New Year 2025 ; ಹೊಸ ವರ್ಷದ ಮೊದಲನೇ ದಿನವೇ ಚಿತ್ರರಂಗಕ್ಕೆ ರೀ ಎಂಟ್ರಿ ನೀಡಿದ ದರ್ಶನ್..?
ದರ್ಶನ್ ಅವರಂತಹ ನಂಬರ್ 1 ಹೀರೋ ಸುಮ್ಮನೆ ಕೂತರೆ ಅವರಿಗೆ ಮಾತ್ರ ಅಲ್ಲ ಇಡೀ ಚಿತ್ರರಂಗಕ್ಕೆ ನಷ್ಟ ಗ್ಯಾರೆಂಟಿ. ಯಾಕೆಂದರೆ ವರ್ಷಕ್ಕೆ ಎರಡು ಚಿತ್ರಗಳನ್ನು ಕಡ್ಡಾಯವಾಗಿ ಮಾಡುತ್ತಾ ಬಂದವರು ದರ್ಶನ್. ಆದರೆ ಕಳೆದ ವರ್ಷ ದುರಾದೃಷ್ಟ ಬೆನ್ನು ಹತ್ತಿತ್ತು. ಅ'ಪವಿತ್ರ' ಸಂಬಂಧ ಸೆರೆವಾಸ ಅನುಭವಿಸುವಂತೆ ಮಾಡಿತ್ತು.
ಇನ್ನು ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಜೈಲು ಪಾಲಾಗುವ ಮುನ್ನ ಡೆವಿಲ್ ಎಂಬ ಚಿತ್ರವನ್ನು ಶುರು ಮಾಡಿದ್ದರು. ಮಿಲನಾ ಪ್ರಕಾಶ್ ಈ ಚಿತ್ರದ ನಿರ್ದೇಶಕರು. ಆರಂಭದಿಂದ ಕುತೂಹಲವನ್ನು ಕೆರಳಿಸುತ್ತಾನೇ ಬಂದ ಈ ಚಿತ್ರದ ಚಿತ್ರೀಕರಣ ಶುರುವಾದಾಗ ದರ್ಶನ್ ಅಭಿಮಾನಿಗಳು ರಣಕೇಕೆ ಹಾಕಿದ್ದರು. ಚಿಕ್ಕ ತುಣುಕು ನೋಡಿ ಸಂಭ್ರಮಿಸಿದ್ದರು.

ಆದರೆ, ಅದ್ಯಾರ ಕಣ್ಣು ಬಿತ್ತೋ, ದರ್ಶನ್ ಜೈಲು ಸೇರಿದರು. ಈ ಕಾರಣಕ್ಕೆ ಡೆವಿಲ್ ಅಡ್ಡಕತ್ತರಿಯಲ್ಲಿ ಸಿಲುಕಿತ್ತು. ಮಿಲನಾ ಪ್ರಕಾಶ್ ಮತ್ತು ತಂಡದ ಮುಖದಲ್ಲಿ ಚಿಂತೆಯ ಗೆರೆ ಮೂಡಿತ್ತು.ಆದರೀಗ ದರ್ಶನ್ ಹೊರ ಬಂದಿದ್ದಾರೆ. ಇನ್ನೂ ಸ್ವಲ್ಪ ಚೇತರಿಸಿಕೊಂಡ ನಂತರ ಯಾವ ಕ್ಷಣದಲ್ಲಾದರೂ ದರ್ಶನ್ ಡೆವಿಲ್ ಅಖಾಡಕ್ಕೆ ಧುಮುಕಬಹುದು. ಚಿತ್ರೀಕರಣವನ್ನು ಶುರು ಮಾಡಬಹದು.
ಆ ಕಾಲ ಯಾವತ್ತು ಬರುತ್ತೆ ಎನ್ನುವುದು ಸದ್ಯ ಗೊತ್ತಿಲ್ಲವಾದರೂ ಡೆವಿಲ್ ಚಿತ್ರದ ಡಬ್ಬಿಂಗ್ ಕೆಲಸವನ್ನು ದರ್ಶನ್ ಇಂದು ಶುರು ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಚಾಲ್ತಿಯಲ್ಲಿದೆ. ಹೌದು, ಅಸಲಿಗೆ ದರ್ಶನ್ ಜೈಲು ಸೇರುವ ಮುನ್ನ ಡೆವಿಲ್ ಚಿತ್ರದ ಶೇಕಡಾ 50% ಭಾಗದ ಚಿತ್ರೀಕರಣವನ್ನು ಮುಗಿಸಿದ್ದರು.
ಇನ್ನು ಹಿಂದೊಮ್ಮೆ ದರ್ಶನ್ ಅವರು ಖುದ್ದು ಹೇಳಿಕೊಂಡಂತೆ ಹೊಸ ವರುಷದಂದು ಅವರಿಗೆ ಖಾಲಿ ಕುಳಿತುಕೊಳ್ಳುವುದು ಇಷ್ಟ ಇಲ್ಲ. ಚಿತ್ರಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ಕೆಲಸವನ್ನು ಹೊಸ ವರ್ಷದ ಮೊದಲ ದಿನ ಮಾಡಿಕೊಂಡು ಬರುವ ಸಂಪ್ರದಾಯವನ್ನು ದರ್ಶನ್ ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ಬೆನ್ನು ನೋವು ಚಿತ್ರೀಕರಣಕ್ಕೆ ತೆರಳದಂತೆ ಇವರನ್ನು ತಡೆ ಹಿಡಿದಿದೆ. ಹೀಗಾಗಿಯೇ ಇಲ್ಲಿಯವರೆಗೆ ಚಿತ್ರೀಕರಣಗೊಂಡ ತಮ್ಮ ಭಾಗಕ್ಕೆ ದರ್ಶನ್ ಇಂದು ತಮ್ಮ ಧ್ವನಿಯನ್ನು ನೀಡುತ್ತಿದ್ದಾರೆ. ಚಿತ್ರದ ಡಬ್ಬಿಂಗ್ ಕೆಲಸಕ್ಕೆ ಚಾಲನೆ ನೀಡಿದ್ದಾರೆ ಎನ್ನುವ ಮಾತು ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಇನ್ನುಳಿದಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ.. ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಒಟ್ನಲ್ಲಿ ಸದ್ಯ ದರ್ಶನ್ ತಮ್ಮ ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ಈ ಜನವರಿ 20ರ ನಂತರ ಸದ್ದಿಲ್ಲದೇ ಮರು ಚಾಲನೆ ನೀಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇನ್ನೂ ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ದರ್ಶನ್ ಫೆಬ್ರವರಿಯ ನಂತರವಷ್ಟೇ ಡೆವಿಲ್ ಅವತಾರವನ್ನು ಎತ್ತಲಿದ್ದಾರೆ. ಈಗಾಗಲೇ ಈ ಕುರಿತು ಚಿತ್ರತಂಡದ ಜೊತೆ ದರ್ಶನ್ ಚರ್ಚೆಯನ್ನು ಕೂಡ ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದ್ದು ಫೆಬ್ರವರಿ ಹದಿನಾರರಂದು ದರ್ಶನ್ ಬರ್ತ್‌ಡೇ ಪ್ರಯುಕ್ತ ಡೆವಿಲ್ ಚಿತ್ರದ ಕುರಿತು ಬ್ರೇಕಿಂಗ್ ನ್ಯೂಸ್ ಹೊರ ಬೀಳುವ ಸಾಧ್ಯತೆ ಇದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.


Click it and Unblock the Notifications











