"ದರ್ಶನ್ ಸುತ್ತಾ ಇರುವವರು ರೌಡಿಗಳು, ಅಷ್ಟು ಫ್ಯಾನ್ಸ್ ಇದ್ದಿದ್ರೆ ಆತನ ಸಿನ್ಮಾಗಳೆಲ್ಲಾ ಗೆಲ್ಬೇಕಿತ್ತು"; ರಮ್ಯಾ
ನಟ ದರ್ಶನ್ ಕ್ರೌರ್ಯದ ಬಗ್ಗೆ ದಿನದಿಂದ ದಿನಕ್ಕೆ ಆಕ್ರೋಶ ಹೆಚ್ಚಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂರೆ 14 ಜನ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರು ಈ ಬಗ್ಗೆ ಮೌನ ವಹಿಸಿದ್ದಾರೆ. ನಟಿ ರಮ್ಯಾ ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ನಟಿ ರಮ್ಯಾ ಪೋಸ್ಟ್ ಮಾಡಿದ್ದರು. "ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ, ಜನರಿಗೆ ಹೊಡೆದು ಸಾಯಿಸುವುದಕ್ಕೆ ಆಗಲ್ಲ" ಎಂದಿದ್ದರು. ಇನ್ನು ರಾಷ್ಟ್ರೀಯ ಮಾಧ್ಯಮಗಳಿಗೆ ಫೋನ್ ಕರೆಯಲ್ಲಿ ರಮ್ಯಾ ಪ್ರತಿಕ್ರಿತೆ ನೀಡುತ್ತಿದ್ದಾರೆ. ಇಂಡಿಯಾ ಟುಡೇ ವಾಹಿನಿಗೆ ಜೊತೆ ಮಾತನಾಡುತ್ತಾ ದರ್ಶನ್ ಹಾಗೂ ಆತನ ಅಭಿಮಾನಿಗಳ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

"ಸೋಶಿಯಲ್ ಮೀಡಿಯಾದಲ್ಲಿ ಯಾರಾದರೂ ಕೆಟ್ಟಾಗಿ ಕಾಮೆಂಟ್ ಮಾಡಿದರೆ ಬ್ಲಾಕ್ ಮಾಡುವ ಆಪ್ಷನ್ ಇದೆ. ನಾನು ಹಾಗೇ ಮಾಡುತ್ತೇನೆ. ನಾನು ಆ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ದೂರು ನೀಡಿದ್ದೇನೆ. ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ ಬಳಿಕ ನಾನು ದೂರು ವಾಪಸ್ ಪಡೆದಿದ್ದೇನೆ. ದರ್ಶನ್ ಫ್ಯಾನ್ಸ್ ಅಸೋಸಿಯೇಷನ್ ಅವರು ಇದೇ ರೀತಿ ನನ್ನನ್ನು ಯಾವುದೋ ವಿಚಾರಕ್ಕೆ ಟ್ರೋಲ್ ಮಾಡಿದ್ದರು. ಬೇರೆ ನಟರು, ಅವರ ಮಡದಿ, ಮಕ್ಕಳನ್ನು ಟ್ರೋಲ್ ಮಾಡಿದ್ದರು."
"ನಾನು ಆಗಲೂ ಹೇಳಿದ್ದೆ. ಕಲಾವಿದರು ಈ ಬಗ್ಗೆ ಗಮನ ಹರಿಸಬೇಕು, ಫ್ಯಾನ್ಸ್‌ಗೆ ಈ ರೀತಿ ಮಾಡದಂತೆ ಹೇಳಬೇಕು ಎಂದಿದ್ದೆ. ಆದರೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ದರ್ಶನ್‌ಗೆ ಬಹಳ ಜನಪ್ರಿಯತೆ ಇದೆ ಅಂತ ಸುಮ್ನೆ ಹೈಪ್ ಮಾಡ್ತಿದ್ದೀವಿ. ಅಷ್ಟು ಅಭಿಮಾನಿಗಳು ಇದ್ದಿದ್ದರೆ ಆತನ ಎಲ್ಲಾ ಸಿನಿಮಾಗಳು ಗೆಲ್ಲಬೇಕಿತ್ತು. ದರ್ಶನ್ ಪ್ರಚಾರ ಮಾಡಿದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತಿದ್ದಾರೆ. ಪೊಲೀಸ್ ಸ್ಟೇಷನ್ ಮುಂದೆ 20, 30 ಜನ ಸೇರಿದ ಮಾತ್ರಕ್ಕೆ ಬಹಳ ಜನಪ್ರಿಯತೆ ಇದೆ ಎಂದುಕೊಳ್ಳಬಾರದು" ಎಂದು ರಮ್ಯಾ ವ್ಯಂಗ್ಯವಾಡಿದ್ದಾರೆ.
"ದರ್ಶನ್ ಸುತ್ತಾ ಮುತ್ತಾ ಇರುವವರು ನಟೋರಿಯಸ್, ಅವರೆಲ್ಲಾ ರೌಡಿಗಳ ತರಹ. ಬೇಕಿದ್ದರೆ ಅವರನ್ನು ಹಾಗೆ ಕರೆಯಬಹುದು. ಹಾಗಾಗಿ ಅವರೆಲ್ಲಾ ಎಲ್ಲರ ಗಮನ ಸೆಳೆಯುತ್ತಾರೆ. ಎಲ್ಲಾ ಅಂದುಕೊಂಡಿರುವಂತೆ ದರ್ಶನ್‌ಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇಲ್ಲ. ಇಂಡಸ್ಟ್ರಿಯಲ್ಲಿ ಮತ್ತಷ್ಟು ಕಲಾವಿದರಿಗೆ ಇದಕ್ಕಿಂತ ಹೆಚ್ಚು ಅಭಿಮಾನಿಗಳಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ಜೈಲಿಗೆ ಹೋಗಬೇಕಿತ್ತು. ಹೋಟೆಲ್ ವೇಯ್ಟರ್‌ಗೆ ಹೊಡೆದಿದ್ದ ಘಟನೆ ಸಹ ನಡೆದಿತ್ತು" ಎಂದಿದ್ದಾರೆ.

