For Quick Alerts
  ALLOW NOTIFICATIONS  
  For Daily Alerts

  ಸವಿ ಮಾದಪ್ಪ ಆತ್ಮಹತ್ಯೆ: ಆರೋಪದ ಬಗ್ಗೆ ಮಾತನಾಡಿದ ನಟಿಯ ಗೆಳೆಯ ವಿವೇಕ್

  |

  ನಟಿ ಸವಿ ಮಾದಪ್ಪ ನಿನ್ನೆ (ಸೆಪ್ಟೆಂಬರ್ 30)ರಂದು ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

  ನಟಿ ಸವಿ ಮಾದಪ್ಪರ ಮೃತದೇಹದ ಮರಣೋತ್ತರ ಪರೀಕ್ಷೆ ಹಾಗೂ ಸ್ಥಳ ಮಹಜರುಗಳು ಇಂದು ನಡೆದವು. ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮೃತ ನಟಿಯ ತಂದೆ ಮಗಳ ಸಾವಿಗೆ ಆಕೆಯ ಗೆಳೆಯ ವಿವೇಕ್ ಮತ್ತು ನಟಿಯ ಪಿಎ ಮಹೇಶ್ ಕಾರಣ ಎಂದು ಆರೋಪಿಸಿದ್ದರು. ಈ ಸಂಬಂಧ ಕುಂಬಳಗೋಡು ಪೊಲೀಸರಿಗೆ ದೂರು ಸಹ ನೀಡಿದ್ದರು.

  ಕೆಲವು ತೆಲುಗು ಹಾಗೂ ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ವಿವೇಕ್ ಎಂಬಾತ ಮದುವೆ ಆಗುವಂತೆ ಸವಿ ಮಾದಪ್ಪಗೆ ಒತ್ತಾಯ ಮಾಡುತ್ತಿದ್ದ ಎಂದು ನಟಿಯ ತಂದೆ ಪ್ರಭು ಮಾದಪ್ಪ ಆರೋಪಿಸಿದ್ದರು. ''ನನ್ನ ಪುತ್ರಿ ವಿವಾಹವಾಗುವುದಾಗಿ ವಿವೇಕ್​ ಒತ್ತಡ ಹಾಕುತ್ತಿದ್ದ. ನನ್ನ ಮಗಳ ಸ್ನೇಹ ಬೆಳಸುವುದಕ್ಕೆ ವಿವೇಕ್​ ಯಾರು? ನನ್ನ ಮಗಳನ್ನ ವಿವಾಹವಾಗಲು ಬ್ಯಾಕ್​​ಗ್ರೌಂಡ್ ಏನು? ವಿವೇಕ್​​ ನನ್ನ ಮಗಳ‌ ಬ್ರೈನ್ ವಾಶ್ ಮಾಡಿದ್ದಾನೆ. ದೊಡ್ಡ ಮಗಳ‌ ಮದುವೆಯಾಗಿ ಒಂದು‌ ತಿಂಗಳಾಗಿದೆ. ಹೀಗಿರುವಾಗ ಮತ್ತೊಂದು ಮದುವೆ ಹೇಗೆ ಸಾಧ್ಯ? ಮಗಳ ಬಳಿ ಇದ್ದ ಹಣ ಎಲ್ಲೋ ಹೂಡಿಕೆ ಮಾಡಿದ್ದಾರೆ. 5 ಲಕ್ಷ ಹಣವನ್ನು ಅವರು ಎಲ್ಲಿಯೋ ಹೂಡಿಕೆ ಮಾಡಿದ್ದಾರೆ. ನನ್ನ ಮಗಳ ಸಾವಿನ ಬಗ್ಗೆ ತನಿಖೆ ಆಗಲಿ'' ಎಂದು ಸವಿ ಮಾದಪ್ಪ ತಂದೆ ಪ್ರಭು ಮಾದಪ್ಪ ಮಾಧ್ಯಮಗಳ ಮುಂದೆ ಹೇಳಿದ್ದರು.

