ಅದೃಷ್ಟ ತಂದ ಗುಳಿಗ, ಇನ್ನಿತರೆ ದೈವಗಳ ಸನ್ನಿಧಿಗೆ ಸಪ್ತಮಿ ಗೌಡ
'ಕಾಂತಾರ' ಸಿನಿಮಾ ದೇಶದಾದ್ಯಂತ ದೊಡ್ಡ ಹಿಟ್ ಆಗಿದ್ದು ಹಲವು ಚಿತ್ರರಂಗಗಳ, ಅಲ್ಲಿನ ಸಿನಿಮಾ ಕರ್ಮಿಗಳ, ವಿವಿಧ ರಾಜ್ಯಗಳ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಸಿನಿಮಾದಲ್ಲಿ ನಟಿಸಿರುವ ಕಲಾವಿದರ ಬೇಡಿಕೆಯೂ ಹೆಚ್ಚಾಗಿದೆ.
'ಕಾಂತಾರ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಸಪ್ತಮಿ ಗೌಡ ಅವರಿಗಂತೂ ಅದೃಷ್ಟ ಖುಲಾಯಿಸಿದ್ದು, ಅವಕಾಶಗಳ ಮೇಲೆ ಅವಕಾಶಗಳು ನಟಿಯನ್ನು ಅರಸಿ ಬರುತ್ತಿವೆ. ಇದೇ ಖುಷಿಯಲ್ಲಿ ನಟಿ ಸಪ್ತಮಿ ಗೌಡ, ದೇವರ ಆಶೀರ್ವಾದ ಪಡೆಯಲು ವಿಶೇಷವಾಗಿ ದೈವಗಳ ಆಶೀರ್ವಾದ ಪಡೆಯಲು ಕುಟುಂಬದೊಂದಿಗೆ ಕರಾವಳಿಯಲ್ಲಿ ಸುತ್ತು ಹೊಡೆಯುತ್ತಿದ್ದಾರೆ.
'ಕಾಂತಾರ' ಚಿತ್ರದ ನಾಯಕಿ ಸಪ್ತಮಿ ಗೌಡ ಸದ್ಯ ಮಂಗಳೂರು ಕ್ಷೇತ್ರ ದರ್ಶನ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆಯೆ ಜಿಲ್ಲೆಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟಿ ಸಪ್ತಮಿ ಗೌಡ ಭೇಟಿ ನೀಡಿದ್ದಾರೆ. ನಟ ಸನಿಲ್ ಗುರು, ತಾಯಿ ಶಾಂತಿ ಜೊತೆ ಭೇಟಿ ನೀಡಿದ ಸಪ್ತಮಿ,ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಪ್ತಮಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ದೇವಳದ ಅರ್ಚಕರು ಗೌರವಿಸಿದ್ದಾರೆ.

ತುಳು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟಿಸುವೆ: ಸಪ್ತಮಿ
ದೇವರ ದರ್ಶನ ಬಳಿಕ ನಟಿ ಸಪ್ತಮಿ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಕಾಂತಾರ' ಯಶಸ್ವಿನ ಬಗ್ಗೆ ಹೆಮ್ಮೆ ಇದೆ. ತುಳುನಾಡಿನ ದೈವಾರಾದನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ. 'ಕಾಂತರ' ಚಿತ್ರದ ನಂತರ ತಿಳಿದಿದೆ. ಬೇರೆ ಬೇರೆ ಸಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿದೆ. ತುಳು ಭಾಷೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ರೆ ಖಂಡಿತ ನಟಿಸುವೆ ಅಂತಾ ಕಟೀಲುವಿನಲ್ಲಿ ನಟಿ ಸಪ್ತಮಿ ಗೌಡ ಹೇಳಿದರು.

ಗುಳಿಗ ದೇವಸ್ಥಾನ, ಕೊರಗ ತನಿಯ ದೈವಗಳ ಸನ್ನಿಧಿಗೆ ಭೇಟಿ
ಮಂಗಳವಾರ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೇವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳಕ್ಕೆ ಸಪ್ತಮಿ ಗೌಡ ಭೇಟಿ ನೀಡಿದ್ದಾರೆ. ಆದಿ ಸ್ಥಳದಲ್ಲೇ ಕೆಲ ಸಮಯ ಇದ್ದ ಸಪ್ತಮಿ ಪೂಜೆ ಸಲ್ಲಿಸಿದ್ದಾರೆ. ನಟಿ ಸಪ್ತಮಿ ಅವರನ್ನು ಕ್ಷೇತ್ರದ ಸಮಿತಿಯವರು ಬರಮಾಡಿಕೊಂಡು, ಕ್ಷೇತ್ರದ ಮಹಿಮೆಯನ್ನು ನಟಿಗೆ ಅವರ ಕುಟುಂಬಕ್ಕೆ ತಿಳಿಸಿದ್ದಾರೆ.

ದೈವಗಳ ಕೃಪೆಯಿಂದ ಸಿನಿಮಾ ಯಶಸ್ವಿ: ಸಪ್ತಮಿ ಗೌಡ
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಪ್ತಮಿ, ತುಳು ನಾಡಿನ ದೈವಗಳ ಆಶೀರ್ವಾದದಿಂದ ತಮ್ಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ದೈವಗಳ ಮೇಲೆ ನನಗೂ ನಂಬಿಕೆ ಇದೆ. ಈ ಕಾರಣದಿಂದಾಗಿಯೇ ನನ್ನನ್ನು ಕಾಂತಾರ ಸಿನಿಮಾದ ಮೂಲಕ ನಾಡಿಗೆ ಪರಿಚಯವಾದೆ. ಇದಕ್ಕೆಲ್ಲ ದೈವಗಳ ಆಶೀರ್ವಾದವೇ ಕಾರಣ. ಸಿನಿಮಾ ಮಾಡಲುವಾಗಲೇ ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡಿದೆ. ಈಗಲೂ ಅದೇ ಶ್ರದ್ಧೆಯಿಂದ ಇಲ್ಲಿಗೆ ಬಂದಿರುವೆ ಅಂತಾ ಹೇಳಿದ್ದರು.

ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ
'ಕಾಂತಾರ' ಸಿನಿಮಾದ ಯಶಸ್ಸಿನಿಂದ ನಟಿ ಸಪ್ತಮಿ ಗೌಡ ಬೇರೆ ಸಿನಿಮಾಗಳ ಅವಕಾಶಗಳು ಒಂದರ ಹಿಂದೊಂದು ಅರಸಿ ಬರುತ್ತಿವೆ. ಅಂಬರೀಶ್ ಪುತ್ರ ಅಭಿಷೇಕ್ ಜೊತೆ 'ಕಾಳಿ' ಸಿನಿಮಾದಲ್ಲಿ ಸಪ್ತಮಿ ನಟಿಸಲಿದ್ದಾರೆ. ಜೊತೆಗೆ ನಟ ಧನಂಜಯ್ ಜೊತೆಗೆ 'ಉತ್ತರಕಾಂಡ' ಸಿನಿಮಾದಲ್ಲಿಯೂ ಸಪ್ತಮಿ ನಟಿಸುತ್ತಿದ್ದಾರೆ. ಇನ್ನೂ ಕೆಲವು ಸಿನಿಮಾಗಳ ಮಾತುಕತೆ ಜಾರಿಯಲ್ಲಿದೆ.


Click it and Unblock the Notifications











