ಪ್ರಜ್ವಲ್ ಮತ್ತು ಪೆನ್ ಡ್ರೈವ್ ; ಇಷ್ಟು ದೊಡ್ಡ ಆರೋಪವನ್ನ ನಾವು ಯಾವತ್ತು ಕೇಳಿಯೇ ಇಲ್ಲ ಎಂದ ಶ್ರುತಿ..!
ಲೋಕಸಭಾ ಚುನಾವಣೆ ಫಲಿತಾಂಶಕ್ಕಿಂತ ಪ್ರಜ್ವಲ್ ರೇವಣ್ಣ ಅವರ ಮುಂದಿನ ನಡೆಯ ಮೇಲೆ ಎಲ್ಲರ ಕಣ್ಣಿದೆ. ಸಪ್ತಸಾಗರದಾಚೆ ಇರುವ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಬರ್ತಾರಾ ಅನ್ನುವ ಕುತೂಹಲ ಎಲ್ಲರಲ್ಲಿ ಇದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಹೇಳಿದಂತೆ ಸಮಯ ಎಲ್ಲ ಕೊಡಲು ಸಾಧ್ಯ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನ ಕರೆಸುವಂತೆ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಸಿದ್ದರಾಯ್ಯ ಅವರು ಪತ್ರ ಬರೆದಿದ್ದಾರೆ.
ಇನ್ನೂ ಕೇವಲ ಕನ್ನಡ ಚಿತ್ರರಂಗ ಮಾತ್ರ ಅಲ್ಲ, ಬೇರೆ ಭಾಷೆಯ ಚಿತ್ರರಂಗ ಕೂಡ ಈ ಪ್ರಕರಣದ ಬಗ್ಗೆ ಆಕ್ರೋಶವನ್ನ ಹೊರ ಹಾಕ್ತಿದೆ. ತಪ್ಪು ಮಾಡಿದ್ದರೆ ಶಿಕ್ಷೆಯಾಗ್ಲೇಬೇಕು ಎಂಬ ಒತ್ತಾಯವನ್ನೂ ಮಾಡುತ್ತಿದೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಮತ್ತು ರಾಜಕಾರಣಿ ಶ್ರುತಿ ಕೂಡ ಈ ಒತ್ತಾಯದ ಕೂಗಿಗೆ ಈಗ ದನಿಗೂಡಿಸಿದ್ದಾರೆ

ಹೌದು, ಸುಡು ಬಿಸಿಲನ್ನೂ ಲೆಕ್ಕಿಸದೇ, ನಿನ್ನೆ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರ ಹಾವೇರಿಯಲ್ಲಿ ಪ್ರಚಾರ ಮಾಡ್ತಿದ್ದರು. ಇದೇ ಸಮಯದಲ್ಲಿ ನ್ಯೂಸ್ ಫಸ್ಟ್ ಜೊತೆ ಮಾತನಾಡಿರುವ ಶ್ರುತಿ, ಪ್ರಜ್ವಲ್ ರೇವಣ್ಣ ಮತ್ತು ಪೆನ್ ಡ್ರೈವ್ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಆರೋಪ ಕೇಳಿ ಬಂದಿದೆ. ಒಂದು ವೇಳೆ ಈ ಆರೋಪ ನಿಜ ಆಗಿದ್ದೇ ಆದಲ್ಲಿ ನಿಜಕ್ಕೂ ಇದು ದುರದೃಷ್ಟಕರ ಎಂದಿದ್ದಾರೆ. ಈ ತರಹದ ಪ್ರಕರಣಗಳನ್ನು ನಾವು ಯಾವತ್ತೂ ಕೇಳಿಯೇ ಇಲ್ಲ. ಇಷ್ಟು ದೊಡ್ಡ ಆರೋಪವನ್ನು ಕೂಡ ನಾವು ಯಾವತ್ತೂ ಕೇಳಿಯೇ ಇಲ್ಲ ಎಂದು ಹೇಳಿದ್ದಾರೆ.

ಈ ತರದ ವಿಚಾರಗಳನ್ನು ಯಾರು ಸರಿ ಅನ್ನೊದಿಲ್ಲ ಎಂದಿರುವ ಶ್ರುತಿ, ಚುನಾವಣೆ ಸಂದರ್ಭದಲ್ಲಿ, ಜನರು ವೋಟ್ ಮಾಡುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಯಾರು ದೇಶವನ್ನು ಆಳುವ ಅರ್ಹತೆ ಇದೆ, ಒಳ್ಳೆಯ ಮುಂದಾಲೋಚನೆ ಇದೆ. ಅಂತವರಿಗೆ ಈ ದೇಶವನ್ನು ಕೊಡುವ ಸಂದರ್ಭದಲ್ಲಿ ಈ ಒಂದು ಪ್ರಕರಣ ಬಂದಿರುವುದು ಕೂಡ ನನಗೆ ತುಂಬಾ ವಿಷಾದ ಅನಿಸುತ್ತೆ ಎಂದಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಎಸ್‌ಐಟಿಗೆ ವಹಿಸಿದೆ. ಅವರು ಈ ಪ್ರಕರಣ ತನಿಖೆ ಮಾಡಲಿ. ತಪ್ಪೇ ಇದ್ದರೇ ಕಾನೂನು ಅಡಿ ಶಿಕ್ಷೆ ಆಗಬೇಕು ಎಂದು ಕೂಡ ಹೇಳಿದ್ದಾರೆ ಶ್ರುತಿ
ಉಳಿದಂತೆ ವಿದೇಶಕ್ಕೆ ಪರಾರಿಯಾಗಿರುವ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ 'ಲುಕ್ ಔಟ್' ನೋಟಿಸ್ ಅಸ್ತ್ರ ಪ್ರಯೋಗಿಸಿದೆ. ತನಿಖಾ ಪ್ರಕ್ರಿಯೆ ಭಾಗವಾಗಿ ಆರೋಪಿಗೆ ನೋಟಿಸ್ ಜಾರಿಗೊಳಿಸಿದ್ದ ತನಿಖಾ ತಂಡ, ವಿದೇಶದಲ್ಲಿರುವ ಸುಳಿವು ಆಧರಿಸಿ ಬಂಧನಕ್ಕೆ ಲುಕ್‌ಔಟ್ ನೋಟಿಸ್ ಹೊರಡಿಸಿದೆ. ದೇಶದ ಎಲ್ಲಾನಗರಗಳ ಪೊಲೀಸ್ ವಿಭಾಗಗಳು, ತನಿಖಾ ಸಂಸ್ಥೆಗಳು, ಗುಪ್ತಚರ ದಳಗಳಿಗೂ ಈ ಮಾಹಿತಿ ರವಾನಿಸಲಾಗಿದೆ. ಜತೆಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಇಮ್ಮಿಗ್ರೇಶನ್ ಅಧಿಕಾರಿಗಳಿಗೂ ಲುಕ್‌ಔಟ್ ನೋಟಿಸ್ ಕಳುಹಿಸಿ ಆರೋಪಿ ಸುಳಿವು ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


Click it and Unblock the Notifications