  ನಟಿಯ ಗೆಳೆಯ ವಿವೇಕ್ ಇಂದು ಮಾಧ್ಯಮಗಳ ಬಳಿ ಮಾತನಾಡಿದ್ದು, ''ಸವಿ ಮಾದಪ್ಪ ಸಾವಿಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ. ಆಕೆಯ ಸಾವಿಗೆ ಕಾರಣವೇನೆಂದು ನೀವೆಲ್ಲ ಎದುರು ನೋಡುತ್ತಿರುವಂತೆ ನಾನೂ ಎದುರು ನೋಡುತ್ತಿದ್ದೇನೆ'' ಎಂದಿದ್ದಾರೆ.

  ''ಆಕೆ ಬಹಳ ಒಳ್ಳೆಯ ಹುಡುಗಿ, ಬಹಳ ಮುಗ್ಧೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದೂ ಎನಿಸಿರಲಿಲ್ಲ. ಆಕೆಯ ಮರಣೋತ್ತರ ಪರೀಕ್ಷಾ ವರದಿ ಬರಲೆಂದು ನಾನೂ ಕಾಯುತ್ತಿದ್ದೇನೆ. ಆಕೆಯ ಸಾವಿಗೆ ಕಾರಣವೇನು ಎಂದು ನಾನು ತಿಳಿದುಕೊಳ್ಳಬೇಕಿದೆ'' ಎಂದಿದ್ದಾರೆ ವಿವೇಕ್.

  ಆಕೆಯೊಂದಿಗೆ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದಿರಾ? ಎಂಬ ಪ್ರಶ್ನೆಗೆ, ಹಾಗೇನೂ ಇಲ್ಲ. ನಾವು ಲಿವ್‌ ಇನ್ ರಿಲೇಷನ್‌ನಲ್ಲಿರಲಿಲ್ಲ. ಆಕೆ ಆಗಾಗ್ಗೆ ನನಗೆ ಸಿಗುತ್ತಿದ್ದಳು. ಬೇಸರ ಎನಿಸಿದಾಗ ನನ್ನನ್ನು ಭೇಟಿ ಮಾಡುತ್ತಿದ್ದಳು, ಸ್ವಲ್ಪ ಕಾಲ ಮಾತನಾಡುತ್ತಿದ್ದೆವು, ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದಳು'' ಎಂದಿದ್ದಾರೆ ವಿವೇಕ್.

  ''ಇಬ್ಬರ ಕಾಮನ್ ಫ್ರೆಂಡ್ ಒಬ್ಬರಿಂದ ನನಗೆ ಸವಿಯ ಪರಿಚಯವಾಯ್ತು, ಇಬ್ಬರು ಒಳ್ಳೆಯ ಗೆಳೆಯರಾಗಿದ್ದೆವು. ಆಕೆ ಬೇಸರಗೊಂಡಿದ್ದಳು, ಆದರೆ ಏಕೆ ಎಂಬುದು ಗೊತ್ತಿಲ್ಲ. ಪೊಲೀಸರ ತನಿಖೆ ಪೂರ್ತಿಯಾದ ಬಳಿಕವೇ ತಪ್ಪಿತಸ್ಥರು ಯಾರೆಂಬುದು ಗೊತ್ತಾಗಲಿದೆ'' ಎಂದಿದ್ದಾರೆ.

