"ಗೌರವ ಡಾಕ್ಟರೇಟ್ ಬಂದಿರುವುದು ಖುಷಿಯಿದೆ" ಎಂದ ನಟಿ ಡಾ.ತಾರಾ ಅನುರಾಧ
ಸ್ಯಾಂಡಲ್‌ವುಡ್ ಪ್ರೇಕ್ಷಕರಿಗಂತೂ ನಟಿ ತಾರಾ ಅನುರಾಧ ಚಿರಪರಿಚಿತ. ಇತ್ತೀಚೆಗೆ ಕಿರುತೆರೆ ಪ್ರೇಕ್ಷಕರಿಗೂ ಬಹಳ ಹತ್ತಿರವಾಗಿರುವ ಈ ನಟಿಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ. ಹೌದು, ವಿಜಯಪುರ ಮೂಲದ ಬರಹಗಾರ್ತಿ ಹೋರಾಟಗಾರ್ತಿ ಮೀನಾಕ್ಷಿ ಬಲಿ ಅವರು, ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವ ಸಮಾರಂಭದಲ್ಲಿ ನಟಿ ತಾರಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.
ಕಳೆದ ನಾಲ್ಕು ದಶಕಗಳಿಂದಲೂ ಕಲಾ ಕ್ಷೇತ್ರದಲ್ಲಿ ಸೇವೆ ಹಾಗೂ ಸಾಧನೆಗಳನ್ನು ಮಾಡುತ್ತಿರುವ ನಟಿ ತಾರಾ ಅನುರಾಧ ನಟನೆ ಅಷ್ಟೇ ಅಲ್ಲದೆ ರಾಜಕೀಯ ಹಾಗೂ ಮಹಿಳಾ ಸಬಲೀಕರಣದ ವಿಚಾರವಾಗಿಯೂ ಸದಾ ಆಸಕ್ತಿಯನ್ನು ತೋರಿದ್ದಾರೆ. ಇವರ ಕಲಾ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿದ್ದಲ್ಲದೆ ಇದೀಗ ಗೌರವ ಡಾಕ್ಟರೇಟ್ ಕೂಡ ಸಿಕ್ಕಿದೆ.

ಗೌರವ ಡಾಕ್ಟರೇಟ್ ಪಡೆದ ಸಂತಸದಲ್ಲಿ ಮಾತನಾಡಿದ ನಟಿ ತಾರಾ ಈ ಭಾಗದಲ್ಲಿ ಶೂಟಿಂಗ್‌ಗೆಂದು ಬಂದಾಗಲೇ ನಾನು ತಾಯಿ ಆಗುತ್ತಿದ್ದೇನೆ ಎಂಬ ವಿಚಾರ ತಿಳಿದಿದ್ದು. ವಿಧಾನ ಪರಿಷತ್‌ನ ಸದಸ್ಯೆಯಾಗಿ ಬೆಳಗಾವಿ ಸುವರ್ಣಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಹಾಗಾಗಿ ಈ ಭಾಗದ ನೆನಪು ನನಗೂ ವಿಶೇಷ ಸಂಬಂಧವಿದೆ ಎಂದೂ ತೀರಿಸಲಾಗದ ಋಣವಂತೂ ಖಂಡಿತಾ ಇದೆ ಎಂದು ಹೇಳಿಕೊಂಡಿದ್ದಾರೆ.
ನಟಿಯಾಗಿ ಕಲಾವಿದೆಯಾಗಿ ಹಲವಾರು ವರ್ಷಗಳಿಂದ ನಾನು ಇದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈವರೆಗೂ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದುಕೊಂಡಿರಬಹುದು. ಆದರೆ ಈ ರೀತಿಯ ಗೌರವ ಡಾಕ್ಟರೇಟ್ ಪಡೆದುಕೊಂಡಿರುವುದು ನನಗಂತೂ ಬಹಳ ಸಂತೋಷ ಹಾಗೂ ಸಂತೃಪ್ತಿ ನೀಡಿದೆ. ನನ್ನ ಕಲಾ ಸೇವೆಯನ್ನು ಗುರುತಿಸಿ ಈ ಡಾಕ್ಟರೇಟ್ ಅನ್ನು ನೀಡಿರುವ ವಿಶ್ವವಿದ್ಯಾಲಯಕ್ಕೂ ಹಾಗೂ ನನ್ನೆಲ್ಲ ಅಭಿಮಾನಿ ಪ್ರೇಕ್ಷಕರಿಗೂ ನಾನು ಸದಾ ಋಣಿ ಎಂದರು ನಟಿ ತಾರಾ ಅನುರಾಧ.
'ಇಂಗೆಯುಮ್ ಒರು ಗಂಗಾಯ್' ಎಂಬ ತಮಿಳ್ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ತಾರಾ ಅನುರಾಧ, ತುಳಸಿದಳ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. 18 ವರ್ಷ ವಯಸ್ಸು ತುಂಬುವುದರೊಳಗೆ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು ಈಕೆ. 'ಕ್ರಮ', 'ಮುಂಜಾನೆಯ ಮಂಜು', 'ಕಾನೂರು ಹೆಗ್ಗಡತಿ', 'ಮುನ್ನುಡಿ', 'ಹಸೀನಾ', 'ಮತದಾನ', 'ಈ ಬಂಧನ', 'ಶ್ರಾವಣಿ ಸುಬ್ರಮಣ್ಯ', 'ಕೆಂಪೇಗೌಡ', 'ಉಳಿದವರು ಕಂಡಂತೆ', 'ಎಲ್ಲಿದ್ದೆ ಇಲ್ಲಿ ತನಕ', 'ಹೆಬ್ಬೆಟ್ ರಾಮಕ್ಕ', 'ಆದಿಲಕ್ಷ್ಮಿ ಪುರಾಣ', 'ಟಗರು ಪಲ್ಯ', 'ಬಡವ ರಾಸ್ಕಲ್' ಹೀಗೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಪ್ರಸ್ತುತ ಕನ್ನಡ ಕಿರುತೆರೆಯ ಹಲವಾರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ನಟಿ ತಾರಾ ಅನುರಾಧ 'ರಾಜ ರಾಣಿ', 'ನನ್ನಮ್ಮ ಸೂಪರ್ ಸ್ಟಾರ್' ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಸೀಸನ್ 11ರಲ್ಲಿ ಸಹ ಅತಿಥಿಯಾಗಿ ಕಾಣಿಸಿಕೊಂಡಿದ್ದರು.
ಇದೀಗ ವಿಜಯಪುರದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಸಂಭ್ರಮವನ್ನು ತಮ್ಮವರೊಂದಿಗೆ ಹಂಚಿಕೊಳ್ಳುವ ಸಲುವಾಗಿ ನಟಿ ತಾರಾ ಅನುರಾಧ ಮನೆಯಲ್ಲಿ ಪೂಜಾ ಕಾರ್ಯವೂ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಪೂಜಾ ಗಾಂಧಿ, ಕಾರುಣ್ಯ, ಅನುಪ್ರಭಾಕರ್, ಭಾವನ ರಾವ್ ಸೋನು ಗೌಡ, ಸುಧಾರಾಣಿ, ಶ್ರುತಿ, ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಒಂದಷ್ಟು ವಿಡಿಯೋ ತುಣುಕುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿವೆ.


Click it and Unblock the Notifications











