ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ: ಕೈ ಹಿಡಿಯಲಿರುವ ಮಂಗಳೂರು ಉದ್ಯಮಿ
ನಟಿ ಶುಭಾ ಪೂಂಜಾ ಅವರಿಗೆ ಕೊರೊನಾ ಸಮಯದಲ್ಲಿ ಕಂಕಣಭಾಗ್ಯ ಕೂಡಿ ಬಂದಿದೆ. ವಿವಾಹ ನಿಶ್ಚಯವಾಗಿದ್ದು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಮೊಗ್ಗಿನ ಮನಸ್ಸು ನಟಿ.
Recommended Video
36 ವರ್ಷದ ಶುಭಾ ಪೂಂಜಾ ತಮ್ಮ ಗೆಳೆಯ ಸುಮಂತ್ ಮಹಾಬಲ ಅವರ ಕೈಹಿಡಿಯಲಿದ್ದು, ಇದೇ ವರ್ಷದಲ್ಲಿ ಮದುವೆ ಆಗಲಿದ್ದಾರಂತೆ.
ಸುಮಾರು ಒಂದು ವರ್ಷದಿಂದ ಇಬ್ಬರೂ ಪ್ರೇಮದಲ್ಲಿದ್ದು ಇಬ್ಬರ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ಶೀಘ್ರವೇ ಈ ಜೊಡಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದೆ.

ಉಡುಪಿ ಮೂಲದ ಉದ್ಯಮಿ
ಸುಮಂತ್ ಮಹಾಬಲ ಅವರು ಉಡುಪಿ ಮೂಲದ ಉದ್ಯಮಿ ಆಗಿದ್ದಾರೆ. ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಅವರು ಫೊಟೊ ಶೂಟ್ ಮಾಡಿಸಿಕೊಂಡಿದ್ದು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೆಸರು ನೀಡಿದ ಮೊಗ್ಗಿನ ಮನಸ್ಸು
ಮಚ್ಚಿ ಎಂಬ ತಮಿಳು ಸಿನಿಮಾ ಮೂಲಕ ಸಿನಿಮಾರಂಗ ಪ್ರವೇಶಿಸಿದ ಶುಭಾ ಪೂಂಜಾ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಐಟಂ ಹಾಡುಗಳಲ್ಲೂ ಸೊಂಟ ಬಳುಕಿಸಿದ್ದಾರೆ. ಮೊಗ್ಗಿನ ಮನಸ್ಸು ಆರಂಭದಲ್ಲಿ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ.

ಅದ್ಧೂರಿಯಾಗಿ ಮದುವೆ ನಡೆಯಲಿದೆ
ಇದೇ ವರ್ಷದ ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಯಲಿದ್ದು, ಮಂಗಳೂರಿನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ ನಡೆಸಲು ಕುಟುಂಬದವರು ಯೋಜಿಸಿದ್ದಾರೆ ಎನ್ನಲಾಗಿದೆ.

ಕೆಲವು ಸಿನಿಮಾಗಳು ಕೈಲಿವೆ
ಶುಭಾ ಪೂಂಜಾ ಕನ್ನಡದ ಗೋಲ್ ಮಾಲ್ ಹಾಗೂ ಬೀರ ಸಿನಿಮಾಗಳಲ್ಲಿ ನಟಿಸುವವರಿದ್ದಾರೆ. ಲಾಕ್‌ಡೌನ್ ಗೆ ಕೆಲವೇ ದಿನಗಳ ಮುಂಚೆ ಬಿಡುಗಡೆಯಾದ ನರಗುಂದ ಬಂಡಾಯ ಸಿನಿಮಾದಲ್ಲಿ ಶುಭಾ ಪೂಂಜಾ ನಟಿಸಿದ್ದಾರೆ.


Click it and Unblock the Notifications











