ದರ್ಶನ್ ಬಂಧನದ ಬಳಿಕ ಯಾವ್ಯಾವ ಟೈಟಲ್‌ಗೆ ಹೆಚ್ಚಾಯ್ತು ಬೇಡಿಕೆ? ಸಿನಿಮಾ ಮಂದಿಯ ಫೇವರಿಟ್ ಯಾವುದು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೇ ಜುಲೈ 4ರಂದು ದರ್ಶನ್ ಹಾಗೂ ಸಹಚರರ ನ್ಯಾಯಾಂಗ ಅವಧಿ ಮುಕ್ತಾಯ ಆಗಲಿದೆ. ಇನ್ನು ಮೂರು ದಿನಗಳಲ್ಲಿ ದರ್ಶನ್ ಹಾಗೂ ಸಂಗಡಿಗರಿಗೆ ಜಾಮೀನು ಸಿಗುತ್ತಾ? ಅಂತ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಜೈಲಿನಲ್ಲಿರುವ ದರ್ಶನ್‌ರನ್ನು ಚಿತ್ರರಂಗದ ತಾರೆಯರು ಹಾಗೂ ಸಂಬಂಧಿಗಳು ಭೇಟಿ ಮಾಡುತ್ತಿದ್ದಾರೆ. ರಕ್ಷಿತಾ, ಪ್ರೇಮ್, ವಿನೋದ್ ರಾಜ್ ಸೇರಿದಂತೆ ಹಲವರು ಭೇಟಿ ಮಾಡಿದ್ದಾರೆ. ಹಾಗೇ ಪತ್ನಿ ವಿಜಯಲಕ್ಷ್ಮಿ , ಪುತ್ರ ವಿನೀಶ್ ಕೂಡ ಭೇಟಿ ಮಾಡಿದ್ದರು. ಇಂದು (ಜುಲೈ 1) ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸಹೋದರ ದಿನಕರ್ ತೂಗುದೀಪ ಕೂಡ ಭೇಟಿ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಭವಿಷ್ಯ ಏನಾಗುತ್ತೋ ಅನ್ನು ಆತಂಕದಲ್ಲಿ ಚಿತ್ರರಂಗವಿದೆ. ಅದೇ ಇನ್ನೊಂದು ಕಡೆ ಸಿನಿಮಾ ಮಂದಿ ಟೈಟಲ್ ರಿಜಿಸ್ಟರ್ ಮಾಡಿಸುವುದಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಚಿತ್ರ ವಿಚಿತ್ರವಾದ ಟೈಟಲ್ ಅನ್ನು ಇಟ್ಕೊಂಡು ಫಿಲ್ಮ್ ಚೇಂಬರ್‌ಗೆ ಬರುತ್ತಿದ್ದಾರೆ ಎನ್ನಲಾಗಿದೆ. ಇದು ಫಿಲ್ಮ್ ಚೇಂಬರ್ ದೊಡ್ಡ ತಲೆ ನೋವಾಗಿದೆ ಎನ್ನಲಾಗಿದೆ.
ಈಗಾಗಲೇ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಟೈಟಲ್‌ಗಳನ್ನು ನೊಂದಣಿ ಮಾಡುವುದಕ್ಕೆ ಯತ ಪ್ರಯತ್ನಗಳು ನಡೆಯುತ್ತಿವೆಯಂತೆ. ಆದರೆ, ಫಿಲ್ಮ್ ಚೇಂಬರ್ ಮಾತ್ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಟೈಟಲ್ ಅನ್ನೂ ನೀಡದೇ ಇರುವುದಕ್ಕೆ ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ, ಟೈಟಲ್‌ಗಳ ವಿಚಾರದಲ್ಲಿ ಚೇಂಬರ್‌ಗೆ ಟೆನ್ಷನ್ ಶುರುವಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಹಾಗಿದ್ದರೆ ಸಿನಿಮಾ ಮಂದಿಗೆ ಫೇವರಿಟ್ ಟೈಟಲ್ ಯಾವುದು? ತಿಳಿಯಲು ಮುಂದೆ ಓದಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಾಗಲೇ ಕೆಲವು ಟೈಟಲ್‌ಗಳನ್ನು ನೊಂದಣಿ ಮಾಡುವುದಕ್ಕೆ ಕೆಲವರು ಮುಗಿಬಿದ್ದರು. ನ್ಯೂಸ್ ಚಾನೆಲ್‌ಗಳು ವಿಭಿನ್ನವಾದ ಟೈಟಲ್‌ಗಳನ್ನು ಇಟ್ಟು ಕಾರ್ಯಕ್ರಮಗಳನ್ನು ಮಾಡುತ್ತಿವೆ. ಅದನ್ನೇ ಪ್ರೇರಣೆಯಾಗಿಟ್ಟುಕೊಂಡು ಸಿನಿಮಾದ ಟೈಟಲ್ ಅನ್ನು ರಿಜಿಸ್ಟರ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಆದರೆ, ಇಂತಹ ಟೈಟಲ್‌ಗಳನ್ನು ನಿರಾಕರಣೆ ಮಾಡಿತ್ತಿದೆ ಎನ್ನಲಾಗಿದೆ.
ಸದ್ಯ ಬಹು ಬೇಡಿಕೆಯ ಟೈಟಲ್ 'ಡಿ ಗ್ಯಾಂಗ್' ಅಂತ ಆಪ್ತ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಇದರೊಂದಿಗೆ 'ಪಟ್ಟಣಗೆರೆ ಶೆಡ್', 'ಕೈದಿ ನಂ 6106', ಸೇರಿದಂತೆ ಹಲವು ಟೈಟಲ್‌ಗಳು ಬೇಡಿಕೆಯಲ್ಲಿ ಇವೆಯೆಂದು ಹೇಳಲಾಗಿದೆ. ದರ್ಶನ್‌ರನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಡಿ ಬಾಸ್‌ನಿಂದ ಪ್ರೇರಣೆ ಹೊಂದು 'ಡಿ ಗ್ಯಾಂಗ್' ಅನ್ನೋ ಟೈಟಲ್‌ಗೆ ಬೇಡಿಕೆ ಇಡಲಾಗಿದೆ. ಅಷ್ಟೇ ಅಲ್ಲದೆ, ಸಾಕಷ್ಟು ನ್ಯೂಸ್ ಚಾನೆಲ್‌ಗಳು ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಈ ಶೀರ್ಷಿಕೆಯನ್ನು ಬಳಸಿದೆ.
ಇನ್ನು ರೇಣುಕಾಸ್ವಾಮಿ ಹತ್ಯೆಯಾದ ಸ್ಥಳ ಪಟ್ಟಣಗೆರೆ ಶೆಡ್ ಕೂಡ ಸಾಕಷ್ಟು ಬಳಕೆಯಾಗಿತ್ತು. ಸದ್ಯ ಶೆಡ್ ಅನ್ನುವ ಪದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇನ್ನು 'ಕೈದಿ ನಂ 6106' ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಟ್ಟಿರುವ ಕೈದಿ ಸಂಖ್ಯೆ. ಇದನ್ನು ಅವರ ಹುಚ್ಚು ಅಭಿಮಾನಿಗಳು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಬೈಕ್ ಕಾರಿನ ಮೇಲೆ ಅಂಟಿಸಿಕೊಳ್ಳುತ್ತಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಟೈಟಲ್ ಕೂಡ ಬೇಡಿಕೆಯಲ್ಲಿದೆ ಎನ್ನಲಾಗಿದೆ.


Click it and Unblock the Notifications











