Ramya: "ನಾನು ಸತ್ತುಹೋದೆ ಎಂದು ಹೇಳಿದ್ಯಾರು?": ಮೋಹಕ ತಾರೆ ಕೆಂಡಾಮಂಡಲ
ಹೃದಯಾಘಾತ ಎನ್ನುವ ಪದ ಕಿವಿ ಮೇಲೆ ಬಿದ್ದರೆ ಎಲ್ಲರೂ ಬೆಚ್ಚಿ ಬೀಳುವಂತಾಗಿದೆ. 30- 40 ವರ್ಷ ವಯಸ್ಸಿನವರು ಹೃದಯಾಘಾತದಿಂದ ಜೀವ ಚೆಲ್ಲುತ್ತಿದ್ದಾರೆ. ಕೆಲ ನಟ-ನಟಿಯರು ಕೂಡ ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ್ದಾರೆ. ಇದ್ದಕ್ಕಿದಂತೆ ನಟಿ ರಮ್ಯಾಗೆ ಹೃದಯಾಘಾತ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಕೆಲಹೊತ್ತು ಅಭಿಮಾನಿಗಳು ಆತಂಕಗೊಂಡಿದ್ದರು.
ಸೋಶಿಯಲ್ ಮೀಡಿಯಾ ಜಮಾನದಲ್ಲಿ ಬದುಕಿರುವವರನ್ನು ಸಾಯಿಸುವುದು, ಸತ್ತವರನ್ನು ಬದುಕಿಸುವುದು ಕ್ಷಣ ಮಾತ್ರದ ಕೆಲಸ ಎನ್ನುವಂತಾಗಿದೆ. ತಮಿಳು ಪಿಆರ್‌ಓ ಇಬ್ಬರು ರಮ್ಯಾ/ದಿವ್ಯಾ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಟ್ರೆಂಡ್ ಆಗಲು ಶುರುವಾಯಿತು.

ಕೆಲವರು ನಟಿ ರಮ್ಯಾಗೆ ಶ್ರದ್ದಾಂಜಲಿ ಕೂಡ ಅರ್ಪಿಸಿಬಿಟ್ಟರು. ನಂತರ ರಮ್ಯಾ ಆಪ್ತರಿಂದ ಇದು ಸುಳ್ಳು ಸುದ್ದಿ ಎನ್ನುವ ಸ್ಪಷ್ಟನೆ ಸಿಕ್ಕಿತು. ನಂತರ ಅಭಿಮಾನಿಗಳು ನಿರಾಳರಾದರು. ನಟಿ ರಮ್ಯಾ ವಿದೇಶ ಪ್ರವಾಸದಲ್ಲಿ ಇರುವುದರಿಂದ ವೈರಲ್ ಸುದ್ದಿಯಿಂದ ಕೆಲವೊತ್ತು ಗೊಂದಲ ಉಂಟಾಗಿದ್ದು ಸುಳ್ಳಲ್ಲ.
ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನದ ಹಳೆಯ ಸುದ್ದಿ ತಡವಾಗಿ ನೋಡಿದ ತಮಿಳು ಪಿಆರ್‌ಓ ತಪ್ಪಾಗಿ ರಮ್ಯಾ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಅವರು ಈಗ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ರಮ್ಯಾ ಆರೋಗ್ಯವಾಗಿದ್ದಾರೆ ಎಂದು ರಮ್ಯಾ ಆಪ್ತ ಗೆಳತಿ ಸುನೈನಾ ಸುರೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹೀಗೊಂದು ಸುಳ್ಳು ಸುದ್ದಿ ವೈರಲ್ ಆಗ್ತಿದ್ದಂತೆ ಆಪ್ತರು ರಮ್ಯಾಗೆ ಫೋನ್ ಮಾಡಲು ಶುರು ಮಾಡಿದ್ದರು. ಆಕೆಯ ಆರೋಗ್ಯ ವಿಚಾರಿಸಿದ್ದರು. ಅಂದಹಾಗೆ ಸದ್ಯ ರಮ್ಯಾ ಜಿನೆವಾದಲ್ಲಿದ್ದು, ನಾಳೆ (ಸೆಪ್ಟೆಂಬರ್ 6) ಪ್ರಾಗ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಶೀಘದಲ್ಲೇ ಬೆಂಗಳೂರಿಗೆ ಮೋಹಕ ತಾರೆ ವಾಪಸ್ ಬರುತ್ತಾರೆ ಎಂದು ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸುತ್ತಿದ್ದಾರೆ.
