ಮೂರೇ ದಿನಗಳಲ್ಲಿ ಆರ್‌ಆರ್‌ಆರ್ ಕಲೆಕ್ಷನ್ ಧೂಳೀಪಟ ಮಾಡಿದ ಆದಿಪುರುಷ್!
ಕಳೆದ ಶುಕ್ರವಾರವಷ್ಟೇ ( ಜೂನ್ 16 ) ತೆಲುಗು ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ಬಿಡುಗಡೆಗೂ ಮುನ್ನವೇ ತನ್ನ ಟೀಸರ್‌ನ ಕಳಪೆ ವಿಎಫ್ಎಕ್ಸ್ ಕಾರಣದಿಂದಾಗಿ ಹೀನಾಯವಾಗಿ ಟ್ರೋಲ್ ಆಗಿದ್ದ ಆದಿಪುರುಷ್ ಬಿಡುಗಡೆ ನಂತರವೂ ಸಹ ಅದೇ ರೀತಿಯ ಟೀಕೆಗಳನ್ನು ಎದುರಿಸುತ್ತಿದೆ.
ಚಿತ್ರದಲ್ಲಿ ಪಾತ್ರಗಳ ಉಡುಪು, ವೇಷ ಸರಿ ಇಲ್ಲ, ರಾಮಾಯಣ ಕಥೆಯನ್ನು ಆಧರಿಸಿದ ಸಿನಿಮಾದಲ್ಲಿ ರಾಮಾಯಣವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಚಿತ್ರ ವೀಕ್ಷಿಸಿದ ಸಿನಿ ರಸಿಕರು ಕಿಡಿಕಾರಿದ್ದಾರೆ. ಅಲ್ಲದೇ ಚಿತ್ರದಲ್ಲಿ ಕೆಲ ಸಂಭಾಷಣೆಗಳು ಸರಿ ಇಲ್ಲ ಎಂದೂ ಸಹ ಪ್ರೇಕ್ಷಕರು ಆರೋಪ ಮಾಡಿ ಚಿತ್ರತಂಡದ ವಿರುದ್ಧ ಬೇಸರ ಹಾಗೂ ಕೋಪ ವ್ಯಕ್ತಪಡಿಸಿದ್ದಾರೆ.

ಹೀಗೆ ಒಂದೆಡೆ ಟೀಕೆಗಳು ಹಾಗೂ ಟ್ರೋಲ್‌ಗಳು ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಚಿತ್ರ ಹುಟ್ಟುಹಾಕಿದ್ದ ಹೈಪ್‌ಗೆ ತಕ್ಕಂತಹ ಕಲೆಕ್ಷನ್ ಬಾರದಿದ್ದರೂ ಸಹ ಸಮಾಧಾನಕರ ಕಲೆಕ್ಷನ್ ಅನ್ನು ಸಿನಿಮಾ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಆದಿಪುರುಷ್ ಸಮಾಧಾನಕರ ಕಲೆಕ್ಷನ್ ಮಾಡಿದ್ದರೆ, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಅಬ್ಬರಿಸಿ ಬೊಬ್ಬಿರಿಯುತ್ತಿದೆ.
ಹೌದು, ಆದಿಪುರುಷ್ ಕರ್ನಾಟಕದಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ರಾಜ್ಯದಲ್ಲಿ ಹಿಂದಿ, ತೆಲುಗು ಹಾಗೂ ಕನ್ನಡ ಈ ಮೂರು ಭಾಷೆಗಳಲ್ಲಿಯೂ ಆದಿಪುರುಷ್ ಪ್ರದರ್ಶನ ಕಾಣುತ್ತಿದೆ. ಇನ್ನು ಮೊದಲಿಗೆ ಚಿತ್ರದ ಮುಂಗಡ ಬುಕಿಂಗ್ ತೆರೆದಾಗ ಕನ್ನಡ ಬುಕಿಂಗ್ ಅನ್ನು ಆರಂಭಿಸಿರಲಿಲ್ಲ. ಕೇವಲ ಹಿಂದಿ ಹಾಗೂ ತೆಲುಗು ಭಾಷೆಗಳ ಬುಕಿಂಗ್ ತೆರೆಯಲಾಗಿತ್ತು.
