ಈ ಗೌರವ ಸಿಕ್ಕಿರುವುದು ನನ್ನ ಅದೃಷ್ಟ; ಡಾಕ್ಟರೇಟ್ ಬಗ್ಗೆ ನಟಿ ತಾರಾ ಮಾತು
ಹಿರಿಯ ನಟಿ ತಾರಾ ಅವರಿಗೆ ಇತ್ತೀಚೆಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಎಇತ್ತು. ತಮ್ಮ ಆಪ್ತರ ಜೊತೆ ಈ ಸಂಭ್ರಮವನ್ನು ಅವರು ಹಂಚಿಕೊಂಡಿದ್ದರು. ನ್ಯಾಷನಲ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ತಾರಾ ಪ್ರತಿಕ್ರಿಯಿಸಿದ್ದರು. ನಮ್ಮ ಸಾಧನೆ ಮೆಚ್ಚಿ ಗೌರವ ನೀಡುವಾಗ ಬೇಡ ಎನ್ನಬಾರದು ಎಂದು ತಾರಾ ಮಾತನಾಡಿದ್ದರು.
ರಾಜ್ಯೋತ್ಸವ ಪ್ರಶಸ್ತಿ, ಡಾಕ್ಟರೇಟ್ ಗೌರವ ಬಂದಾಗ ಅದನ್ನು ಯಾರು ನಿರೀಕ್ಷಿರುವುದಿಲ್ಲ. ಕಲೆಗೆ ನಮ್ಮ ಸೇವೆ ಪುರಸ್ಕರಿಸಿ ಪ್ರಶಸ್ತಿ ಅಥವಾ ಡಾಕ್ಟರೇಟ್ ಕೊಟ್ಟಾಗ ಖುಷಿಯಾಗುತ್ತದೆ. ಇಂತಹ ಗೌರವ ಸಿಕ್ಕಿರುವುದು ಅದೃಷ್ಟ ಎಂದು ಭಾವಿಸುತ್ತೇನೆ. ನನಗೆ ಡಾಕ್ಟರೇಟ್ ಸಿಗುತ್ತದೆ ಎಂದು ಪತಿ ವೇಣುಗೆ ಗೊತ್ತಾದಾಗ ಅವರಿಗೂ ನನ್ನಷ್ಟೆ ಗಾಬರಿ ಆಗಿತ್ತು ಎಂದು ತಾರಾ ಹೇಳಿದ್ದರು.

"ನನಗೂ ಡಾಕ್ಟರೇಟ್ ಬೇಡ ಎನಿಸಿತ್ತು, ವೇಣು ಕೂಡ ಅದನ್ನೇ ಹೇಳಿದ್ರು, ಆಗ ಗಿರಿಜಾ ಲೋಕೇಶ್, ಹೇಮಾ ಚೌಧರಿ ಅಂತಹವರಿಗೆ ನೀಡುವಂತೆ ಸಲಹೆ ನೀಡಿದ್ದೆ. ಆದರೆ ಅವರು ಒಪ್ಪಲಿಲ್ಲ. ನಿಮಗೆ ಕೊಡಬೇಕು ಎಂದು ನಿರ್ಧರಿಸಲಾಗಿದೆ ಎಂದರು. ಹಾಗಾಗಿ ಒಪ್ಪಿಕೊಂಡೆ. ಡಾಕ್ಟರೇಟ್ ಎನ್ನುವುದು ಹಿರಿಯರಿಗೆ ಕೊಡುವುದು ಎಂದು ನಾನು ಅಂದುಕೊಂಡಿದ್ದೆ. ಯಾವುದೇ ಪ್ರಶಸ್ತಿಯನ್ನು ನಿರಾಕರಿಸುವ ಮಟ್ಟಿಗೆ ನಾನು ಬೆಳೆದಿಲ್ಲ. ಆಯ್ಕೆ ಸಮಿತಿ ನಮಗೆ ಪ್ರಶಸ್ತಿ ಕೊಡುತ್ತಾರೆ ಅಂದರೆ ಅದು ನಮಗೆ ಗೌರವ. ನಟಿ ತಾರಾಗೆ ಅಲ್ಲ ಅದು ಆ ಪಾತ್ರಕ್ಕೆ ಸಿಗುವ ಗೌರವ ಎಂದುಕೊಳ್ಳುತ್ತೇನೆ. ಆದರೆ ಸಮಗ್ರ ಸೇವೆಗೆ ಕೊಟ್ಟಾಗ ನಾನು ಇನ್ನು ಸಾಧಿಸುವುದು ಇದೆ ಅನ್ನಿಸಿತು. ಹಾಗಾಗಿ ನನಗಿಂತ ಹಿರಿಯರಿಗೆ ಕೊಡಿ ಎಂದಿದ್ದೆ" ಅಂತ ತಾರಾ ವಿವರಿಸಿದ್ದರು.
ನಟಿ ತಾರಾ ಅವರು ಪ್ರಶಸ್ತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆದರೆ ಇದನ್ನು ನಟ ಸುದೀಪ್ ಅವರು ಇತ್ತೀಚೆಗೆ ಡಾಕ್ಟರೇಟ್ ಹಾಗೂ ರಾಜ್ಯಪ್ರಶಸ್ತಿ ನಿರಾಕರಿಸಿದ್ದಕ್ಕೆ ಹೋಲಿಕೆ ಮಾಡಿ ವೀಡಿಯೋ ವೈರಲ್ ಮಾಡಲಾಗುತ್ತಿದೆ. ಈ ಬಗ್ಗೆ ನಟಿ ತಾರಾ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಶಸ್ತಿಗಳ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೇ. ನಾನು ಸುದೀಪ್ ಆಗಲಿ ಅಥವಾ ಬೇರೆ ಯಾರ ವಿಚಾರವನ್ನು ಪ್ರಸ್ತಾಪಿಸಿ ಆ ರೀತಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಣ್ಣಪುಟ್ಟ ಪಾತ್ರಗಳಿಂದ ನಟನೆ ಆರಂಭಿಸಿದ ತಾರಾ ಬಳಿಕ ನಾಯಕಿಯಾಗಿ ಗೆದ್ದರು. ದಿಗ್ಗಜ ಕಲಾವಿದರ ಜೊತೆ ತೆರೆ ಹಂಚಿಕೊಂಡು ಮೋಡಿ ಮಾಡಿದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್‌ರಂತಹ ಕಲಾವಿದರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. 'ಹಸೀನಾ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ನಟಿ ತಾರಾ ಪಡೆದಿದ್ದಾರೆ. ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ.


Click it and Unblock the Notifications










