ಆದಿಪುರುಷ್ ಕನ್ನಡ ಡಬಿಂಗ್‌ಗೆ ಭರ್ಜರಿ ರೆಸ್ಪಾನ್ಸ್; ಮೊದಲ 3 ದಿನಗಳಿಗಿಂತ 4ನೇ ದಿನ ಹೆಚ್ಚು ಶೋ!

ಆದಿಪುರುಷ್.. ಮೊನ್ನೆಯಷ್ಟೇ ( ಜೂನ್ 16 ) ವಿಶ್ವದಾದ್ಯಂತ ಬಿಡುಗಡೆಗೊಂಡ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ಇದೇ ಮೊದಲ ಬಾರಿಗೆ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ ಇದಾಗಿದ್ದು, ಇದು ರಾಮಾಯಣ ಕಥೆಯನ್ನು ಆಧರಿಸಿದ ಸಿನಿಮಾವಾಗಿದೆ.
ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದು, ಸೀತೆ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಹಿಂದಿ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ.
ಆದಿಪುರುಷ್ ಮೂಲ ಹಿಂದಿ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆಯಾಗಿದೆ. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಈ ಚಿತ್ರದ ಕನ್ನಡ, ಹಿಂದಿ ಹಾಗೂ ತೆಲುಗು ಅವತರಣಿಕೆಗಳನ್ನು ಪ್ರದರ್ಶಿಸಲಾಗುತ್ತಿದೆ.
ಅಂದಹಾಗೆ ಕರ್ನಾಟಕದಲ್ಲಿ ಮೊದಲಿಗೆ ಚಿತ್ರದ ಅಡ್ವಾನ್ಸ್ ಬುಕಿಂಗ್ ತೆರೆದಾಗ ಕನ್ನಡದ ಬುಕಿಂಗ್ ಓಪನ್ ಮಾಡದೆಯೇ ಕೇವಲ ತೆಲುಗು ಹಾಗೂ ಹಿಂದಿ ಭಾಷೆಗಳ ಶೋಗಳಿಗೆ ಮಾತ್ರ ಮುಂಗಡ ಬುಕಿಂಗ್ ತೆರೆಯಲಾಗಿತ್ತು. ಹೀಗೆ ಕನ್ನಡ ಡಬಿಂಗ್ ಮುಂಗಡ ಬುಕಿಂಗ್ ತೆರೆಯದ ಕಾರಣ ಕನ್ನಡ ಸಿನಿ ರಸಿಕರು ವಿತರಕ ಕಾರ್ತಿಕ್ ಗೌಡ ವಿರುದ್ಧ ಕಿಡಿಕಾರಿದ್ದರು.
ಆದರೆ ಇದಕ್ಕುತ್ತರಿಸಿದ್ದ ಕಾರ್ತಿಕ್ ಗೌಡ ಆದಿಪುರುಷ್ ಕನ್ನಡ ಡಬಿಂಗ್ ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳಲಿರುವ ಚಿತ್ರವಾಗಲಿದೆ ಕಾದು ನೋಡಿ ಎಂದು ಭರವಸೆ ನೀಡಿದ್ರು. ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡ ಕಾರ್ತಿಕ್ ಗೌಡ ಬೆಂಗಳೂರಿನಲ್ಲಿ ಮೊದಲ ದಿನ ಆದಿಪುರುಷ್ ಕನ್ನಡ ಅವತರಣಿಕೆಗೆ 79 ಪ್ರದರ್ಶನಗಳನ್ನು ನೀಡಿದ್ರು.
ಹೀಗೆ ಮೊದಲ ದಿನ ಇದ್ದ ಈ ಪ್ರದರ್ಶನಗಳಿಗೆ ಸಿನಿ ರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಎರಡನೇ ದಿನ ಕನ್ನಡ ಅವತರಣಿಕೆಗೆ 84 ಪ್ರದರ್ಶನಗಳು ಲಭಿಸಿದವು, ಮೂರನೇ ದಿನ 90 ಶೋಗಳು ಸಿಕ್ಕವು. ಹೀಗೆ ಮೊದಲ ದಿನಕ್ಕಿಂತ ಎರಡನೇ ದಿನ, ಎರಡನೇ ದಿನಕ್ಕಿಂತ ಮೂರನೇ ದಿನ ಬೆಂಗಳೂರಿನಲ್ಲಿ ಹೆಚ್ಚಿನ ಶೋಗಳನ್ನು ಪಡೆದುಕೊಂಡ ಆದಿಪುರುಷ್ ಸೋಮವಾರ, ನಾಲ್ಕನೇ ದಿನ 96 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಹೀಗೆ ರಜಾ ಇಲ್ಲದ ದಿನವೂ ಕನ್ನಡ ಅವತರಣಿಕೆಗೆ ಇಷ್ಟು ದೊಡ್ಡ ಸಂಖ್ಯೆಯ ಪ್ರದರ್ಶನಗಳು ಲಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಕನ್ನಡ ಡಬಿಂಗ್ ಪ್ರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications











