ಕರ್ನಾಟಕ ಬಾಕ್ಸ್ಆಫೀಸ್‌ನಲ್ಲಿ ಆದಿಪುರುಷ್ ಅಬ್ಬರ; ಅಡ್ವಾನ್ಸ್ ಬುಕಿಂಗ್‌ನಿಂದ ಚಿತ್ರ ಮಾಡಿದ ಕಲೆಕ್ಷನ್ ಎಷ್ಟು?
ಇಂದಿನಿಂದ ( ಜೂನ್ 16 ) ವಿಶ್ವದಾದ್ಯಂತ ಆದಿಪುರುಷ್ ಅಬ್ಬರ ಆರಂಭವಾಗಿದೆ. ಚಿತ್ರದಲ್ಲಿ ರಾಮನ ಪಾತ್ರವನ್ನು ರೆಬೆಲ್ ಸ್ಟಾರ್ ಪ್ರಭಾಸ್ ನಿರ್ವಹಿಸಿದ್ದರೆ ಸೀತೆ ಪಾತ್ರವನ್ನು ಕೃತಿ ಸೆನನ್ ಹಾಗೂ ರಾವಣನ ಪಾತ್ರವನ್ನು ಸೈಫ್ ಅಲಿ ಖಾನ್ ಮಾಡಿದ್ದಾರೆ.
ಈ ಹಿಂದೆ ತಾನ್ಹಾಜಿ ರೀತಿಯ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶನ ಮಾಡಿ ಭರ್ಜರಿ ಗೆಲುವು ಕಂಡಿದ್ದ ನಿರ್ದೇಶಕ ಓಂ ರಾವತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆದಿಪುರುಷ್ ಮೂಲ ಹಿಂದಿ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ.

ಇನ್ನು ಮೊದಲಿಗೆ ತನ್ನ ಕಳಪೆ ವಿಎಫ್ಎಕ್ಸ್ ಕಾರಣದಿಂದಾಗಿ ಹೀನಾಯವಾಗಿ ಟ್ರೋಲ್ ಆಗಿದ್ದ ಆದಿಪುರುಷ್ ಚಿತ್ರತಂಡ ಬಳಿಕ ವಿಎಫ್ಎಕ್ಸ್‌ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಒಳ್ಳೆಯ ಗುಣಮಟ್ಟದ ದೃಶ್ಯಗಳಿದ್ದ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರ ಕೋಪ ಕಡಿಮೆ ಮಾಡಿ ಚಿತ್ರದ ನಿರೀಕ್ಷೆ ಹುಟ್ಟುವಂತೆ ಮಾಡಿತು.
ಹೀಗೆ ನಿಧಾನಕ್ಕೆ ತನ್ನ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿಕೊಂಡ ಆದಿಪುರುಷ್ ಸಿನಿ ರಸಿಕರನ್ನು ಚಿತ್ರಮಂದಿರಗಳತ್ತ ಕಾಲಿಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಕಳೆದ ಭಾನುವಾರವೇ ಮುಂಗಡ ಬುಕಿಂಗ್ ಅನ್ನು ತೆರೆದ ಕಾರಣ ಆದಿಪುರುಷ್ ಒಳ್ಳೆಯ ಬುಕಿಂಗ್ ಅನ್ನು ಪಡೆದುಕೊಂಡಿತು.
ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿಯೂ ಆದಿಪುರುಷ್ ಹವಾ ಜೋರಾಗಿದೆ. ತೆಲುಗು, ಹಿಂದಿ ಹಾಗೂ ಕನ್ನಡ ಈ ಮೂರೂ ಅವತರಣಿಕೆಗಳ ಆದಿಪುರುಷ್ ರಾಜ್ಯದಲ್ಲಿ ಪ್ರದರ್ಶನವಾಗುತ್ತಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಆದಿಪುರುಷ್ ತೆಲುಗು, ಹಿಂದಿ ಹಾಗೂ ಕನ್ನಡ ಈ ಮೂರು ಅವತರಣಿಕೆಗಳಿಗೆ ಒಳ್ಳೆಯ ಸಂಖ್ಯೆಯ ಪ್ರದರ್ಶನಗಳೇ ಹೊರಕಿದ್ದು, ಚಿತ್ರ ಈ ವರ್ಷ ನಗರದಲ್ಲಿ ಮೊದಲ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಸಿನಿಮಾ ಎಂಬ ದಾಖಲೆ ಬರೆದಿದೆ.
ಈ ದಾಖಲೆ ಬರೆಯುವುದರ ಜತೆಗೆ ಆದಿಪುರುಷ್ ಬಿಡುಗಡೆಗೂ ಮುನ್ನವೇ ಕರ್ನಾಟಕದಲ್ಲಿ 157000ಕ್ಕೂ ಹೆಚ್ಚಿನ ಟಿಕೆಟ್‌ಗಳು ಮಾರಾಟವಾಗಿದ್ದು, ಅಡ್ವಾನ್ಸ್ ಬುಕಿಂಗ್‌ನಿಂದಲೇ ಬರೋಬ್ಬರಿ 3.53 ಕೋಟಿ ಗಳಿಕೆಯನ್ನು ಮಾಡಿದೆ. ಹೀಗೆ ಮೊದಲ ಪ್ರದರ್ಶನ ಆರಂಭವಾಗುವುದಕ್ಕೂ ಮುನ್ನ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿರುವ ಆದಿಪುರುಷ್ ಮೊದಲ ದಿನದ ಎಲ್ಲಾ ಪ್ರದರ್ಶನಗಳು ಮುಕ್ತಾಯಗೊಂಡ ನಂತರ ಎಷ್ಟು ಗಳಿಕೆ ಮಾಡಲಿದೆ ಹಾಗೂ ಇದು ದಾಖಲೆಯಾಗಲಿದೆಯಾ ಎಂಬ ಕುತೂಹಲ ಮೂಡಿದೆ.
ಇನ್ನು ಆದಿಪುರುಷ್ ಚಿತ್ರದ ಮುಂಜಾನೆ ಪ್ರದರ್ಶನಗಳು ಮುಕ್ತಾಯಗೊಂಡಿದ್ದು, ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದಲ್ಲಿನ ಆಕ್ಷನ್ ದೃಶ್ಯಗಳು ಚೆನ್ನಾಗಿವೆ, ಪ್ರಭಾಸ್ ನಟನೆ ಅದ್ಭುತ ಎಂದು ಹೊಗಳುತ್ತಿರುವ ಸಿನಿ ರಸಿಕರು ನಿರ್ದೇಶನ ಅಷ್ಟಕ್ಕಷ್ಟೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕೇವಲ ಬೆಂಗಳೂರು, ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಆದಿಪುರುಷ್ ಅಬ್ಬರ ಜೋರಾಗಿದೆ. ಎಲ್ಲಾ ರಾಜ್ಯದಲ್ಲಿಯೂ ಸಹ ಮುಂಗಡ ಬುಕಿಂಗ್ ಭರ್ಜರಿಯಾಗಿಯೇ ನಡೆದಿದೆ. ಅಲ್ಲಿಯೂ ಸಹ ಅಡ್ವಾನ್ಸ್ ಬುಕಿಂಗ್‌ನಿಂದಲೇ ಆದಿಪುರುಷ್ ಒಳ್ಳೆಯ ಗಳಿಕೆಯನ್ನು ಮಾಡಿದೆ. ಒಟ್ಟಿನಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಚಿತ್ರ ಪಡೆದುಕೊಳ್ಳುತ್ತಿದ್ದರೂ ಸಹ ಚಿತ್ರ ಮೊದಲ ದಿನ ಒಳ್ಳೆಯ ಗಳಿಕೆ ಮಾಡುವುದಂತೂ ಪಕ್ಕಾ ಎಂದೇ ಹೇಳಬಹುದಾಗಿದೆ.


Click it and Unblock the Notifications











