ಅಗಲಿದ ಗೆಳೆಯ ಅಪ್ಪು ಕುರಿತು ಭಾವುಕ ಪತ್ರ ಬರೆದ ರಮ್ಯಾ
ನಟಿ ರಮ್ಯಾ ಹಾಗೂ ಅಪ್ಪು ಬಹಳ ಆತ್ಮೀಯ ಗೆಳೆಯರು. ಈ ಇಬ್ಬರು ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಆ ಮೂರು ಸಿನಿಮಾಗಳೂ ಸೂಪರ್ ಹಿಟ್ ಆಗಿದ್ದವು. ರಮ್ಯಾ ಸಿನಿಮಾ ರಂಗದಿಂದ ದೂರ ಉಳಿದರೂ ಇಬ್ಬರ ಸ್ನೇಹ ಹಾಗೆಯೇ ಮುಂದುವರೆದಿತ್ತು.
Recommended Video
ಇದೀಗ ಅಗಲಿದ ಗೆಳೆಯನ ಅಂತಿಮ ದರ್ಶನಕ್ಕೆಂದು ನಟಿ ರಮ್ಯಾ ನಿನ್ನೆ ಬೆಂಗಳೂರಿಗೆ ಬಂದಿದ್ದರು. ಈ ಹಿಂದೆ ಕನ್ನಡದ ಧೀಮಂತ ನಟರು ಕಣ್ಮರೆಯಾದಾಗಲೂ ರಮ್ಯಾ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಆದರೆ ಪುನೀತ್‌ಗಾಗಿ ವಿದೇಶದಿಂದ ಬಂದಿದ್ದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಒಂದನ್ನು ರಮ್ಯಾ ಪ್ರಕಟಿಸಿದ್ದು, ಅಪರೂಪಕ್ಕೆ ಕನ್ನಡದಲ್ಲಿಯೇ ಸಂದೇಶ ಪ್ರಕಟಿಸಿದ್ದಾರೆ. ರಮ್ಯಾರ ಸಂದೇಶ ಮೌಲ್ಯಯುತವಾಗಿದೆ ಹಾಗೂ ಪುನೀತ್ ಅವರನ್ನು ಚಿರಸ್ಥಾಯಿಗೊಳಿಸಲು ರಮ್ಯಾ ಹೇಳಿರುವ ಮಾರ್ಗ ಸೂಕ್ತ ಮತ್ತು ಸರಳ ಎನಿಸುತ್ತದೆ. ನಟಿ ರಮ್ಯಾರ ಫೇಸ್‌ಬುಕ್ ಪೋಸ್ಟ್ ಯಥಾವತ್ತು ಇಲ್ಲಿದೆ;
''ಅಪ್ಪು ಜೊತೆಯಲ್ಲಿ ನಾನು ಕಳೆದ ಬಹಳಷ್ಟು ನೆನಪುಗಳು ಅತ್ಯಮೂಲ್ಯ. ನಿಮ್ಮನ್ನು ನಾವು ಎಂದೆಂದಿಗೂ ನೆನೆಯುತ್ತೇವೆ. ಈ ಕಷ್ಟದ ಸಮಯದಲ್ಲಿ ಭಗವಂತ ಅಶ್ವಿನಿ ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮನ್ನು ಅಗಲಿರುವ ಇಂತ ಉನ್ನತ ವ್ಯಕ್ತಿಗೆ ಸಂತಾಪ ಸಲ್ಲಿಸುವ ಸಂದರ್ಭದಲ್ಲಿ ನಾನು ಅವರ ಅಭಿಮಾನಿಗಳ ಜೊತೆ ಇರುವೆನು''.

''ಅಪ್ಪು ಅವರ ಬಗ್ಗೆ ಹಲವರು ಬರೆದ ಎಲ್ಲಾ ಭಾವನಾತ್ಮಕ ಸಂದೇಶಗಳನ್ನು ಓದುತ್ತಿದ್ದೇನೆ ಮತ್ತು ಅವೆಲ್ಲವೂ ಅಕ್ಷರಸಹ ನಿಜ. ಕೆಲವಂತು ನನ್ನ ಕಣ್ಣಲ್ಲಿ ನೀರು ತಂದಿತು. ಅದುವೇ ಪುನೀತ್. ಹೌದು, ಅವರೇ ಅಪ್ಪು...
ಇವುಗಳನ್ನು ಓದಿದಾಗ ನನ್ನಲ್ಲಿ ಮೂಡಿದ ಕೆಲವು ಆಲೋಚನೆಗಳು ಇವು''.
''ಒಬ್ಬ ವ್ಯಕ್ತಿಯನ್ನು ಜೀವಂತವಾಗಿಡಲು ಉತ್ತಮ ಮಾರ್ಗ ಯಾವುದು? ನೆನಪುಗಳಲ್ಲಿ ಅಲ್ಲ, ಏಕೆಂದರೆ ಅದು ಮಾಸಿ ಹೋಗುತ್ತವೆ, ಆದರೆ ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ- ಅವರು ಬದುಕಿದ ರೀತಿಯಲ್ಲಿ ಪ್ರತಿದಿನ ನಾವು ಬದುಕುವುದು. ಅವರಂತೆಯೇ ನಾವು ಪ್ರೀತಿ ಹಾಗೂ ಕರುಣಾಪೂರ್ಣ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಅವರನ್ನು ಜೀವಂತವಾಗಿ ಇಡುವುದು. ದಿನನಿತ್ಯ ನಾವು ಅವರ ವ್ಯಕ್ತಿತ್ವವನ್ನು ಅನುಸರಿಸುವುದರ ಮೂಲಕ ನಾವು ಅವರನ್ನು ನಮ್ಮಲ್ಲಿ ಜೀವಂತವಾಗಿ ಇಡಲು ಸಾಧ್ಯ. ಈ ರೀತಿ ನಾವು ಅವರ ಮೌಲ್ಯಗಳನ್ನು ಮುಂದುವರಿಸಬಹುದು. ನಾವೆಲ್ಲರು ಅಪ್ಪು ರನ್ನು ಪ್ರತಿ ದಿನವೂ ಆರಾಧಿಸೋಣ''. #BeAppu #bekind.
ಅಪ್ಪು ನಿಧನವಾದ ದಿನ ತಮಗೆ ಕರೆ ಮಾಡಿದ ಪತ್ರಕರ್ತರೊಬ್ಬರೊಬ್ಬರೊಟ್ಟಿಗೆ ಮಾತನಾಡುತ್ತಾ, ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡಿದರೆ ಪುನೀತ್ ಸಿನಿಮಾ ಮೂಲಕವೇ ಮಾಡುವ ಆಸೆಯಿತ್ತು, ಅದನ್ನು ಪುನೀತ್ ಬಳಿ ಹೇಳಿಕೊಂಡಿದ್ದೆ ಎಂದಿದ್ದರು ರಮ್ಯಾ. ಆದರೆ ಈಗ ಪುನೀತ್ ಅವರೇ ಕಣ್ಮರೆಯಾಗಿದ್ದಾರೆ. ರಮ್ಯಾ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳುತ್ತಾರೆಯೋ ಇಲ್ಲವೋ ನೊಡಬೇಕಿದೆ.


Click it and Unblock the Notifications











