿ ತೇಲಾಡುತ್ತಿದ್ದರು. ಆದರೆ, ಕೆಲವೆ ದಿನಗಳಲ್ಲಿ ಅವರು ಖುಷಿಯ ಬಲೂನ್ ಟುಸ್ ಆಯಿತು. ಕಾರಣ ಆ ಸಿನಿಮಾದಿಂದ ರಮ್ಯಾ ಹೊರಬಂದಿದ್ದರು. ಈಗ ತಾವು ಏಕೆ ಆ ಸಿನಿಮಾದಿಂದ ಹೊರ ಬಂದೆ ಎಂಬುದಕ್ಕೆ ಮೋಹಕ ತಾರೆ ಸ್ಪಷ್ಟನೆ ನೀಡಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಬಿಡಲು ಕಾರಣ ಕೊಟ್ಟ ರಮ್ಯಾ
ಸಾಮಾಜಿಕ ಮಾಧ್ಯಮದಲ್ಲಿ ಹಬ್ಬದ ಶುಭಾಶಯ ತಿಳಿಸಿರುವ ನಟಿ ರಮ್ಯಾ, "ದೀಪಾವಳಿಯ ಶುಭಾಶಯಗಳು...ಹಳೆಯದನ್ನು ಮರೆತು ಹೊಸತಿನೆಡೆಗೆ ಪಯಣ" ಎಂದಿದ್ದಾರೆ. ಮುಂದುವರಿದು, 'ಸ್ವಾತಿ ಮುತ್ತಿನ ಮಳೆ ಹನಿಯೇ' ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ. ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ" ಎಂದಿದ್ದಾರೆ.
" ಪ್ರೀತಿಸಿದವರ ಅಗಲಿಕೆಯ ನೋವು, ಅದರಿಂದ ಹೊರಬರಲು ಅಸಾಧ್ಯವೆಂದು ತಿಳಿದಿದ್ದರೂ ನಾವು ಮಾಡುವ ಪ್ರಯತ್ನ- ಈ ಅನುಭವವವು ನಮ್ಮನ್ನು ಇನ್ನಷ್ಟು ಪಕ್ವಗೊಳಿಸುತ್ತವೆ. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವು ಈ ಪ್ರಕ್ರಿಯೆಯನ್ನು ಮನಸ್ಸಿಗೆ ನಾಟುವಂತೆ ಸೆರೆ ಹಿಡಿದಿದೆ. ಸಿನಿಮಾದಲ್ಲಿ ಸಿರಿಯ ನಟನೆ ಅದ್ಭುತ. ರಾಜ್ ತಾವೊಬ್ಬ ಪ್ರತಿಭಾನ್ವಿತ ನಟರೆಂದು ನಿರೂಪಿಸಿದ್ದಾರೆ. ಕಥೆಯನ್ನು ಅವರಯ ವಿವರಿಸಿದಾಗ, ಕಥೆಯ ಬಗೆಗಿನ ವಿವರಣೆ ನನ್ನನ್ನು ಭಾವುಕಳನ್ನಾಗಿಸಿತ್ತು" ಎಂದು ಬರೆದುಕೊಂಡಿದ್ದಾರೆ.

"ಪ್ರವೀಣ ಶ್ರಿಯಾನ್ ಛಾಯಾಗ್ರಹಣ, ಮಿಧುನ್ ಮುಕುಂದನ್ ಹಿನ್ನಲೆ ಸಂಗೀತಾ ಬಹಳ ಚೆನ್ನಾಗಿ ಮೂಡಿ ಬಂದಿದ್ದು, "ಪ್ರೇರಣಾ ಥೀಮ್" ನನ್ನ ನೆಚ್ಚಿನ ಹಾಡಾಗಿದೆ. ನೀವೆಲ್ಲರೂ ಈ ಹಾಡು ಕೇಳಬೇಕೆಂಬ ಕಾತುರ ನನಗಿದೆ. ಈ ಚಿತ್ರದ ತಿರುಳು ನಿಮ್ಮ ಮನದಲ್ಲಿ ಬಹಳ ಸಮಯ ಉಳಿಯುತ್ತದೆ ಎಂಬುದು ನನ್ನ ಆಶಯ. ಇಡೀ ಚಿತ್ರತಂಡಕ್ಕೆ ವಿಶೇಷವಾಗಿ ಸುನಯನಾ, ಕೆವಿನ್, ಕಾರ್ತಿಕ್ ಮತ್ತು ಯೋಗಿ ಅವರಿಗೆ ಮನಃಪೂರ್ವಕ ಧನ್ಯವಾದಗಳು" ಎಂದಿದ್ದಾರೆ.
ಸಿನಿಮಾದಿಂದ ಹೊರಬರಲು ಕಾರಣ
ಮುಂದಿನ ಪುಟದಲ್ಲಿ ಸಿನಿಮಾದಿಂದ ಹೊರ ಬಂದಿದ್ದಕ್ಕೆ ಕಾರಣ ತಿಳಿಸಿದ್ದಾರೆ. "ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದಿದ್ದು ಏಕೆಂದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದು ಎಂದು ನಿರ್ಧರಿಸಿದ್ದೇವು. ನನ್ನ ಕಮ್ ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಬೇಕು ಎಂದು ನಾನು ಬಯಸಿದ್ದೇ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ್ದ ಓಟಿಟಿ ವೇದಿಕೆ ನಂತರ ಹಿಂದೆಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ,. ಆದರೆ, ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ನಾವು ಹುಡುಕುತ್ತೇವೆ" ಎಂದು ಕಾರಣ ವಿವರಿಸಿದ್ದಾರೆ.
"ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವು ಇದೇ ನವೆಂಬರ್ ೨೪ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ನಿಮ್ಮ ಪ್ರೀತಿಪಾತ್ರರೊಂದಿಗೆ ಚಿತ್ರವನ್ನು ವೀಕ್ಷಿಸಿ, ಪ್ರೀತಿಯ ಸ್ವಾದವನ್ನು ಪಡೆಯಿರಿ. ಮತ್ತೊಮ್ಮೆ ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು" ಎಂದು ನಟಿ ರಮ್ಯಾ ಪತ್ರಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.


Click it and Unblock the Notifications











