ದಾವಣಗೆರೆಯಲ್ಲಿ ಬೆಣ್ಣೆದೋಸೆ ಸವಿದ ನಟಿ ರಮ್ಯಾ
ಸಿನಿಮಾ ಕಾರ್ಯಕ್ರಮಕ್ಕೆಂದು ದಾವಣಗೆರೆಗೆ ಬಂದಿದ್ದ ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯಾ, ಬೆಣ್ಣೆನಗರಿಯ ಬೆಣ್ಣೆದೋಸೆ ರುಚಿಗೆ ಫಿದಾ ಆಗಿದ್ದಾರೆ.
ನಗರದ ಗುರುಕೊಟ್ಟೂರೇಶ್ವರ ಬೆಣ್ಣೆದೋಸೆಗೆ ಬೆಳಿಗ್ಗೆ ಭೇಟಿ ನೀಡಿದ ದಿವ್ಯಸ್ಪಂದನ ಎರಡು ಬೆಣ್ಣೆದೋಸೆ ಸವಿದರು. 'ಹೆಡ್ ಬುಷ್' ಸಿನಿಮಾ ಪ್ರಮೋಷನ್ ಕಾರ್ಯಕ್ರಮಕ್ಕೆ ನಿನ್ನೆ (ಅಕ್ಟೋಬರ್ 16) ದಾವಣಗೆರೆಗೆ ಆಗಮಿಸಿದ್ದ ರಮ್ಯಾ ನನಗೆ ಬೆಣ್ಣೆದೋಸೆ ಅಂದರೆ ಇಷ್ಟ. ನಾನು ಡಯಟ್ ನಲ್ಲಿದ್ದೇನೆ. ಆದರೂ ಬೆಣ್ಣೆದೋಸೆ ತಿನ್ನುತ್ತೇನೆ. ಯಾವ ಹೊಟೇಲ್ ನಲ್ಲಿನಲ್ಲಿ ರುಚಿ ಚೆನ್ನಾಗಿರುತ್ತೆ ಅಂತಾ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಆಯೋಜಿಸಿದ್ದ 'ಹೆಡ್ ಬುಷ್' ಸಿನಿಮಾದ ಪ್ರಿ ಪ್ರಮೋಷನ್ ಈವೆಂಟ್ ನಲ್ಲಿ ಅಭಿಮಾನಿಗಳನ್ನು ಪ್ರಶ್ನಿಸಿದ್ದರು.
ಆಗ ಅಭಿಮಾನಿಗಳು ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಎಂಬ ಸಲಹೆ ನೀಡಿದ್ದರು. ಬೆಳಿಗ್ಗೆ ಹೋಗುತ್ತೇನೆ ಎಂದಿದ್ದರು. ಬೆಳಿಗ್ಗೆ ಬೆಂಗಳೂರಿಗೆ ಹೋಗುವ ಮುನ್ನ ರಮ್ಯಾ ಗುರು ಕೊಟ್ಟೂರೇಶ್ವರ ಹೊಟೇಲ್ ಗೆ ಆಗಮಿಸಿದರು. ಮೋಹಕ ತಾರೆ ಆಗಮಿಸಿದ ಸುದ್ದಿ ತಿಳಿಯುತ್ತಿದ್ದಂತೆ ಯುವಕರು, ಯುವತಿಯರು ಸೇರಿದಂತೆ ಹಲವರು ನೆಚ್ಚಿನ ನಟಿಯನ್ನು ನೋಡಲು ಜಮಾಯಿಸಿದರು. ನೋಡನೋಡುತ್ತಲೇ ನೂರಾರು ಅಭಿಮಾನಿಗಳು ಹೋಟೆಲ್ ಮುಂದೆ ಜಮಾಯಿಸಿದರು.

ಎರಡು ದೋಸೆ ತಿಂದ ರಮ್ಯಾ
ಗುರುಕೊಟ್ಟೂರೇಶ್ವರ ಹೊಟೇಲ್ ರಸ್ತೆ ಹತ್ತು ನಿಮಿಷಕ್ಕೂ ಹೆಚ್ಚು ಹೊತ್ತು ಜಾಮ್ ಆಗಿತ್ತು. ರಮ್ಯಾ ಆಗಮಿಸಿದ ಬಳಿಕ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿ ಬಂದರೆ ಬೈಕ್ ಸವಾರರು ರಸ್ತೆ ಮಧ್ಯೆಯೇ ನಿಲ್ಲಿಸಿದ್ದರು. ಹೊಟೇಲ್ ಮುಂದೆ ಜನರು ಜಮಾಯಿಸಿದ ಕಾರಣ ರಸ್ತೆ ಸಂಚಾರ ಕೆಲ ಹೊತ್ತು ಬಂದ್ ಆಗಿತ್ತು. ಬೆಣ್ಣೆದೋಸೆ ಸೇವಿಸಿದ ಬಳಿಕ ಮಾತನಾಡಿದ ರಮ್ಯಾ, ಗುರುಕೊಟ್ಟೋರೇಶ್ವರ ಹೋಟೆಲ್ ನಲ್ಲಿ ಬೆಣ್ಣೆದೋಸೆ ಚೆನ್ನಾಗಿದೆ. ನಾನು ಎರಡು ದೋಸೆ ತಿಂದೆ. ಒಂದು ಖಾಲಿ, ಒಂದು ಬೆಣ್ಣೆದೋಸೆ ಸೇವಿಸಿದೆ. ನಿಜಕ್ಕೂ ರುಚಿ ಸೂಪರ್ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ರಮ್ಯಾ ಜೊತೆಗೆ ಹೊಂಬಾಳೆಯ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಕೆಆರ್‌ಜಿ ಸ್ಟುಡಿಯೋಸ್‌ನ ಯೋಗಿ ರಾಜ್ ಸಹ ಇದ್ದರು.

