ಕೆಜಿ ರಸ್ತೆಯಲ್ಲಿ ಆದಿಪುರುಷ್‌ಗೆ 2 ಚಿತ್ರಮಂದಿರ; ನರ್ತಕಿ, ಸಂತೋಷ್‌ನಲ್ಲಿ ಹಿಂದಿ, ತೆಲುಗು ಬಿಡುಗಡೆ!
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪ್ರಭಾಸ್ ಹಾಗೂ ಓಂ ರಾವತ್ ಕಾಂಬಿನೇಶನ್‌ನ ಆದಿಪುರುಷ್ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ಶುಕ್ರವಾರ ( ಜೂನ್ 16 ) ಬಿಡುಗಡೆಯಾಗಲಿದ್ದು, ಈ ಚಿತ್ರವನ್ನು ತೆರೆ ಮೇಲೆ ಮೊದಲ ದಿನ ಮೊದಲ ಪ್ರದರ್ಶನದಲ್ಲಿ ವೀಕ್ಷಿಸಲು ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕಾಯುತ್ತಿದ್ದಾರೆ.
ಚಿತ್ರ ಬಿಡುಗಡೆಗೆ ಐದಾರು ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಮುಂಗಡ ಬುಕಿಂಗ್ ಅನ್ನು ತೆರೆದಿದ್ದು ಪ್ರೇಕ್ಷಕರು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಇನ್ನು ಆದಿಪುರುಷ್ ಚಿತ್ರ ಮೂಲತಃ ಹಿಂದಿ ಸಿನಿಮಾವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಒಂದೇ ದಿನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

ಇನ್ನು ಎಲ್ಲಾ ಭಾಷೆಯ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಆದಿಪುರುಷ್ ಚಿತ್ರದ ಕನ್ನಡ ಅವತರಣಿಕೆ ಜೊತೆಗೆ ಹಿಂದಿ ಹಾಗೂ ತೆಲುಗು ಅವತರಣಿಕೆಗಳ ಪ್ರದರ್ಶನ ಸಹ ನಡೆಯಲಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ತೆಲುಗು ಹಾಗೂ ಹಿಂದಿ ಅವತರಣಿಕೆಗಳಿಗೆ ಕನ್ನಡಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನೂ ಸಹ ನೀಡಲಾಗಿದೆ. ಕನ್ನಡ ಅವತರಣಿಕೆಗಿಂತ ತೆಲುಗು ಹಾಗೂ ಹಿಂದಿ ಅತರಣಿಕೆಗಳ ಮುಂಗಡ ಬುಕಿಂಗ್ ಅನ್ನೇ ಮೊದಲು ಸಹ ತೆರೆಯಲಾಗಿತ್ತು.
ಈ ನಡೆ ಕನ್ನಡ ಸಿನಿ ರಸಿಕರಲ್ಲಿ ಹಾಗೂ ಕನ್ನಡ ಭಾಷಾ ಪ್ರೇಮಿಗಳಲ್ಲಿ ಬೇಸರ ಹಾಗೂ ಸಿಟ್ಟನ್ನು ತರಿಸಿತ್ತು. ಕರ್ನಾಟಕದಲ್ಲಿ ಪರಭಾಷೆಯೊಂದರ ಚಿತ್ರದ ಕನ್ನಡ ಅವತರಣಿಕೆಗಿಂತ ಹಿಂದಿ ಹಾಗೂ ತೆಲುಗು ಅವತರಣಿಕೆಗಳ ಪ್ರದರ್ಶನಗಳೇ ಹೆಚ್ಚಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದರು.
ರಾಜ್ಯದಲ್ಲಿ ಈ ಚಿತ್ರದ ಹಂಚಿಕೆಯನ್ನು ಕಾರ್ತಿಕ್ ಗೌಡ ಒಡೆತನದ ಕೆಆರ್‌ಜಿ ಸ್ಟುಡಿಯೊಸ್ ಮಾಡುತ್ತಿದ್ದು, ಕನ್ನಡಕ್ಕಿಂತ ಹಿಂದಿ ಹಾಗೂ ತೆಲುಗು ಪ್ರದರ್ಶನಗಳನ್ನು ಹೆಚ್ಚಾಗಿ ಆಯೋಜನೆ ಮಾಡಿದ ಕಾರಣಕ್ಕೆ ಪ್ರೇಕ್ಷಕರಿಂದ ತೀವ್ರ ಟೀಕೆಯನ್ನು ಎದುರಿಸಿತ್ತು. ಬಳಿಕ ಕನ್ನಡದ ಪ್ರದರ್ಶನಗಳನ್ನೂ ಸಹ ದೊಡ್ಡ ಸಂಖ್ಯೆಯಲ್ಲಿ ಆಯೋಜನೆ ಮಾಡುವುದಾಗಿ ಕಾರ್ತಿಕ್ ಗೌಡ ಆಶ್ವಾಸನೆ ನೀಡಿದ್ದರು.
ಹೀಗೆ ಪ್ರದರ್ಶನಗಳ ಸಂಖ್ಯೆಯ ವಿಚಾರಕ್ಕಾಗಿ ಟೀಕೆಗೆ ಒಳಗಾಗಿದ್ದ ಆದಿಪುರುಷ್ ಈಗ ಬೆಂಗಳೂರಿನ ಮುಖ್ಯ ಚಿತ್ರಮಂದಿರದ ಕುರಿತಾಗಿ ವಿವಾದಕ್ಕೊಳಗಾಗಿದೆ. ಹೌದು, ಬೆಂಗಳೂರಿನ ಕೆಜಿ ರಸ್ತೆಯ ಎರಡು ಪ್ರಮುಖ ಚಿತ್ರಮಂದಿರಗಳಾದ ನರ್ತಕಿ ಹಾಗೂ ಸಂತೋಷ್‌ನಲ್ಲಿ ಆದಿಪುರುಷ್ ಚಿತ್ರದ ಹಿಂದಿ ಹಾಗೂ ತೆಲುಗು ಭಾಷೆಯ ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವುದು ಇದೀಗ ಕನ್ನಡ ಸಿನಿ ರಸಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನರ್ತಕಿ ಚಿತ್ರಮಂದಿರದಲ್ಲಿ ಆದಿಪುರುಷ್ ಹಿಂದಿ 3D ಬಿಡುಗಡೆಯಾಗುತ್ತಿದ್ದರೆ, ಸಂತೋಷ್ ಚಿತ್ರಮಂದಿರದಲ್ಲಿ ತೆಲುಗು 2D ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಚಿತ್ರಮಂದಿರಗಳಲ್ಲಿ ಹಿಂದಿ ಹಾಗೂ ತೆಲುಗು ಅವತರಣಿಕೆಗಳ ಬುಕಿಂಗ್ ತೆರೆಯಲಾಗಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಲ್ಲಿ ಕನ್ನಡ ಅವತರಣಿಕೆಯ ಒಂದೇ ಒಂದು ಪ್ರದರ್ಶನವನ್ನು ಆಯೋಜಿಸದಿದ್ದರೂ ಹಿಂದಿ ಹಾಗೂ ತೆಲುಗು ಬಿಡುಗಡೆ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.


Click it and Unblock the Notifications