"ದರ್ಶನ್ ಕರಾಳ ಮುಖ ಈಗ ಬಯಲಾಗುತ್ತಿದೆ. ಆತನಿಂದ ನೊಂದಿರುವವರು ಈಗ ಹೊರಗೆ ಬಂದು ಮಾತನಾಡುತ್ತಿದ್ದಾರೆ. ಈ ಬಾರಿ ಕೂಡ ಅದೇ ರೀತಿ ತಪ್ಪಿಸಿಕೊಳ್ಳಬಹುದು ಎಂದಕೊಂಡಿದ್ದರು ಅನ್ನಿಸುತ್ತದೆ. ಆದರೆ ಆ ರೀತಿ ಆಗಲಿಲ್ಲ. ಈ ಬಾರಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಈ ರೀತಿ ಆ ರೀತಿ ಆಗಲ್ಲ ಎನಿಸುತ್ತದೆ" ಎಂದು ರಮ್ಯಾ ಆಶಯ ವ್ಯಕ್ತಪಡಿಸಿದ್ದಾರೆ.
"ನಟರ ಅಭಿಮಾನಿಗಳು ರಕ್ತದಾನ, ನೇತ್ರದಾನದಂತಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಆದರೆ ದರ್ಶನ್ ಅಭಿಮಾನಿಗಳು ಜನರನ್ನು ಅಪರಹರಿಸುತ್ತಿದ್ದಾರೆ. ಫ್ಯಾನ್ಸ್ ಕ್ಲಸ್ ಸಹಾಯದಿಂದ ಜನರನ್ನು ಅಪಹರಿಸಿ, ಥಳಿಸುವುದು ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ" ಎಂದು ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸಾಕಷ್ಟು ಜನ ದರ್ಶನ್ ಅಭಿಮಾನಿಗಳು ಕೂಡ ಇದು ಸರಿಯಲ್ಲ, ಶಿಕ್ಷೆ ಆಗಬೇಕು ಎಂದು ಹೇಳುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯ ಇಲ್ಲ ಅಲ್ಲವೇ? ಎಂದು ರಮ್ಯಾ ಹೇಳಿದ್ದಾರೆ. ನಾನು ಚಿತ್ರರಂಗದವರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಕಾರಣ ಅವರವರ ಅಭಿಪ್ರಾಯ ಅವರದ್ದು. ಇನ್ನು ಚಿತ್ರರಂಗದವರು ಈ ಬಗ್ಗೆ ಮಾತನಾಡಲು ಭಯಪಡುತ್ತಿದ್ದಾರೆ. ಸಿನಿಮಾ ಪ್ರಚಾರ, ಸ್ಕ್ರೀನಿಂಗ್ ಎಲ್ಲಾ ಇರುತ್ತದೆ. ಆದರೆ ಈಗ ಮಾತನಾಡದಿದ್ದರೆ ಸಮಾಜಕ್ಕೆ ಯಾವ ರೀತಿಯ ಸಂದೇಶ ರವಾನೆ ಆಗುತ್ತದೆ ಹೇಳಿ? ಎಂದು ರಮ್ಯಾ ಪ್ರಶ್ನಿಸಿದ್ದಾರೆ.


Click it and Unblock the Notifications