ಸಲಹೆ ನೀಡಿದವರಿಗೆ ಥ್ಯಾಂಕ್ಸ್ ಎಂದ ರಮ್ಯಾ
''ಮನೆಗೆ ಪಾರ್ಸಲ್ ತೆಗೆದುಕೊಂಡು ಹೋಗಿ ಸೇವಿಸುವ ಬದಲು ಇಲ್ಲಿಗೆ ಬಂದು ತಿಂದರೆ ಅದರ ಟೇಸ್ಟ್ ಬೇರೆ ಇರುತ್ತೆ. ಹಳ್ಳಿಯ ಬೆಣ್ಣೆ ಬಳಸಿ ದೋಸೆ ಮಾಡ್ತಾರೆ. ಪ್ಯಾಕೆಟ್ ಬೆಣ್ಣೆ ಅಲ್ಲ. ಹಾಗಾಗಿ ರುಚಿ ಅಚ್ಚುಕಟ್ಟಾಗಿದೆ. ಒಲೆಯಲ್ಲಿ ಬೇಯಿಸುವುದರಿಂದ ರುಚಿ ಚೆನ್ನಾಗಿರುತ್ತದೆ. ನಿನ್ನೆ ಪ್ರೋಗ್ರಾಂನಲ್ಲಿ ಜನ ಸಜೆಸ್ಟ್ ಮಾಡಿದ್ದರು. ಗುರುಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್‌ಗೆ ಹೋಗಿ ಅಂತಾ. ಜನರು ಜನರು ನೀಡಿದ ಸಲಹೆ ಮೇರೆಗೆ ಬಂದಿದ್ದೇನೆ. ನಮ್ಮ ಊಟ, ನಮ್ಮ ಕಲ್ಚರ್ ಎಷ್ಟು ಬೆಳೆಸಿದ್ರು ಉದ್ಯಮ ಬೆಳೆಯುತ್ತೇ. ಇಂಥ ಟೇಸ್ಟಿ ಹೊಟೇಲ್‌ನ ಸಲಹೆ ನೀಡಿದ ದಾವಣಗೆರೆ ಜನತೆಗೆ ಥ್ಯಾಂಕ್ಸ್'' ತಿಳಿಸಿದರು.

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನೂಕು-ನುಗ್ಗಲು
ಇನ್ನು ಯುವಕರು ಹಾಗೂ ಯುವತಿಯರು ರಮ್ಯಾ ನೋಡಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ನಾಮುಂದು ತಾಮುಂದು ಅಂತಾ ಮುಗಿಬಿದ್ದರು. ಕೆಲವರಂತೂ ರಮ್ಯಾ ಹೋಟೆಲ್ ನಿಂದ ಹೊರಬರುವಾಗ ಸುತ್ತುವರೆದರು. ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿ ಅದರಲ್ಲಿ ಯಶ ಕಂಡು ಸಂಭ್ರಮಿಸಿದರು. ಇತ್ತ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಪರದಾಡಿದರು. ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದರೂ ಕ್ಯಾರೇ ಎನ್ನದ ಯುವತಿಯರು ರಮ್ಯಾ ಜೊತೆ ನಿಂತು ಫೋಟೋ ತೆಗೆಸಿಕೊಂಡರು.

ದೋಸೆ ಸವಿದಿದ್ದ ನಟ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರ ಹುಟ್ಟುಹಬ್ಬಕ್ಕೆ ದಾವಣಗೆರೆಗೆ ಬಂದಾಗ ನಾನು ಸಹ ಡಯಟ್ ನಲ್ಲಿದ್ದೇನೆ. ಆದ್ರೂ ಬೆಣ್ಣೆ ದೋಸೆ ಸೇವಿಸಿ ಹೋಗುತ್ತೇನೆ ಎಂದಿದ್ದರು. ಅದರಂತೆ ಬೆಣ್ಣೆದೋಸೆ ಟೇಸ್ಟ್ ಸವಿದು ಹೋಗಿದ್ದರು. ಈಗ ನಟಿ ರಮ್ಯಾ ದಾವಣಗೆರೆ ಬೆಣ್ಣೆ ದೋಸೆಯ ಸವಿ ಸವಿದಿದ್ದಾರೆ. 'ಹೆಡ್ ಬುಷ್' ಸಿನಿಮಾದ ಪ್ರಚಾರ ಕಾರ್ಯಕ್ರದಲ್ಲಿ ಭಾಗವಹಿಸಲು ರಮ್ಯಾ ದಾವಣೆಗೆರೆಗೆ ಆಗಮಿಸಿದ್ದರು.


Click it and Unblock the Notifications











