ರಿಲೀಸ್ ದಿನವೇ 100 ಕೋಟಿ ಕ್ಲಬ್ ಸೇರಿದ 6 ಚಿತ್ರಗಳಿವು; ಕೆಜಿಎಫ್ 2 ಹಿಂದಿಕ್ಕಿತಾ ಆದಿಪುರುಷ್?
ನಿನ್ನೆ ( ಜೂನ್ 16 ) ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ಆದಿಪುರುಷ್ ತೆರೆಗೆ ಅಪ್ಪಳಿಸಿದೆ. ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಚಿತ್ರ ಎಂಬ ವಿಶೇಷತೆಯನ್ನು ಹೊಂದಿದ್ದ ಈ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿದ್ದು ಪ್ಯಾನ್ ಇಂಡಿಯಾ ರಿಲೀಸ್ ಆಗಿದೆ.
ಇನ್ನು ಚಿತ್ರ ಬಿಡುಗಡೆಗೂ ಮುನ್ನ ಕಳಪೆ ವಿಎಫ್ಎಕ್ಸ್ ಕಾರಣಕ್ಕಾಗಿ ಕೆಟ್ಟದಾಗಿ ಟ್ರೋಲ್ ಸಹ ಆಗಿತ್ತು ಹಾಗೂ ಬಳಿಕ ನಿರೀಕ್ಷೆಯನ್ನೂ ಸಹ ಹುಟ್ಟುಹಾಕಿತ್ತು. ರಾಮಾಯಣ ಆಧಾರಿತ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದು, ಕೃತಿ ಸೆನನ್ ಸೀತೆಯ ಪಾತ್ರ ಮಾಡಿದ್ದಾರೆ ಹಾಗೂ ಸೈಫ್ ಅಲಿ ಖಾನ್ ರಾವಣನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ತಾನ್ಹಾಜಿ ರೀತಿಯ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಓಂ ರಾವತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರ ನಿನ್ನೆ ದೊಡ್ಡ ಮಟ್ಟದಲ್ಲಿಯೇ ತೆರೆ ಕಂಡಿದ್ದು, ಒಳ್ಳೆಯ ಮುಂಗಡ ಬುಕಿಂಗ್ ಸಹ ಚಿತ್ರ ಪಡೆದುಕೊಂಡಿತ್ತು.
ಈ ಬುಕಿಂಗ್ ಹಾಗೂ ಕ್ರೇಜ್ ಕಂಡು ಚಿತ್ರ ಮೊದಲ ದಿನ ದಾಖಲೆಯ ಗಳಿಕೆ ಮಾಡಲಿದೆ, ಈ ಹಿಂದೆ ನಿರ್ಮಾಣವಾಗಿದ್ದ ಹಲವು ಪ್ಯಾನ್ ಇಂಡಿಯಾ ಚಿತ್ರಗಳ ಕಲೆಕ್ಷನ್ ಅನ್ನು ಮುರಿಯಲಿದೆ ಎಂಬ ಊಹೆಯನ್ನು ಸಿನಿ ರಸಿಕರು ಮಾಡಿದ್ದರು. ಆದರೆ ಚಿತ್ರ ಅಷ್ಟರಮಟ್ಟಿಗೆ ದೊಡ್ಡ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಮೊದಲ ದಿನ ವಿಶ್ವದಾದ್ಯಂತ ಕೇವಲ 120 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
ಇದು ದೊಡ್ಡ ಕಲೆಕ್ಷನ್ ಎನಿಸಿದರೂ ಸಹ ಚಿತ್ರದ ಬಜೆಟ್ ಹಾಗೂ ಚಿತ್ರದ ಮೇಲಿದ್ದ ನಿರೀಕ್ಷೆಗೆ ಈ ಸಂಖ್ಯೆ ಕಡಿಮೆಯೇ. ಆದರೂ ಸಹ ಚಿತ್ರ ಬಿಡುಗಡೆ ದಿನವೇ ನೂರು ಕೋಟಿ ಕ್ಲಬ್ ಸೇರಿದ ಭಾರತದ ಆರನೇ ಸಿನಿಮಾ ಎಂಬ ದಾಖಲೆಯನ್ನು ಬರೆದಿದೆ. ಹೌದು, ಬಾಹುಬಲಿ 2, ಸಾಹೋ, ಆರ್‌ಆರ್‌ಆರ್, ಕೆಜಿಎಫ್ ಚಾಪ್ಟರ್ 2 ಹಾಗೂ ಪಠಾಣ್ ಬಳಿಕ ಬಿಡುಗಡೆ ದಿನವೇ ನೂರು ಕೋಟಿ ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಂಡಿದೆ.
ಈ ಮೇಲ್ಕಂw ಚಿತ್ರಗಳು ರಿಲೀಸ್ ದಿನ ವಿಶ್ವದಾದ್ಯಂತ ಮಾಡಿದ ಕಲೆಕ್ಷನ್ ವಿವರ ಈ ಕೆಳಕಂಡಂತಿದೆ..
1. ಆರ್ ಆರ್ ಆರ್ - 223 ಕೋಟಿ ರೂಪಾಯಿ ಗ್ರಾಸ್
2. ಬಾಹುಬಲಿ 2 - 213 ಕೋಟಿ ರೂಪಾಯಿ ಗ್ರಾಸ್
3. ಕೆಜಿಎಫ್ ಚಾಪ್ಟರ್ 2 - 165 ಕೋಟಿ ರೂಪಾಯಿ ಗ್ರಾಸ್
4. ಆದಿಪುರುಷ್ - 140 ಕೋಟಿ ರೂಪಾಯಿ ಗ್ರಾಸ್
5. ಸಾಹೋ - 125 ಕೋಟಿ ರೂಪಾಯಿ ಗ್ರಾಸ್
6. ಪಠಾಣ್ - 106 ಕೋಟಿ ರೂಪಾಯಿ ಗ್ರಾಸ್
ಹೀಗೆ ಆದಿಪುರುಷ್ ಚಿತ್ರ ಈ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಆರ್ ಆರ್ ಆರ್, ಬಾಹುಬಲಿ ದ ಕನ್ಕ್ಲೂಷನ್, ಕೆಜಿಎಫ್ ಚಾಪ್ಟರ್ 2 ಕಲೆಕ್ಷನ್ ಅನ್ನು ಹಿಂದಿಕ್ಕುವಲ್ಲಿ ವಿಫಲವಾಗಿದೆ. ಇನ್ನು ಚಿತ್ರಕ್ಕೆ ಮೊದಲ ಪ್ರದರ್ಶನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಅತಿ ಕೆಟ್ಟ ವಿಮರ್ಶೆಗಳೇ ಕಲೆಕ್ಷನ್ ಕಡಿಮೆಯಾಗಲು ಕಾರಣ ಎಂಬ ಅಭಿಪ್ರಾಯವನ್ನೂ ಸಹ ಸಿನಿ ರಸಿಕರು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