ಹೀಗೆ ಕನ್ನಡ ಡಬಿಂಗ್ ಮುಂಗಡ ಬುಕಿಂಗ್ ತೆರೆಯದ ಕಾರಣ ಕನ್ನಡ ಸಿನಿ ರಸಿಕರು ವಿತರಕ ಕಾರ್ತಿಕ್ ಗೌಡ ವಿರುದ್ಧ ಕಿಡಿಕಾರಿದ್ದರು. ಆದರೆ ಇದಕ್ಕುತ್ತರಿಸಿದ್ದ ಕಾರ್ತಿಕ್ ಗೌಡ ಆದಿಪುರುಷ್ ಕನ್ನಡ ಡಬಿಂಗ್ ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳಲಿರುವ ಚಿತ್ರವಾಗಲಿದೆ ಕಾದು ನೋಡಿ ಎಂದು ಭರವಸೆ ನೀಡಿದ್ರು. ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡ ಕಾರ್ತಿಕ್ ಗೌಡ ಕನ್ನಡ ಅವತರಣಿಕೆಗೆ ಹೆಚ್ಚಿನ ಪ್ರದರ್ಶನಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಮೊದಲ ದಿನ ಆದಿಪುರುಷ್ ಕನ್ನಡ ಅವತರಣಿಕೆಗೆ 79 ಸಿಕ್ಕಿತ್ತು. ಹೀಗೆ ಮೊದಲ ದಿನ ಇದ್ದ ಈ ಪ್ರದರ್ಶನಗಳಿಗೆ ಸಿನಿ ರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಎರಡನೇ ದಿನ ಕನ್ನಡ ಅವತರಣಿಕೆಗೆ 84 ಪ್ರದರ್ಶನಗಳು ಲಭಿಸಿದವು, ಮೂರನೇ ದಿನ 90 ಶೋಗಳು ಸಿಕ್ಕವು. ಹೀಗೆ ಮೊದಲ ದಿನಕ್ಕಿಂತ ಎರಡನೇ ದಿನ, ಎರಡನೇ ದಿನಕ್ಕಿಂತ ಮೂರನೇ ದಿನ ಬೆಂಗಳೂರಿನಲ್ಲಿ ಹೆಚ್ಚಿನ ಶೋಗಳನ್ನು ಪಡೆದುಕೊಂಡ ಆದಿಪುರುಷ್ ಸೋಮವಾರ, ನಾಲ್ಕನೇ ದಿನ 96 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಈ ರೀತಿ ಒಳ್ಳೆಯ ಸಂಖ್ಯೆಯ ಪ್ರದರ್ಶನಗಳನ್ನು ಕನ್ನಡ ಅವತರಣಿಕೆ ಪಡೆದುಕೊಳ್ಳುವುದು ಮಾತ್ರವಲ್ಲದೇ ಗಳಿಕೆಯಲ್ಲಿಯೂ ಸಹ ಸಾಧನೆ ಮಾಡಿದೆ. ಮೂರನೇ ದಿನಕ್ಕೆ ಆದಿಪುರುಷ್ ಕನ್ನಡ ಅವತರಣಿಕೆ ಆರ್ಆರ್ಆರ್ ಕನ್ನಡ ಅವತರಣಿಕೆಯ ಒಟ್ಟು ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಮೊದಲ ದಿನ 47 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಆದಿಪುರುಷ್ ಕನ್ನಡ ಅವತರಣಿಕೆ ಎರಡನೆ ದಿನ 58 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಹಾಗೂ ನಿನ್ನೆ ಭಾನುವಾರದ ರಜಾ ದಿನ 66 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಈ ಮೂಲಕ ಆದಿಪುರುಷ್ ಕನ್ನಡ ಅವತರಣಿಕೆ ಮೂರು ದಿನಗಳಲ್ಲಿ 1.71 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಒಟ್ಟು 1.68 ಕೋಟಿ ಗಳಿಕೆ ಮಾಡಿದ್ದ ಆರ್ ಆರ್ ಆರ್ ಕನ್ನಡ ಅವತರಣಿಕೆಯನ್ನು ಹಿಂದಿಕ್ಕಿದೆ. ಸದ್ಯ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಡಬಿಂಗ್ ಚಿತ್ರಗಳ ಪಟ್ಟಿಯಲ್ಲಿ ಆದಿಪುರುಷ್ ಎರಡನೇ ಸ್ಥಾನದಲ್ಲಿದ್ದು, 3.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿರುವ ಸೈರಾ ಕನ್ನಡ ಅವತರಣಿಕೆ ಅಗ್ರಸ್ಥಾನದಲ್ಲಿದೆ.


Click it and Unblock the Notifications