  ಮದುವೆಗೆ ಒತ್ತಾಯ ಮಾಡಿದ್ದರೆಂದು ನಟಿಯ ತಂದೆಯ ಆರೋಪಕ್ಕೆ ಪ್ರತಿಕ್ರಿಯಿಸಿದ ವಿವೇಕ್, ''ಮಗಳನ್ನು ಕಳೆದುಕೊಂಡಿದ್ದಾರೆ ಅದಕ್ಕೆ ಹಾಗೆ ಮಾತನಾಡುತ್ತಿದ್ದಾರೆ. ಮದುವೆಗೆ ಯಾರು ಒತ್ತಾಯ ಮಾಡಿದ್ದರು ಎಂಬೆಲ್ಲ ಅಂಶಗಳು ಮುಂದೆ ನಿಮಗೇ ಗೊತ್ತಾಗಲಿವೆ, ಪೊಲೀಸರ ತನಿಖೆ ಮುಗಿಯುವವರೆಗೆ ತಾಳ್ಮೆಯಿಂದಿರಿ'' ಎಂದು ಮಾಧ್ಯಮಗಳ ಬಳಿ ಮನವಿ ಮಾಡಿದ್ದಾರೆ.

  ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಪ್ರತಿಕ್ರಿಯಿಸಿರುವುದರಿಂದ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿದ್ದು, ಪ್ರಕರಣದ ಗಂಭೀರ ತನಿಖೆ ನಡೆಸುತ್ತಿದ್ದಾರೆ. ನಟಿಯ ಪಿಎ ಆಗಿದ್ದ ಮಹೇಶ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಮೊಬೈಲ್‌ ವಿಡಿಯೋ, ಕಾಲ್ ರೆಕಾರ್ಡ್‌ ಇನ್ನಿತರೆ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಟಿಯ ಪಿಎ ಮಹೇಶ್ ಅನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  ಸವಿ ಮಾದಪ್ಪ, ಕನ್ನಡದ 'ಚೌಕಟ್ಟು', 'ಫನ್' ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಕೆಲವು ಧಾರಾವಾಹಿಗಳಲ್ಲಿಯೂ ಸವಿ ನಟಿಸಿದ್ದರು. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆ ಇದ್ದ ಸವಿ ಮಾದಪ್ಪ ಸೆಪ್ಟೆಂಬರ್ 30 ಬೆಳಗ್ಗೆ ಗೆಳೆಯ ತಿಂಡಿ ತರಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಸವಿ ಮಾದಪ್ಪ ಬರೆದಿದ್ದಾರೆ ಎನ್ನಲಾದ ಡೆತ್‌ ನೋಟ್ ಪೊಲೀಸರಿಗೆ ದೊರಕಿದ್ದು, ''ನನ್ನ ಗೆಲುವಿಗೆ ಸಹಾಯ‌ ಮಾಡಿ ಎಲ್ಲರಿಗೂ ಧನ್ಯವಾದಗಳು. ಜೀವನದಲ್ಲಿ ತುಂಬಾನೆ ಜವಬ್ದಾರಿ ಇತ್ತು. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ. ನಾನು ಮಾತು ಕೊಟ್ಟ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ಐ ಲವ್ ಯು ಪಪ್ಪ, ಅಮ್ಮ ನಾನು ಮನೆಗೆ ಬರುತ್ತೇನೆ ಎಂದು ಹೇಳಿದ್ದೆ. ಆದರೆ ಈ ಸ್ಥಿತಿಯಲ್ಲಿ ಮನೆಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ನನಗೆ ಮುಂದೆ ಒಳ್ಳೆಯ ಭವಿಷ್ಯ ಇತ್ತು ಅನ್ನೋದು ಗೊತ್ತಿದೆ, ಆದರೂ ಪರವಾಗಿಲ್ಲ. ನನ್ನ‌ ಸಾವಿನ ಬಗ್ಗೆ ಹಾಗೂ ಬರೆದಿರುವ ಪತ್ರವನ್ನ ಯಾವುದೇ ಮಾಧ್ಯಮಗಳಿಗೂ ಕೊಡಬೇಡಿ'' ಎಂದು ನಟಿ ಸವಿ ಮಾದಪ್ಪ ಮನವಿ ಮಾಡಿದ್ದರು.

  English summary
  Actress Savi Madappa's friend Vivek said he don't know the reason why she end her life. She hanged herself in a apartment in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X