ಅನಾರೋಗ್ಯದಿಂದ ಬಹಳ ನೊಂದಿದ್ದೆ.. ಡಿವೋರ್ಸ್ ಆಗಲು ಮದುವೆ ಯಾಕೆ?- ರೇಖಾ
ಜಿಂಕೆ ಮರಿ ರೇಖಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ. 11 ವರ್ಷಗಳ ಹಿಂದೆ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು. ಬಳಿಕ ಅನಾರೋಗ್ಯದಿಂದ ಬಳಲಿದ್ದ ಚೆಲುವೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವ ಪ್ರಯತ್ನದಲ್ಲಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಬದುಕು ಹಾಗೂ ಸಿನಿ ಜೀವನದ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಟಿ ರೇಖಾ ವೇದವ್ಯಾಸ್ ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ್ದರು. ಬಳಿಕ ಚಿತ್ರರಂಗಕ್ಕೂ ಬಂದರು. ಸುದೀಪ್, ದರ್ಶನ್, ಗಣೇಶ್ ರೀತಿಯ ನಟರ ಜೊತೆ ತೆರೆ ಹಂಚಿಕೊಂಡಿದ್ದರು. 'ರಾಜ್ ದಿ ಶೋಮ್ಯಾನ್' ಚಿತ್ರದ ಹಾಡೊಂದರಲ್ಲಿ ಅಪ್ಪು ಜೊತೆ ಮಿಂಚಿದ್ದರು. 'ಹುಚ್ಚ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ನಟಿಸಿ ಚಿತ್ರರಂಗ ಪ್ರವೇಶಿಸಿದ್ದರು.

ಎರಡು ವರ್ಷಗಳ ಹಿಂದೆ ತೆಲುಗು ಕಿರುತೆರೆ ಕಾರ್ಯಕ್ರಮಕ್ಕೆ ರೇಖಾ ಅತಿಥಿಯಾಗಿ ಬಂದಿದ್ದರು. ತೆಳ್ಳಗಾಗಿ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತೆ ಕಂಡಿದ್ದರು. ಅದನ್ನು ನೋಡಿ ಆಕೆಗೆ ಏನಾಯ್ತು ಎಂದು ಅಭಿಮಾನಿಗಳು ಶಾಕ್ ಆಗಿದ್ದರು. ಬಹಳ ದಿನಗಳ ಬಳಿಕ ರೇಖಾ ಕ್ಯಾಮರಾ ಮುಂದೆ ಬಂದಿದ್ದಾರೆ. ತೆಲುಗಿನ ನಿಖಿಲ್ ವಿಜಯೇಂದ್ರ ಸಿಂಹ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ರೇಖಾ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅನಾರೋಗ್ಯದಿಂದ ದೈಹಿಕವಾಗಿ ಮಾನಸಿಕವಾಗಿ ನೊಂದು ಬೆಂದ ವಿಚಾರವನ್ನು ವಿವರಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವುದಾಗಿಯೂ ಹೇಳಿದ್ದಾರೆ.
"2014ರಿಂದ 2020ರವೆರೆಗೆ ವೈಯಕ್ತಿಕ ಕಾರಣಗಳಿಂದ ನಾನು ಚಿತ್ರರಂಗದಿಂದ ದೂರಾಗಿದ್ದೆ. ಕೋವಿಡ್‌ಗೂ ಮುನ್ನ ಮತ್ತೆ ನಟಿಸಬೇಕು ಎಂದುಕೊಂಡೆ. ಆಗ ಒಂದು ಕಿರುತೆರೆ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಿದ್ದೆ. ಬಳಿಕ ಕೋವಿಡ್ ಸಮಸ್ಯೆ ಎದುರಾಯಿತು. ಆ ನಂತರ ನಾನು ಅನಾರೋಗ್ಯದಿಂದ ಬಳಲುವಂತಾಯಿತು. ಚೇತರಿಸಿಕೊಳ್ಳಲು 3 ವರ್ಷ ಬೇಕಾಯಿತು. ನನಗೆ ಏನು ಸಮಸ್ಯೆ ಆಗಿತ್ತು ಎಂದು ಹೇಳಲು ಇಷ್ಟವಿಲ್ಲ" ಎಂದು ರೇಖಾ ಹೇಳಿದ್ದಾರೆ.
ಯಾವ ಆರೋಗ್ಯ ಸಮಸ್ಯೆ ಎಂದು ರೇಖಾ ಹೇಳಲಿಲ್ಲ. ಆದರೆ ಅದರಿಂದ ಬಹಳ ನೋವು ಅನುಭವಿಸಿದೆ ಎಂದಿದ್ದಾರೆ. "ನಿಜಕ್ಕೂ ಬಹಳ ನೋವಿನ ಸಂಗತಿ. ಯಾವುದೇ ಆರೋಗ್ಯ ಸಮಸ್ಯೆ ಆದರೂ ಮನುಷ್ಯನಿಗೆ ನೋವಾಗುತ್ತದೆ. ಅಷ್ಟು ಸುದೀರ್ಘ ಅವಧಿ ಅಂದ್ರೆ ಅರ್ಥ ಮಾಡಿಕೊಳ್ಳಿ. ಮಾನಸಿಕವಾಗಿ ದೈಹಿಕವಾಗಿ ಆರ್ಥಿಕವಾಗಿ ಸಮಸ್ಯೆ ಎದುರಿಸುವಂತಾಯಿತು. ಸೆಲೆಬ್ರೆಟಿ ಅಂತ ಅಲ್ಲ. ಮನುಷ್ಯ ಅಂದಮೇಲೆ ಎಲ್ಲರಿಗೂ ಇದು ಒಂದೇ. ದೇವರ ದಯೆಯಿಂದ ನಾನು ಚೇತರಿಸಿಕೊಂಡೆ" ಎಂದು ರೇಖಾ ವಿವರಿಸಿದ್ದಾರೆ.

