ಇನ್ನು ಮುಂದೆ ಚಿತ್ರಮಂದಿರಗಳಲ್ಲಿ 'ಕಾಂತಾರ- 1' ನೋಡುವ ಪ್ರೇಕ್ಷಕರಿಗೆ ಗುಡ್ ನ್ಯೂಸ್!
ಬಾಕ್ಸಾಫೀಸ್‌ನಲ್ಲಿ 'ಕಾಂತಾರ- 1' ಗೆಲುವಿನ ಪಯಣ ಮುಂದುವರೆದಿದೆ. ಕಲೆಕ್ಷನ್ ಕೊಂಚ ಕಮ್ಮಿ ಆಗಿದ್ದರೂ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಲೇ ಇದೆ. ಶೀಘ್ರದಲ್ಲೇ ಇಂಗ್ಲೀಷ್ ಭಾಷೆಗೂ ಸಿನಿಮಾ ಡಬ್ ಆಗಿ ಬರಲಿದೆ. ಇದೆಲ್ಲದರ ನಡುವೆ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಈಗಾಗಲೇ ವಿಶ್ವದಾದ್ಯಂತ 'ಕಾಂತಾರ -1' ಸಿನಿಮಾ 800 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. 'ಛಾವ' ದಾಖಲೆ ಮುರಿದು ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಸಿನಿಮಾ ಪಾತ್ರವಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಉತ್ತರ ಭಾರತದಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಲಿಲ್ಲ. ಆದರೂ ಸಿನಿಮಾ ಪ್ರೇಕ್ಷಕರನ್ನು ರಂಜಿಸಿ ಗೆದ್ದಿದೆ.

'ಕಾಂತಾರ- 1' ಸಿನಿಮಾ ಬಿಡುಗಡೆಯಾದಾಗ ಟಿಕೆಟ್ ದರದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಕರ್ನಾಟಕದಲ್ಲಿ 200 ರೂ. ಟಿಕೆಟ್ ದರ ನಿಗದಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದು ಸಹಜವಾಗಿಯೇ ಸಿನಿಮಾ ಗಳಿಕೆಗೆ ವರವಾಗಿತ್ತು. ಬರೀ ಕರ್ನಾಟಕದಲ್ಲೇ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿದೆ. ಕೆಲವು ಭಾಗಗಳಲ್ಲಿ 'ಪುಷ್ಪ'-2, 'ಬಾಹುಬಲಿ'- 2 ಹಾಗೂ 'ಕೆಜಿಎಫ್'-2 ಸಿನಿಮಾ ದಾಖಲೆಗಳನ್ನು ಕೂಡ 'ಕಾಂತಾರ' ಪ್ರೀಕ್ವೆಲ್ ಹಿಂದಿಕ್ಕಿದೆ.
ಸದ್ಯ 'ಕಾಂತಾರ'-1 ಸಿನಿಮಾ ಟಿಕೆಟ್ ದರ ಕಮ್ಮಿ ಆಗಿದೆ. ಈಗಾಗಲೇ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಟಿಕೆಟ್ ದರ ಕಮ್ಮಿ ಆಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಸೋಮವಾರ(ಅಕ್ಟೋಬರ್ 27) ದಿಂದ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಟಿಕೆಟ್ ದರ ಕಡಿತವಾಗುತ್ತಿದೆ. ಹಾಗಾಗಿ ಪ್ರೇಕ್ಷಕರು ಮತ್ತೆ ತೆರೆಮೇಲೆ ಸಿನಿಮಾ ನೋಡಿ ಎಂಜಾಯ್ ಮಾಡಲು ಮನಸ್ಸು ಮಾಡಬಹುದು.

3 ವಾರಗಳ ಬಳಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಗಣನೀಯವಾಗಿ ಕಮ್ಮಿ ಆಗಿದೆ. ಬೇರೆ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿಲ್ಲ. ಹಾಗಾಗಿ ಇನ್ನು ಕ್ರೇಜ್ ಉಳಿಸಿಕೊಂಡಿರುವ 'ಕಾಂತಾರ- 1' ಚಿತ್ರವನ್ನು ಸಾಕಷ್ಟು ಕಡೆಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ 500ಕ್ಕೂ ಅಧಿಕ ಕನ್ನಡ, 80ಕ್ಕೂ ಅಧಿಕ ಹಿಂದಿ, 20ಕ್ಕೂ ಹೆಚ್ಚು ತಮಿಳು ಹಾಗೂ 15ಕ್ಕೂ ಅಧಿಕ ತೆಲುಗು ಶೋಗಳಲ್ಲಿ ಸಿನಿಮಾ ನೋಡಬಹುದು.
ಇದೀಗ 'ಕಾಂತಾರ'- 1 ಸಿನಿಮಾ 25ನೇ ದಿನಕ್ಕೆ ಕಾಲಿಟ್ಟಿದೆ. ಶೀಘ್ರದಲ್ಲೇ ಸಿನಿಮಾ ಓಟಿಟಿಗೆ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಪ್ರೇಕ್ಷಕರು ದೊಡ್ಡಪರದೆಯಲ್ಲೇ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಟಿಕೆಟ್ ದರ ಕಮ್ಮಿ ಆಗಿರುವುದು ಮತ್ತಷ್ಟು ಜನರನ್ನು ಚಿತ್ರಮಂದಿರಗಳಿಗೆ ಸೆಳೆಯಬಹುದು. ಈಗಾಗಲೇ ಸಿನಿಮಾ ನೋಡಿರುವವರು ಮತ್ತೊಮ್ಮೆ ಚಿತ್ರಮಂದಿರಕ್ಕೆ ಬರಬಹುದು.
ಸಿಂಗಲ್ ಸ್ಕ್ರೀನ್‌ಗಳಲ್ಲಿ 120 ರೂ.ಗೆ ಸಿಲ್ವರ್ ಹಾಗೂ 150 ರೂ.ಗೆ ಗೋಲ್ಡ್ ಕ್ಲಾಸ್ ಟಿಕೆಟ್ ದರ ಈಗ ನೋಡಬಹುದು. ಸಿನಿಮಾ ಬಿಡುಗಡೆಯಾಗಿದ್ದಾಗ ಕ್ರೇಜ್‌ಗೆ ತಕ್ಕಂತೆ ದರ ಹೆಚ್ಚಿಸಲಾಗಿತ್ತು. ಒಂದು ವಾರದ ಬಳಿಕ ಕೊಂಚ ಕಮ್ಮಿ ಆಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಕಾಂತಾರ- 1' ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆಯಿತ್ತು. ಇಂಗ್ಲೀಷ್ ಭಾಷೆಗೆ ಡಬ್ ಆಗಿ ಆ ಗುರಿ ತಲುಪುತ್ತಾ? ಎನ್ನುವ ಚರ್ಚೆ ಶುರುವಾಗಿದೆ.
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಬಗ್ಗೆ ಸಿನಿಮಾ ನೋಡಿದವರು ಮೆಚ್ಚುಗೆ ಸೂಚಿಸುತ್ತಲೇ ಇದ್ದಾರೆ. ಇತ್ತೀಚೆಗೆ ತೆಲುಗು ನಟ ಅಲ್ಲು ಅರ್ಜುನ್ ಸಹ ಸಿನಿಮಾ ನೋಡಿ ಕೊಂಡಾಡಿದ್ದಾರೆ.


Click it and Unblock the Notifications











