ಬಹುರೂಪಿ ಚಲನಚಿತ್ರೋತ್ಸವಕ್ಕೆ ನಟಿ ತಾರಾ ಚಾಲನೆ
ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟಿ ಹಾಗೂ ಅರಣ್ಯ ನಿಗಮ ಮಂಡಳಿ ಅಧ್ಯಕ್ಷೆ ತಾರಾ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮೈಸೂರೆಂದರೆ ಆಪ್ತ ತಾಣ. ಎಲ್ಲರನ್ನೂ ಅಪ್ಪಿ ಒಪ್ಪಿಕೊಂಡಿರುವ ಈ ಊರಿಗೆ ಬಂದರೆ ಹೊಸ ಶಕ್ತಿ ಸಿಗುತ್ತದೆ. ಕಲೆಗಳ ತವರೂರು ಮೈಸೂರು. ಈ ನಗರದಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಆಯೋಜನೆಗೊಂಡಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಬಹಳ ಖುಷಿಯಿಂದ ಉದ್ಘಾಟನೆ ನೆರವೇರಿಸಿದ್ದೇನೆ ಎಂದು ತಿಳಿಸಿದರು.
ಚಲನಚಿತ್ರ ಒಂದು ಸಮಗ್ರ ಕಲೆ. ಇದರಲ್ಲಿ ಜಾತಿ, ಧರ್ಮ ಹುಡುಕಬಾರದು. ಕಲೆ ಎಲ್ಲವನ್ನೂ ಮೀರಿ ನಿಂತಿದೆ. ಕೇವಲ ಸೂಟುಬೂಟು ಹಾಕಿಕೊಂಡವರು ಮಾತ್ರ ಸಿನಿಮಾ ನೋಡಲು ಬರುವುದಿಲ್ಲ. ಸಿನಿಮಾಗೆ ಎಲ್ಲಾ ವರ್ಗದ ಪ್ರೇಕ್ಷಕರು ಇದ್ದಾರೆ. ಕಲಾವಿದನಿಗೆ ಗಡಿ, ಭಾಷೆಗಳ ಮಿತಿ ಇರುವುದಿಲ್ಲ. ಕಲಾವಿದರೆಲ್ಲವೂ ಒಗ್ಗಟ್ಟಾಗಿ ಇರಬೇಕು ಎಂದು ತಿಳಿಸಿದರು.

ಈ ಬಾರಿ ಬಹುರೂಪಿ ನಾಟಕೋತ್ಸವ ತಾಯಿ ಎಂಬ ಥೀಮ್ ಅಡಿ ನಡೆಯುತ್ತಿರುವುದು ಖುಷಿಯ ವಿಚಾರ. ಎಲ್ಲಾ ಪುರುಷರ ಹಿಂದೆ ಒಬ್ಬ ತಾಯಿ ಇದ್ದಾಳೆ. ಎಲ್ಲಾ ತಾಯಿ ಹಿಂದೆ ಒಬ್ಬ ಪುರುಷ ಇದ್ದಾನೆ. ತಾಯಿಗೆ ಆಕೆ ಅಷ್ಟೇ ಸಾಟಿ. ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಸಿನಿಮಾ ಕೂಡ ಚಲನಚಿತ್ರೋತ್ಸವದಲ್ಲಿದೆ. ನಮ್ಮೆಲ್ಲರ ಹೃದಯ ಕಮಲದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ. ಅವರಿಗೆ ಸಾವಿಲ್ಲ, ಸದಾ ಜೀವಂತವಾಗಿರುತ್ತಾರೆ ಎಂದರು.
ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರವಾದಿ ಮ್ಯಾನ್ ಮನು, ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲ ಮಠಪತಿ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಂಚಾಲಕ ಅಂಜುಸಿಂಗ್ ಸೇರಿದಂತೆ ಇತರರು ಇದ್ದರು.
ಮೊದಲ ದಿನ ಕೊಡವ ಭಾಷೆಯ ದ ಸ್ಟೋರಿ ಆಫ್ ಕಾವೇರಿ, ಇಂಗ್ಲಿಷ್ ಭಾಷೆಯ ಕೇರಿಂಗ್ ಫಾರ್ 7 ಬಿಲಿಯನ್, ಕಜಕಿಸ್ತಾನದ ಕುರ್ಮಾಂಜನ್ ದಡ್ಕ ಚಿತ್ರ ಪ್ರದರ್ಶನಗೊಂಡವು.


Click it and Unblock the Notifications