ರೇಖಾ ಇನ್ನು ಮದುವೆಯಾಗಿಲ್ಲ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದಾರೆ. "ನಾನು ಮದುವೆ ಆಗಿಲ್ಲ. ಇನ್ನು ಒಬ್ಬೊಂಟಿ. ಹಿಂದಿನ ಕಹಿ ಘಟನೆಗಳು, ಸರಿಯಾದ ವ್ಯಕ್ತಿ ಸಿಗಲಿಲ್ಲ. ಹಾಗಾಗಿ ಇನ್ನು ಮದುವೆ ಆಗಿಲ್ಲ. ಎರಡು ಬಾರಿ ನನ್ನನ್ನು ಮದುವೆ ಆಗಲು ಯಾರೋ ಮುಂದೆ ಬಂದಿದ್ದರು ನಾನು ಒಪ್ಪಲಿಲ್ಲ. ಬಳಿಕ ನಾನು ಮದುವೆ ಆಗಬೇಕು ಎಂದುಕೊಂಡಾಗ ಅವ್ರು ಒಪ್ಪಲಿಲ್ಲ. ಇತ್ತೀಚೆಗೆ ಡಿವೋರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ. ಡಿವೋರ್ಸ್ ಮಾಡಿಕೊಳ್ಳುವಂತಿದ್ದರೆ ಮದುವೆ ಯಾಕೆ? ಲೇಟ್ ಆಗಿ ಮದುವೆ ಆದ್ರು, ಬೇಗ ದಾಂಪತ್ಯ ಜೀವನದಿಂದ ಹೊರಬರಲು ಇಷ್ಟವಿಲ್ಲ. ಹಾಗಾಗಿ ನೋಡೋಣ" ಎಂದು ರೇಖಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನನಗೆ ನಟನೆ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೇನೆ. ಕನ್ನಡದಲ್ಲಿ ಸುದೀಪ್, ದರ್ಶನ್, ಗಣೇಶ್ ಸೇರಿದಂತೆ ನಾನು ನಾಯಕಿಯಾಗಿ ನಟಿಸಿದ ನಟರು ಈಗ ಹೀರೊ ಸ್ಟಾರ್‌ಗಳಾಗಿಬಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆಗೂ ಒಂದು ಚಿತ್ರದಲ್ಲಿ ಕೆಮಿಯೋ ಮಾಡಿದ್ದೀನಿ ಎಂದು ರೇಖಾ ಮೆಲುಕು ಹಾಕಿದ್ದಾರೆ.


Click it and Unblock the Notifications











