ಕಾನ್ಸರ್ ರೋಗಿಗಳಿಗೆ ನಟಿ ಶರ್ಮಿಳಾ ಮಾಂಡ್ರೆ ಸಹಾಯ ಹಸ್ತ
ನಟಿ ಶರ್ಮಿಳಾ ಮಾಂಡ್ರೆ ಕಾನ್ಸರ್ ರೋಗಿಗಳಿಗೆ ಸಹಾಯ ಮಾಡಿದ್ದಾರೆ. ಈ ಕೆಲಸವನ್ನು ನಾನು 'ಪ್ರಚಾರಕ್ಕಾಗಿ ಮಾಡುತ್ತಿಲ್ಲ' ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
''ಕ್ಯಾನ್ಸರ್ ರೋಗ ಈಗ ಸಾಮಾನ್ಯವಾಗಿ ಬಿಟ್ಟಿದೆ. ಪ್ರತಿ ವರ್ಷ 11,57,294 ಜನರು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಅದರಲ್ಲಿ 7,84,821 ಜನರು ಜೀವ ಕಳೆದುಕೊಳ್ಳುತ್ತಾರೆ. ಹೀಗಾಗಿ, ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದೆ.'' ಎಂದಿರುವ ಶರ್ಮಿಳಾ ಮಾಂಡ್ರೆ ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
''ನಾವು ಹಣಕಾಸಿನ ಭದ್ರತೆ, ವಿಮೆ ಮಾಡಿಸಿರುತ್ತೇವೆ. ಆದರೆ, ಅನೇಕರಿಗೆ ಚಿಕಿತ್ಸೆ, ಔಷಧಿಗಳಿಗೆ ಸಹ ಹಣ ಇರುವುದಿಲ್ಲ. ಎಷ್ಟೋ ಮಕ್ಕಳು ಆಸ್ಪತ್ರೆಯಲ್ಲಿಯೇ ಕೂತು ಓದಲು ಬಯಸುತ್ತಾರೆ. ಅವರಿಗೆ ಪುಸ್ತಕದ ಅವಶ್ಯಕತೆ ಇರುತ್ತದೆ. ಅನೇಕರಿಗೆ ಹಣಕಾಸಿನ ಸಹಾಯ ಮಾಡಲು ಆಗದೆ ಇದ್ದರೆ, ಅಗತ್ಯ ವಸ್ತುಗಳನ್ನು ನೀಡಬಹುದು.'' ಎಂದು ತಿಳಿಸಿದ್ದಾರೆ.

ಕ್ಯಾನ್ಸರ್ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಮನಸ್ಸು ಇದ್ದು, ಹೇಗೆ ಮಾಡುವುದು ಎಂದು ತಿಳಿಯದಿದ್ದರೆ ನನ್ನನ್ನು ಸಂಪರ್ಕ ಮಾಡಿ ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ತಮ್ಮ ಕೈನಲ್ಲಿ ಆದ ಸಹಾಯ ಮಾಡಿರುವ ಅವರು ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶರ್ಮಿಳಾ ಮಾಂಡ್ರೆ ಬಹಳ ದಿನಗಳ ನಂತರ 'ಗಾಳಿಪಟ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಯೋಗರಾಜ್ ಭಟ್ ನಿರ್ದೇಶಕದ ಚಿತ್ರವಾಗಿದೆ.


Click it and Unblock the Notifications