ಬದುಕಿರುವವರನ್ನು ಸತ್ತು ಹೋದರು ಎಂದು ಟ್ವೀಟ್ ಮಾಡಿದ ವ್ಯಕ್ತಿಗೂ, ಅದೇ ನಿಜವೆಂದು ಪ್ರಚಾರ ಮಾಡುತ್ತಿರುವವರಿಗೆ ಬುದ್ದಿ ಇಲ್ವಾ? ಎಂದು ನೆಟ್ಟಿಗರು ಗರಂ ಆಗಿದ್ದರು. ಇನ್ನು ಹೀಗೊಂದು ಸುದ್ದಿ ವೈರಲ್ ಆಗುತ್ತಿದ್ದಂತೆ ಆತಂಕಗೊಂಡವರಲ್ಲಿ ಜನರ್ಲಿಸ್ಟ್ ಧನ್ಯಾ ರಾಜೇಂದ್ರನ್, ಕೂಡಲೇ ರಮ್ಯಾಗೆ ಕರೆ ಮಾಡಿದ್ದಾರೆ. ಈ ಬಗ್ಗೆ ಆಕೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
"ದಿವ್ಯಾ ಸ್ಪಂದನಾಗೆ ನಾನು ಫೋನ್ ಮಾಡುತ್ತಲೇ ಇದೆ. ಮೊದಲಿಗೆ ಆಕೆ ಕರೆ ಸ್ವೀಕರಿಸದೇ ಇದ್ದಾಗ ಆತಂಕವಾಗಿತ್ತು. ಕೊನೆಗೆ ಕರೆ ಸ್ವೀಕರಿಸುತ್ತಿದ್ದಂತೆ ಅಬ್ಬ, ನಿನಗೇನು ಆಗಲಿಲ್ಲ, ನೀನು ಬದುಕೇ ಇದ್ದೀಯಾ ಎಂದೆ. ಆಕೆ ಕೊಂಚ ಖಾರವಾಗಿ ನಾನು ಸತ್ತುಹೋದೆ ಎಂದು ಹೇಳಿದ್ಯಾರು?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಗಿ ಬರೆದುಕೊಂಡಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ರಮ್ಯಾ ಅಭಿಮಾನಿಗಳ ಮನಗೆದ್ದಿದ್ದಾರೆ. ಚಿತ್ರರಂಗದಲ್ಲಿ ಮಾತ್ರವಲ್ಲದೇ ರಾಜಕೀಯ ರಂಗದಲ್ಲೂ ಗುರ್ತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಮಂಡ್ಯ ಸಂಸದೆಯಾಗಿ ರಮ್ಯಾ ಗೆದ್ದಿದ್ದರು. ಬಳಿಕ ಸೋತು ದೆಹಲಿ ಸೇರಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದರು. ಬಳಿಕ ತಮ್ಮ ಸ್ಥಾನದಿಂದ ಹೊರ ಬಂದಿದ್ದರು.
ರಮ್ಯಾ ಮತ್ತೆ ಚಿತ್ರರಂಗಕ್ಕೆ ಮತ್ತೆ ವಾಪಸ್ ಆಗಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಿಸಿದ್ದಾರೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಧನಂಜಯ ಜೊತೆ 'ಉತ್ತರಕಾಂಡ' ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾ ಮೂಲಕ ಮತ್ತೆ ನಾಯಕಿಯಾಗಿ ಮೋಹಕತಾರೆ ವಾಪಸ್ ಬರುತ್ತಿದ್ದಾರೆ.


Click it and Unblock the Notifications











